ಬಡವರ ಅನ್ನಕ್ಕೆ ನಿರಂತರ ಕನ್ನ: ಮೂರೂವರೆ ವರ್ಷದಲ್ಲಿ ₹4 ಕೋಟಿ ಧಾನ್ಯ ಜಪ್ತಿ

ಬಡವರ ಅನ್ನಕ್ಕೆ ನಿರಂತರ ಕನ್ನ: ಮೂರೂವರೆ ವರ್ಷದಲ್ಲಿ ₹4 ಕೋಟಿ ಧಾನ್ಯ ಜಪ್ತಿ

ಬಡವರ ಅನ್ನಕ್ಕೆ ನಿರಂತರ ಕನ್ನ: ಮೂರೂವರೆ ವರ್ಷದಲ್ಲಿ ₹4 ಕೋಟಿ ಧಾನ್ಯ ಜಪ್ತಿ

ಕಲಬುರಗಿ: ಪಡಿತರ ಅಕ್ಕಿ ಬಡವರ ಪಾಲಿನ ಅನ್ನ. ಆದರೆ, ಹಸಿದವರ ತಟ್ಟೆ ಸೇರಬೇಕಿದ್ದ ‘ಅನ್ನ’ಕ್ಕೆ ಕನ್ನ ಹಾಕುವ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇವೆ.

ಪಡಿತರ ಧಾನ್ಯಗಳ ಅಕ್ರಮ ಖರೀದಿ, ಮಾರಾಟ, ಸಾಗಣೆಗೆ ಸಂಬಂಧಿಸಿದಂತೆ 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ 20ರವರೆಗೂ ಜಿಲ್ಲೆಯಲ್ಲಿ 43 ಪ್ರಕರಣಗಳು ದಾಖಲಾಗಿವೆ. ಪಡಿತರ ಧಾನ್ಯಗಳು ಸೇರಿದಂತೆ ಬರೋಬ್ಬರಿ ₹1.34 ಕೋಟಿ ಮೊತ್ತದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ಅವಧಿಯಲ್ಲಿ 16.15 ಟನ್‌ ಪಡಿತರ ಅಕ್ಕಿ, 3.75 ಕ್ವಿಂಟಲ್‌ ಪಡಿತರ ಜೋಳವನ್ನು ಆಹಾರ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದರ ಒಟ್ಟು ಮೌಲ್ಯ ₹55.74 ಲಕ್ಷ. ಈ ಸಂಬಂಧ 63 ಆರೋಪಿಗಳ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಅಗತ್ಯ ವಸ್ತುಗಳ ಕಾಯ್ದೆ–1955ರಡಿ ಪ್ರಕರಣ ದಾಖಲಾಗಿವೆ.

ಅಲ್ಲದೇ, ಪಡಿತರ ಧಾನ್ಯಗಳ ಅಕ್ರಮ ಸಾಗಣೆಗೆ ಬಳಸಿದ 25 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಒಟ್ಟು ಮೌಲ್ಯ ₹78.05 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಳಸಂತೆಯಲ್ಲಿ ಮಾರುವ ಉದ್ದೇಶಕ್ಕಾಗಿ ಪಡಿತರ ಧಾನ್ಯಗಳ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ 2025–26ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 81 ಪ್ರಕರಣಗಳು ದಾಖಲಾಗಿದ್ದವು. 4,154 ಕ್ವಿಂಟಲ್‌ ಪಡಿತರ ಅಕ್ಕಿ, 16.93 ಕ್ವಿಂಟಲ್ ಪಡಿತರ ಜೋಳ ಜಪ್ತಿ ಮಾಡಲಾಗಿತ್ತು. ಅದರ ಮೌಲ್ಯ ಒಟ್ಟು ₹1.44 ಕೋಟಿ. ಅಲ್ಲದೇ ₹2.02 ಕೋಟಿ ಮೊತ್ತದ 63 ವಾಹನಗಳನ್ನೂ ವಶಕ್ಕೆ ಪಡೆಯುವ ಜೊತೆಗೆ 139 ಆರೋಪಿಗಳ ವಿರುದ್ಧ ಪ್ರಕರಣಗಳನ್ನೂ ದಾಖಲಿಸಲಾಗಿತ್ತು.

2024–2025ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 45 ಪ್ರಕರಣಗಳು ವರದಿಯಾಗಿದ್ದವು. ಆಗ 3,193 ಕ್ವಿಂಟಲ್ ಪಡಿತರ ಅಕ್ಕಿ, 295 ಕ್ವಿಂಟಲ್‌ ಪಡಿತರ ಗೋಧಿ, 268 ಕ್ವಿಂಟಲ್‌ ಪಡಿತರ ಜೋಳ ಜಪ್ತಿ ಮಾಡಲಾಗಿತ್ತು. ಅದರ ಒಟ್ಟು ಮೌಲ್ಯ ₹1.49 ಕೋಟಿ. ಆ ಅವಧಿಯಲ್ಲಿ ₹89.35 ಲಕ್ಷ ಮೌಲ್ಯದ 26 ವಾಹನಗಳನ್ನೂ ವಶಕ್ಕೆ ಪಡೆಯಲಾಗಿತ್ತು. 88 ಆರೋಪಿಗಳ ವಿರುದ್ಧ ಕಾನೂನು ಕ್ರಮವನ್ನೂ ಜರುಗಿಸಲಾಗಿತ್ತು.

ಇನ್ನು, 2023–2024ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ‍ಕಾಳಸಂತೆಯಲ್ಲಿ ಪಡಿತರ ಧಾನ್ಯಗಳ ಮಾರಾಟಕ್ಕೆ ಸಂಬಂಧಿಸಿದಂತೆ 44 ಪ್ರಕರಣಗಳು ವರದಿಯಾಗಿದ್ದವು. ಆಗ 1,621 ಕ್ವಿಂಟಲ್ ಅಕ್ಕಿ, 59 ಕ್ವಿಂಟಲ್ ಗೋಧಿ ಹಾಗೂ 22 ಕ್ವಿಂಟಲ್ ಜೋಳ ಜಪ್ತಿ ಮಾಡಲಾಗಿತ್ತು.

‘ಸಾರ್ವಜನಿಕರಿಂದ ಕಡಿಮೆ ಹಣಕ್ಕೆ ಪಡಿತರ ಅಕ್ಕಿ ಸಂಗ್ರಹಿಸುವ ದಂಧೆಕೋರರು ಅದನ್ನು ಮಿಲ್‌ಗಳು, ಹೋಟೆಲ್‌ಗಳು ಹಾಗೂ ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾರುತ್ತಿದ್ದಾರೆ. ಇದೊಂದು ಸಂಘಟಿತ ಜಾಲ. ಫಲಾನುಭವಿಗಳ ಪಾತ್ರವೂ ಇದರಲ್ಲಿ ಅಲ್ಲಗಳೆಯಲಾಗದು. ಇಂಥ ಪ್ರಕರಣಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿದರೂ, ಅವರು ಮತ್ತೆ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಾರೆ. ಮತ್ತೆ ಅಂಥ ಚಟುವಟಿಕೆಗಳಲ್ಲಿ ತೊಡಗುತ್ತಾರೆ’ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಅಕ್ರಮಕ್ಕಿವೆ ಎರಡು ಮುಖಗಳು...’

‘ಪಡಿತರ ಅಕ್ಕಿ ಅಕ್ರಮವು ಎರಡು ಅಲಗಿನ ಖಡ್ಗದಂತೆ. ಒಂದೆಡೆ ಪ್ರತಿ ವ್ಯಕ್ತಿಗೆ ಸರ್ಕಾರ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಕೊಡುತ್ತಿದೆ. ಜೋಳ ಕೊಟ್ಟರೂ ಅದು ವರ್ಷದ ನಾಲ್ಕೈದು ತಿಂಗಳಿಗೆ ಸೀಮಿತ. ಆಗಲೂ ಒಬ್ಬರಿಗೆ 3 ಕೆ.ಜಿ ಜೋಳ, 7 ಕೆ.ಜಿ ಅಕ್ಕಿ ಹಂಚಿಕೆಯಾಗುತ್ತದೆ. ಈ ಭಾಗದಲ್ಲಿ ಅಷ್ಟೊಂದು ಪ್ರಮಾಣದ ಅಕ್ಕಿ ಆಹಾರವಾಗಿ ಬಳಸುವುದೇ ಅಪರೂಪ. ಹೀಗಾಗಿ ಫಲಾನುಭವಿಗಳೇ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿ, ಅಗತ್ಯ ದಿನಸಿ ಖರೀದಿಸುತ್ತಾರೆ. ಮತ್ತೊಂದೆಡೆ, ಮಧ್ಯವರ್ತಿಗಳು ತಮ್ಮ ಲಾಭಕ್ಕಾಗಿ ಬಡವರ ಮನೆ–ಮನೆಗಳಿಗೆ ಹೋಗಿ ಬಿಡಿಗಾಸು ಕೊಟ್ಟು ಪಡಿತರ ಅಕ್ಕಿ ಖರೀದಿಸಿ ತರುತ್ತಾರೆ. ಅದನ್ನು ಪಾಲಿಶ್‌ ಘಟಕಗಳಿಗೆ ಮಾರಿ ದೊಡ್ಡ ಲಾಭ ಪಡೆಯುತ್ತದೆ’ ಎಂದು ಆಹಾರ ಇಲಾಖೆಯ ಮೂಲಗಳು ಹೇಳುತ್ತವೆ.

‘ಕಾಳಸಂತೆಯಲ್ಲಿ ಧಾನ್ಯಗಳ ಅಕ್ರಮ ತಡೆಗೆ ರಾಜ್ಯ ಸರ್ಕಾರ ಘೋಷಿಸಿರುವ ಇಂದಿರಾ ಕಿಟ್‌ ತಡೆಯೊಡ್ಡಬಲ್ಲದು. ಕಿಟ್‌ನಲ್ಲಿ ಈಗಿನ 10 ಕೆ.ಜಿ. ಅಕ್ಕಿ ಬದಲು 5 ಕೆ.ಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ, 1 ಕೆ.ಜಿ ಸಕ್ಕರೆ, 1 ಕೆ.ಜಿ ಉಪ್ಪು ಹಾಗೂ 1 ಲೀಟರ್‌ ಅಡುಗೆ ಎಣ್ಣೆ ನೀಡುವ ಪ್ರಸ್ತಾಪವಿದೆ. ಆದರೆ, ಆ ಯೋಜನೆಯ ಅನುಷ್ಠಾನವೇ ನನೆಗುದಿಗೆ ಬಿದ್ದಿದೆ’ ಎಂಬುದು ಮೂಲಗಳ ಅಭಿಮತ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ