ಕೈಕೊಟ್ಟ ಮಳೆ | ಬಾಡಿದ ತೊಗರಿ, ಹತ್ತಿ ಬೆಳೆ: ರೈತರಲ್ಲಿ ತೀವ್ರ ಆತಂಕ

ಕೈಕೊಟ್ಟ ಮಳೆ | ಬಾಡಿದ ತೊಗರಿ, ಹತ್ತಿ ಬೆಳೆ: ರೈತರಲ್ಲಿ ತೀವ್ರ ಆತಂಕ

ಕೈಕೊಟ್ಟ ಮಳೆ | ಬಾಡಿದ ತೊಗರಿ, ಹತ್ತಿ ಬೆಳೆ: ರೈತರಲ್ಲಿ ತೀವ್ರ ಆತಂಕ

ಜೇವರ್ಗಿ: ಮುಂಗಾರಿನ ಅಪಾರ ನಿರೀಕ್ಷೆಯೊಂದಿಗೆ ಅರೆಹಸಿ ನೆಲದಲ್ಲೇ ಬಿತ್ತನೆ ಮಾಡಿದ್ದ ಈ ಭಾಗದ ರೈತರಿಗೆ ಇದೀಗ ತೀವ್ರ ಆಘಾತ ಉಂಟಾಗಿದೆ. ಅಲ್ಪ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದ್ದ ಬೆಳೆ ಬಾಡುತ್ತಿದ್ದು, ರೈತರನ್ನು ಸಂಕಷ್ಟಕ್ಕೆ ದೂಡಿದೆ.

ತಾಲ್ಲೂಕಿನ ಕೋಳಕೂರ, ಹರವಾಳ, ಮಂದೇವಾಲ, ಜೇರಟಗಿ, ಅಂಕಲಗಿ, ಗಂವ್ಹಾರ, ಆಂದೋಲಾ, ನರಿಬೋಳ, ಕೆಲ್ಲೂರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮಳೆಯಾಗದೆ ಬೆಳೆಗಳು ಒಣಗುತ್ತಿವೆ. ಕೆಲವು ಭಾಗಗಳಲ್ಲಿ ತೇವಾಂಶವಿಲ್ಲದೆ ಮೊಳಕೆಯೊಡೆದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿರುವುರಿಂದ ಬೆಳೆಗಳನ್ನು ನಾಶ ಮಾಡಲು ರೈತರು ಗಟ್ಟಿ ನಿರ್ಧಾರ ಮಾಡುತ್ತಿದ್ದಾರೆ.

ಹೂ, ಕಾಯಿ ಕಟ್ಟುವ ಹಂತದಲ್ಲಿದ್ದಾಗ ಬೆಳೆಗಳಿಗೆ ಮಳೆಯ ಅವಶ್ಯಕತೆ ತುಂಬಾ ಇತ್ತು. ಸಕಾಲಕ್ಕೆ ಮಳೆ ಬಾರದ ಕಾರಣಕ್ಕೆ ಬೆಳೆದು ನಿಂತ ಹತ್ತಿ ತೊಗರಿ ಬೆಳೆಗಳು ಸೂರ್ಯನ ಪ್ರಖರತೆಗೆ ಬಾಡುತ್ತಿವೆ. ಮೊಳಕೆಯೊಡೆದ ಬೆಳೆಗಳಿಗೆ ಸಮೀಪದ ಹಳ್ಳಗಳಿಂದ, ಕೆಲವೆಡೆ ಕೊಳವೆಬಾವಿಯಿಂದ ನೀರು ಹಾಯಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಕೊಳವೆಬಾವಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿರುವುದು ರೈತರನ್ನು ಚಿಂತೆಗೀಡುಮಾಡಿದೆ.

ಸಾಂಪ್ರದಾಯಿಕ ನೀರಾವರಿ ಸಾಧ್ಯವಾಗದ ಕಡೆಗಳಲ್ಲಿ ಸ್ಪ್ರಿಂಕ್ಲರ್(ತುಂತುರು ನೀರಾವರಿ) ಪೈಪ್‌ಗಳನ್ನು ಬಾಡಿಗೆಗೆ ತಂದು ಅಥವಾ ಇದ್ದ ಹಳೆ ಪೈಪ್‌ಗಳನ್ನು ಜೋಡಿಸಿ ಬೆಳೆಗಳಿಗೆ ಜೀವದಾನ ಮಾಡಲು ಶ್ರಮಿಸುತ್ತಿದ್ದಾರೆ. ಆದರೆ, ಈ ತಾತ್ಕಾಲಿಕ ಉಪಾಯಕ್ಕೂ ಈಗ ಪ್ರಕೃತಿ ಸಾಥ್ ನೀಡುತ್ತಿಲ್ಲ. ತುಂತುರು ನೀರಾವರಿ ಪದ್ಧತಿ ಬಳಸಬೇಕಾದರೂ ಕನಿಷ್ಠ ನೀರಿನ ಆಸರೆ ಇರಬೇಕು. ಆದರೆ, ಹೆಚ್ಚುಕಮ್ಮಿ ಬಹುತೇಕ ಹಲವು ಕಡೆ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿತ ಕಾಣುತ್ತಿದೆ ಎನ್ನುತ್ತಾರೆ ರೈತರು.

ಹಲವು ಕಡೆ ಕೃಷಿ ಬಾವಿಗಳು, ಬೋರ್‌ವೆಲ್‌ಗಳಲ್ಲಿ ನೀರಿನ ಒತ್ತಡ ಕಡಿಮೆಯಾಗುತ್ತಿದ್ದು, ಇದರಿಂದಾಗಿ ಕಣ್ಣೆದುರೇ ಬೆಳೆ ಒಣಗುತ್ತಿದ್ದರೂ ನೀರುಣಿಸಲು ಸಾಧ್ಯವಾಗದ ಅಸಹಾಯಕ ಸ್ಥಿತಿಯಲ್ಲಿ ರೈತರಿದ್ದಾರೆ. ಇದು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಅಭಾವಕ್ಕೂ ಮುನ್ನುಡಿ ಬರೆದಿದೆ ಎನ್ನಬಹುದು.

ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಬೋರ್‌ವೆಲ್ ಆಶ್ರಯಿಸಿದ್ದು, ಅಂತರ್ಜಲ ಮಟ್ಟ ಕುಸಿತ ಹಾಗೂ ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಕೊರತೆಯ ಭೀತಿಯಲ್ಲಿದೆ. ಬರುವ ಕೆಲವೇ ದಿನಗಳಲ್ಲಿ ಜನತೆ ಕುಡಿಯುವ ನೀರಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಲಿದೆ.

ಮಳೆಗಾಗಿ ರೈತರು ನಿತ್ಯ ವರುಣನ ಸ್ಮರಣೆ ಮಾಡುತ್ತಿದ್ದಾರೆ. ಮಠ-ಮಂದಿರಗಳಲ್ಲಿ ಭಜನೆ ಹಾಗೂ ಮಸೀದಿ, ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ. ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಸಾಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತನೆ ಮಾಡಿದ್ದ ರೈತರಿಗೆ ಮಳೆಯ ಕೊರತೆ ಗಾಯದ ಮೇಲೆ ಬರೆ ಎಳೆದಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ