
ದೆಹಲಿಯ ಸಂಪೂರ್ಣ ಮೆಟ್ರೊ ಜಾಲವನ್ನು 14 ಗಂಟೆಗಳಲ್ಲಿ ಸುತ್ತಿ ದಾಖಲೆ ಬರೆದ ಉದ್ಯೋಗಿ
ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಮೆಟ್ರೊ ಜಾಲವಿದೆ. ಪ್ರತಿದಿನ ದೇಶದಾದ್ಯಂತ ಲಕ್ಷಾಂತರ ಮಂದಿ ಮೆಟ್ರೊದಲ್ಲಿ ಪ್ರಯಾಣಿಸುತ್ತಾರೆ. ಮೆಟ್ರೊ ಬರೀ ಸಾರಿಗೆ ಮಾತ್ರವಲ್ಲ, ಪ್ರಯಾಣಿಕರ ಜೀವನಾಡಿ ಎಂದರೆ ತಪ್ಪಾಗದು.
ದೆಹಲಿ ಮೆಟ್ರೊ ರೈಲು ನಿಗಮದ (DMRC) ಉದ್ಯೋಗಿ ಪ್ರಫುಲ್ ಸಿಂಗ್ ಎಂಬುವವರು ಇಲ್ಲಿನ ಎಲ್ಲಾ ಮೆಟ್ರೊ ಮಾರ್ಗಗಳ 416 ಕಿ.ಮೀ ಅನ್ನು 14 ಗಂಟೆ, 54 ನಿಮಿಷಗಳಲ್ಲಿ ಸುತ್ತಿ ಬರುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಈ ಮೂಲಕ ಈವರೆಗೆ ಇದ್ದ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ.
ಪ್ರಫುಲ್ ಸಿಂಗ್ ಅವರು ಮೇ 23ರ ಬೆಳಿಗ್ಗೆ 6 ಗಂಟೆಗೆ, ದೆಹಲಿ ಮೆಟ್ರೊದ ನೇರಳೆ ಮಾರ್ಗದಲ್ಲಿರುವ ರಾಜಾ ನಹರ್ ಸಿಂಗ್ ನಿಲ್ದಾಣದಿಂದ ತಮ್ಮ ಪ್ರಯಾಣವನ್ನು ಆರಂಭಿಸಿದರು. 303 ನಿಲ್ದಾಣಗಳನ್ನು ದಾಟಿ ಗುರುಗ್ರಾಮ್‌ನ ಮಿಲೇನಿಯಮ್ ಸಿಟಿ ಸೆಂಟರ್ ಮೆಟ್ರೊ ನಿಲ್ದಾಣಕ್ಕೆ ರಾತ್ರಿ 9 ಗಂಟೆಗೆ ಬಂದು ತಲುಪಿದ್ದಾರೆ.
ಈ ಹಿಂದೆ ಇಬ್ಬರು ವ್ಯಕ್ತಿಗಳು ಜತೆಯಾಗಿ ಪ್ರಯಾಣಿಸಿ ಈ ದಾಖಲೆ ಮಾಡಿದ್ದರು. 2023ರ ಜೂನ್‌ನಲ್ಲಿ ಸುಜೋಯ್ ಕುಮಾರ್ ಮಿತ್ರ ಮತ್ತು ಶಿಪ್ರಾ ಗುಪ್ತಾ ಅವರು 15 ಗಂಟೆ, 21 ನಿಮಿಷಗಳಲ್ಲಿ ದೆಹಲಿಯ ಸಂಪೂರ್ಣ ಮೆಟ್ರೊ ಜಾಲವನ್ನು ಸುತ್ತಿಕೊಂಡು ಬಂದಿದ್ದರು. ಇದೀಗ ಈ ದಾಖಲೆಯನ್ನು ಪ್ರಫುಲ್ ಸಿಂಗ್ ಮುರಿದಿದ್ದಾರೆ.
ದಿ ಪ್ರಿಂಟ್ ಪ್ರಕಾರ, ಪ್ರಫುಲ್ ಸಿಂಗ್ ಅವರು ಈ ದಾಖಲೆಯನ್ನು ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2022ರಲ್ಲಿ 16 ಗಂಟೆ, 2 ನಿಮಿಷಗಳಲ್ಲಿ ಸಂಚರಿಸಿದ್ದರು. ಮೆಟ್ರೊದ ಉದ್ಯೋಗಿಯಾಗಿರುವ ಅವರಿಗೆ ರೈಲುಗಳು ಆಗಮಿಸುವ ಸರಿಯಾದ ಸಮಯ ಸೇರಿದಂತೆ ಇತರೆ ಮಾಹಿತಿಗಳು ತಿಳಿದಿದ್ದವು. ಇದರಿಂದಾಗಿ ಸವಾಲನ್ನು ಪೂರ್ಣಗೊಳಿಸಲು ಅವರಿಗೆ ಸುಲಭವಾಯಿತು.
ದಿ ಪ್ರಿಂಟ್ ಜತೆಗೆ ಮಾತನಾಡಿರುವ ಪ್ರಫುಲ್ ಸಿಂಗ್, ‘ಈ ಬಾರಿ ಗಿನ್ನೆಸ್ ವಿಶ್ವದಾಲೆಯನ್ನು ಮಾಡುವ ನಂಬಿಕೆ ಇತ್ತು. ಈ ಹಿಂದಿನ ದಾಖಲೆಗಳನ್ನು ಮುರಿಯುವುದು ನನ್ನ ಗುರಿಯಾಗಿತ್ತು. ಕಳೆದ ಬಾರಿ ತಪ್ಪು ಮಾರ್ಗದಿಂದ ಸಂಚಾರ ಆರಂಭಿಸಿ, ಒಂದೂವರೆ ಗಂಟೆ ತಡವಾಗಿತ್ತು. ಆದರೆ ಈ ಬಾರಿ ಆ ತಪ್ಪು ಮಾಡಲಿಲ್ಲ’ ಎಂದು ಹೇಳಿದ್ದಾರೆ.
ಪ್ರಯಾಣ ಮಾಡಿದರೆ ವಿಶ್ವದಾಖಲೆಯಾಗುವುದಿಲ್ಲ...
ಮೆಟ್ರೊ ರೈಲಿನಲ್ಲಿ ಕುಳಿತು ಎಲ್ಲಾ ಮಾರ್ಗಗಳಲ್ಲಿ ಪ್ರಯಾಣಿಸಿದರೆ, ವಿಶ್ವದಾಖಲೆಯಾಗುವುದಿಲ್ಲ. ಗಿನ್ನೆಸ್ ನಿಯಮದ ಪ್ರಕಾರ ಪ್ರತಿ ನಿಲ್ದಾಣದಲ್ಲಿ ಇಳಿಯಬೇಕು. ಲೈವ್ ಆಗಿ ಫೋಟೊಗಳನ್ನು ತೆಗೆದುಕೊಳ್ಳಬೇಕು. ಬಳಿಕ ಅದನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಬೇಕು.
ಸಾಧನೆಯ ಕುರಿತು ಮಾತನಾಡಿರುವ ಅವರು, ‘ ಇದು ವೈಯಕ್ತಿಕ ದಾಖಲೆ ಎನ್ನುವುದಕ್ಕಿಂತ ಹೆಚ್ಚಿನದಾಗಿ ದೆಹಲಿ ಮೆಟ್ರೊ ಜಾಲವನ್ನು ಜಗತ್ತಿಗೆ ತೋರಿಸುವುದರ ಭಾಗವಾಗಿತ್ತು. ಇದರ ಜತೆಗೆ ಮೆಟ್ರೊ ಸಂಚಾರವು ಸುಗಮ ಎಂದು ಸಾರ್ವಜನಿಕರಿಗೆ ಅರ್ಥ ಮಾಡಿಸುವ ಉದ್ದೇಶವೂ ಇತ್ತು’ ಎಂದು ಹೇಳಿದ್ದಾರೆ.
ಪ್ರಫುಲ್ ಸಿಂಗ್ ಅವರು ವೃತ್ತಿಯಲ್ಲಿ ಮೆಟ್ರೊ ಸಿಬ್ಬಂದಿಯಾಗಿದ್ದಾರೆ. ಆದರೆ ಅವರು ಪ್ರವೃತ್ತಿಯಲ್ಲಿ ಟ್ರಯಥ್ಲೀಟ್ ಆಗಿದ್ದಾರೆ. ಅವರು ಈಜು, ಮ್ಯಾರಥಾನ್ ಮತ್ತು ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗಿಯಾಗುತ್ತಾರೆ. 2021ರಲ್ಲಿ ತಮ್ಮ ಮನೆಯಲ್ಲಿಯೇ 134 ಗಂಟೆಗಳಲ್ಲಿ 3,000 ಕಿಮೀ ಒಳಾಂಗಣ ಸೈಕ್ಲಿಂಗ್ ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.