
ಮಲಗಿದವರ ಮೇಲೆ ವಾಹನ ಹಾದು ಇಬ್ಬರು ಕಾವಲುಗಾರರ ದಾರುಣ ಸಾವು
ಆಳಂದ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಗಡಿಗ್ರಾಮ ಹಿರೋಳ್ಳಿ- ನಾಗಲೇಗಾಂವದ ಸೀಮಾಂತರದಲ್ಲಿನ ಪವನ ವಿದ್ಯುತ್ ಘಟಕದ ವಾಹನವು ರಾತ್ರಿ ಸಮಯದಲ್ಲಿ ಮಲಗಿದ್ದ ಕಾವಲುಗಾರರ ಮೇಲೆ ಹಾದು ಇಬ್ಬರು ಕಾವಲುಗಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಾಗಲೇಗಾಂವ ಗ್ರಾಮದ ಸಂಗಯ್ಯ ಬಸವಣ್ಣಯ್ಯ ಸ್ವಾಮಿ ( 46) ಮತ್ತು ಸಂತೋಷ ಶಿವಪಾದಪ್ಪ ಕಲಬುರ್ಗಿ (38) ಮೃತರು.
ಕಳೆದ 10 ದಿನಗಳ ಹಿಂದೆಯಷ್ಟೆ ಈ ಇಬ್ಬರು ವಿಂಡ್ ಪವರ್ ಘಟಕದಲ್ಲಿ ಕಾವಲುಗಾರರಾಗಿ ಕೆಲಸಕ್ಕೆ ಸೇರಿದರು. ರಾತ್ರಿ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆ ಇತ್ತು. ಹೀಗಾಗಿ ಕಾವಲುಗಾರರು ಘಟಕದ ಮುಂದೆ ತಾಡಪಲ್ಲೆ ಹೊದ್ದು ರಾತ್ರಿ ಮಲಗಿದ್ದರು. ನಿದ್ರೆಯಲ್ಲಿ ಇದ್ದಾಗ ಘಟಕದ ಒಳಗೆ ದೊಡ್ಡ ವಾಹನ ಬಂದಿದ್ದು, ಮಲಗಿದ್ದವರ ಮೇಲೆ ಚಾಲಕನು ವಾಹನ ಚಲಿಸಿದ್ದು, ಇಬ್ಬರು ನಿದ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ನಂತರ ವಾಹನ ಚಾಲಕ, ಇತರ ಸಿಬ್ಬಂದಿ ನೋಡಿ ಗಾಭರಿಯಾಗಿ ಅಲ್ಲಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ಬಾಗಿಲು ಬೀಗ ಜಡಿದು ಪರಾರಿಯಾಗಿದ್ದಾರೆ.
ಬೆಳಿಗ್ಗೆ ಗ್ರಾಮಸ್ಥರು ಸ್ಥಳಕ್ಕೆ ಹೋಗಿದಾಗ ಕಾವಲುಗಾರರು ದಾರುಣವಾಗಿ ವಾಹನದ ಚಕ್ರದಡಿ ಸಿಲುಕಿದ್ದ ರಕ್ತಸಿಕ್ತ ಮೃತ ದೇಹಗಳು ಕಂಡಿವೆ. ನಂತರ ನಾಗಲೇಗಾಂವ ಗ್ರಾಮಸ್ಥರು ಮಾದನ ಹಿಪ್ಪರಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಶರಣಬಸಪ್ಪ ಕೊಡ್ಲಾ, ಮಾದನ ಹಿಪ್ಪರಗಿ ಠಾಣೆ ಪಿಎಸ್ಐ ಮಹಾಂತೇಶ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮದಲ್ಲಿ ಸೂತಕದ ವಾತಾವರಣ: ಗ್ರಾಮದ ಇಬ್ಬರು ಯುವಕರ ಸಾವಿನ ಸುದ್ದಿ ನಾಗಲೇಗಾಂವ ಗ್ರಾಮದಲ್ಲಿ ಗ್ರಾಮಸ್ಥರ ಆಕ್ರಂದನಕ್ಕೆ ಕಾರಣವಾಗಿದೆ. ಕುಟುಂಬಸ್ಥರು, ಬಂಧುಮಿತ್ರರಲ್ಲಿ ದುಃಖ ಮಡುಗಟ್ಟಿದೆ.