
ನೇಪಾಳ ಪ್ರವಾಹ: 5 ಸಾವಿರ ಮಂದಿ ಕಣ್ಮರೆ; ಮೃತರ ಸಂಖ್ಯೆ 939ಕ್ಕೆ ಏರಿಕೆ
ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದ ನಂತರ ಸೋಮವಾರದವರೆಗೂ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ 903 ಮಂದಿಯ ಮೃತದೇಹವು ಪತ್ತೆಯಾಗಿದ್ದು, 5 ಸಾವಿರಕ್ಕೂ ಅಧಿಕ ಮಂದಿ ಇನ್ನೂ ಪತ್ತೆಯಾಗಿಲ್ಲ.
ಚಿತಾವನ ಜಿಲ್ಲೆಯಲ್ಲಿ 272, ನವಾಲ್‌ಪರಾಸಿ ಪೂರ್ವ 151, ನವಾಲ್‌ಪರಾಸಿ ಪಶ್ಚಿಮ 62 ಹಾಗೂ ಗೋರ್ಖಾ ಜಿಲ್ಲೆಯಲ್ಲಿ 62 ಮೃತದೇಹಗಳು ಸಿಕ್ಕಿವೆ ಎಂದು ರಾಷ್ಟ್ರೀಯ ವಿಪತ್ತು ನಿಯಂತ್ರಣ ಆಡಳಿತ ಪ್ರಾಧಿಕಾರ (ಎನ್‌ಡಿಆರ್‌ಆರ್‌ಎಂಎ) ತಿಳಿಸಿದೆ.
ಉಳಿದಂತೆ ನುವಾಕೊಟ್‌ನಿಂದ 95, ದಾದಿಂಗ್ 55, ತನಾಹು 37 ಹಾಗೂ ರಸುವಾದಲ್ಲಿ 24 ಮಂದಿಯ ಮೃತದೇಹವು ದೊರೆತಿದೆ.
ನಾಪತ್ತೆಯಾದ 5 ಸಾವಿರ ಮಂದಿ ಪೈಕಿ 99 ಮಂದಿ ಭದ್ರತಾ ಸಿಬ್ಬಂದಿಗಳಿದ್ದು, 591 ಮಂದಿ ವಿದೇಶಿಯರು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
‘ಚೀನಾ ಭಾಗದಲ್ಲಿ ಪ್ರವಾಹದಿಂದ 16 ಮಂದಿ ಮೃತಪಟ್ಟಿದ್ದಾರೆ. ಟಿಬೆಟ್‌ನಲ್ಲಿ 550 ಮಂದಿ ಕಣ್ಮರೆಯಾಗಿದ್ದಾರೆ’ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
9,500 ಮಂದಿ ರಕ್ಷಣೆ: ಭಾನುವಾರ ರಾತ್ರಿಯವರೆಗೂ ಪ್ರವಾಹಪೀಡಿತ ಸ್ಥಳಗಳಿಂದ 9,500 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ.
‘ಇದರಲ್ಲಿ ಭಾರತ, ಅಮೆರಿಕ, ಚೀನಾ, ರಷ್ಯಾ, ಬ್ರಿಟನ್, ಸ್ಪೇನ್, ಬೆಲ್ಜಿಯಂ, ಜರ್ಮನಿ, ಇಟಲಿ, ಮಾಲ್ಟಾ, ಟರ್ಕಿ, ಪೋರ್ಚುಗಲ್‌ನ ನಾಗರಿಕರು ಸೇರಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣ್ಮರೆಯಾದವರನ್ನು ಹುಡುಕಿಕೊಂಡು ಸಂಬಂಧಿಕರು ಆಸ್ಪತ್ರೆಗೆ ಅಲೆದಾಡುತ್ತಿದ್ದು, ಭಾರಿ ದಟ್ಟಣೆ ಉಂಟಾಗುತ್ತಿದೆ. ಆಸ್ಪತ್ರೆಯ ಕಟ್ಟಡದ ಹೊರಭಾಗದಲ್ಲಿ ಮೃತರ ಭಾವಚಿತ್ರಗಳನ್ನು ಅಂಟಿಸಲಾಗಿದ್ದು, ಸಂಬಂಧಿಕರು ಹುಡುಕಾಟದಲ್ಲಿ ತೊಡಗಿದ್ದಾರೆ.
‘ಕೊಳೆತ, ಕತ್ತರಿಸಿ ಹೋದ, ಗುರುತಿಸಲು ಸಾಧ್ಯವಾಗದ ಮೃತದೇಹಗಳನ್ನು ‘ಪ್ರಮಾಣಿತ ಹಾಗೂ ಅಂಗೀಕೃತ ಶಿಷ್ಟಾಚಾರ’ದ (ಎಸ್‌ಒಪಿ) ಪ್ರಕಾರ ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ’ ಎಂದು ನೇಪಾಳದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಅಮೃತ್ ಬಹದ್ದೂರ್ ತಿಳಿಸಿದ್ದಾರೆ.
‘ಮೃತದೇಹಗಳನ್ನು ಪತ್ತೆಹಚ್ಚುವುದಕ್ಕಾಗಿ ಡಿಎನ್‌ಎ ಪರೀಕ್ಷೆ ನಡೆಸುವ 18 ಮಂದಿ ವಿಧಿವಿಜ್ಞಾನ ತಜ್ಞರು ಭಾರತದಿಂದ ನೇಪಾಳಕ್ಕೆ ಬಂದಿದ್ದು, ಅವರ ನೆರವಿನಿಂದಲೂ ಮೃತದೇಹಗಳನ್ನು ಗುರುತಿಸುವ ಕೆಲಸ ಮುಂದುವರಿಸಲಾಗಿದೆ’ ಎಂದು ಹೇಳಿದ್ದಾರೆ.
ಭಾರತಕ್ಕೆ ತೇಲಿಬಂದ 13 ಮೃತದೇಹಗಳು
ಗೋರಖ್‌ಪುರ (ಉತ್ತರಪ್ರದೇಶ) (ಪಿಟಿಐ): ನೇಪಾಳದಲ್ಲಿ ಉಂಟಾದ ಪ್ರವಾಹದಿಂದ ಉತ್ತರ ಪ್ರದೇಶದ ಕುಶಿನಗರಕ್ಕೆ ನಾರಾಯಣಿ ನದಿ ಹಾಗೂ ಗೋರಖ್‌ಪುರ ಜಿಲ್ಲೆಯ ಗಂಡಕಿ ನದಿಯ ಮೂಲಕ 13 ಅಪರಿಚಿತ ಮೃತದೇಹಗಳು ತೇಲಿಬಂದಿವೆ.
ಎಲ್ಲ ಮೃತದೇಹಗಳನ್ನು ಗೋರಖ್‌ಪುರದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಸಂರಕ್ಷಿಸಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಅಂಗರಚನಾ ಶಾಸ್ತ್ರ ವಿಭಾಗದಲ್ಲಿ ಮೃತದೇಹಗಳನ್ನು ಇರಿಸಲಾಗಿದೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಮೃತದೇಹಗಳನ್ನು ಗುರುತಿಸುವ ಪ್ರಕ್ರಿಯೆ ನಡೆದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಏಮ್ಸ್‌ನ ಕಾರ್ಯಕಾರಿ ನಿರ್ದೇಶಕಿ ಡಾ.ವಿಭಾ ದತ್ತಾ ತಿಳಿಸಿದ್ದಾರೆ.