
ಶೇ 80ರಷ್ಟು ಡ್ರಗ್ಸ್ ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಬರುತ್ತಿದೆ: ಕೇಜ್ರಿವಾಲ್
ನವದೆಹಲಿ: ಪಂಜಾಬ್‌ನಿಂದ ಬರುತ್ತಿದ್ದ ಶೇ 80ರಷ್ಟು ಮಾದಕವಸ್ತುವಿಗೆ ಪಂಜಾಬ್ ಸರ್ಕಾರ ಈಗ ಕಡಿವಾಣ ಹಾಕಿದ್ದು, ಈಗ ಸರಬರಾಜಾಗುತ್ತಿರುವ ಡ್ರಗ್ಸ್‌ನ ಬಹುಭಾಗವು ಈಗ ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಬರುತ್ತಿದೆ ಎಂದು ಆಮ್ ಆದ್ಮಿ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಪಂಜಾಬ್‌ನಲ್ಲಿನ ಮಾದಕವಸ್ತು ಅವ್ಯಾಹತವಾಗಿರುವ ಬಗ್ಗೆ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ಬಿಜೆಪಿ ಭಾರಿ ಟೀಕೆಗೈದಿತ್ತು. ಈ ಕುರಿತಾದ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
‘ಕೇವಲ ಶೇ 20ರಷ್ಟು ಮಾದಕವಸ್ತು ಪಾಕಿಸ್ತಾನದಿಂದ ಬರುತ್ತಿವೆ. ಶೇ 80ರಷ್ಟು ಮಾದಕವಸ್ತುಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಗುಜರಾತ್, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ದೆಹಲಿಯಿಂದ ಬರುತ್ತಿವೆ. ಬಿಜೆಪಿ ತನ್ನದೇ ರಾಜ್ಯಗಳಲ್ಲಿ ಮಾದಕವಸ್ತು ವ್ಯಾಪಾರವನ್ನು ತಡೆಯುವಲ್ಲಿ ವಿಫಲವಾಗಿದೆಯೇ ಅಥವಾ ಅದನ್ನು ತಡೆಯಲು ಇಷ್ಟವಿಲ್ಲವೋ? ಗುಜರಾತ್‌ನಲ್ಲಿ ಅವರ ಸರ್ಕಾರವು 30 ವರ್ಷಗಳಿಂದ ಅಧಿಕಾರದಲ್ಲಿದೆ. ಅಲ್ಲಿಯೇ, ಅತಿ ಹೆಚ್ಚು ಮಾದಕವಸ್ತು ವ್ಯಾಪಾರ ನಡೆಯುತ್ತಿದೆ’ಎಂದು ಕೇಜ್ರಿವಾಲ್ 'ಎಕ್ಸ್' ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ.
2022ರಲ್ಲಿ ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚನೆಯಾದ ಬಳಿಕ ಪಾಕಿಸ್ತಾನದಿಂದ ರಾಜ್ಯಕ್ಕೆ ಸರಬರಾಜಾಗುತ್ತಿದ್ದ ಶೇ80ರಷ್ಟು ಡ್ರಗ್ಸ್‌ಗೆ ಕಡಿವಾಣ ಹಾಕಲಾಗಿದೆ ಎಂದಿದ್ದಾರೆ. ಪಾಕ್‌ನಿಂದ ಡ್ರಗ್ಸ್ ಸರಬರಾಜು ತಡೆಗೆ ಡ್ರೋನ್ ನಿಗ್ರಹ ವ್ಯವಸ್ಥೆ ಸ್ಥಾಪಿಸಲಾಗಿದೆ ಎಂದಿದ್ದಾರೆ.
ಗುಜರಾತ್‌ನ ಮುಂದ್ರ ಬಂದರಿನ ಮೂಲಕ ಭಾರತಕ್ಕೆ ಮಾದಕವಸ್ತು ಪ್ರವೇಶಿಸುತ್ತದೆ ಎಂದು ಆರೋಪಿಸಿರುವ ಅವರು, ಇಂತಹ ಕಳ್ಳಸಾಗಣೆ ತಡೆಯುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.
ಪಂಜಾಬ್ ರಾಜ್ಯದಿಂದ ಬುದ್ದಿ ಕಲಿತು, ನಿಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಡ್ರಗ್ಸ್ ತೊಡೆದುಹಾಕಿ ಎಂದಿದ್ದಾರೆ.