
Toxic Cinema: ಯಶ್ ನಟನೆಯ ಟಾಕ್ಸಿಕ್ ಮೇಲಿನ ನಿರೀಕ್ಷೆ ಹೆಚ್ಚಿಸಿದ ಟ್ರೇಲರ್
‘ನಾನು ಹೋಗಲ್ಲ. ಅವರನ್ನೇ ಇಲ್ಲಿಗೆ ಕರೆಸಿಕೊಳ್ತೇನೆ..’ ಬಾಲಿವುಡ್ ಪ್ರವೇಶ ಕುರಿತ ಪ್ರಶ್ನೆಗೆ ನಟ ಯಶ್ ಹಿಂದೊಮ್ಮೆ ನೀಡಿದ್ದ ಉತ್ತರ ಈಗ ರೀಲ್ಸ್ ಆಗಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ‘ಟಾಕ್ಸಿಕ್’ ಚಿತ್ರದ ಟ್ರೇಲರ್ ಬಿಡುಗಡೆ.
ಭಾನುವಾರ ಸಂಜೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಸಾಧಾರಣ ಮಳೆ, ತುಸು ಚಳಿ. ಅದರ ಮಧ್ಯೆಯೂ ಅಲ್ಲಿನ ಎಎಂಬಿ ಸಿನೆಮಾಸ್ ಎದುರು ಜನದಟ್ಟಣೆ ಇತ್ತು. ಅವರು ಬೆಚ್ಚನೆ ಖುಷಿಗೆ ಕಾಯುತ್ತಿದ್ದರು.
ಯಶ್, ಹೆಸರಾಂತ ನಟಿಯರಾದ ನಯನತಾರಾ, ರುಕ್ಷ್ಮಿಣಿ ವಸಂತ್, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಅವರನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಅಭಿಮಾನಿಗಳು ಮಳೆಯಲ್ಲೂ ನೆನೆಯುತ್ತಿದ್ದರು.
‘ಲೇಡಿಸ್.. ಲೇಡಿಸ್. ಒಬ್ಬೊಬ್ಬರಾಗಿ ಬರ್ತೀರಾ, ಒಟ್ಟಿಗೆ ಬರ್ತಿರಾ? ಎಂದು ಯಶ್ ಇದೇ ಚಿತ್ರದ ಪ್ರೊಮೊದಲ್ಲಿ ಪ್ರಶ್ನಿಸಿದ್ದರು. ಉತ್ತರ ಎಂಬಂತೆ ಟ್ರೇಲರ್ ಬಿಡುಗಡೆಗೆ, ಚಿತ್ರದ ಎಲ್ಲ ನಟಿಯರು ಒಟ್ಟಿಗೇ ಬೆಂಗಳೂರಿಗೆ ಬಂದಿದ್ದರು.
ಪಂಚಿಂಗ್ ಸಂಭಾಷಣೆ, ರೋಚಕ ಹಾಗೂ ಸಾಹಸಮಯ ದೃಶ್ಯ, ಪೂರಕ ಸಂಗೀತದೊಂದಿಗೆ ಟ್ರೈಲರ್ ಐದು ಭಾಷೆಗಳಲ್ಲಿ ವೀಕ್ಷಕರನ್ನು ರಂಜಿಸಿತು. ನಟರ ಜೊತೆಗೆ ನಿರ್ದೇಶಕಿ ನೀತೂ ಮೋಹನದಾಸ್, ನಿರ್ಮಾಪಕ ವೆಂಕಟ್ ಕೆ.ನಾರಾಯಣ ಅವರೂ ಸಂಭ್ರಮಿಸಿದರು.
ಟ್ರೇಲರ್ ಬಿಡುಗಡೆಗೆ ಚಾಲನೆ ನೀಡಿದ ನಟ ಶಿವರಾಜ್‌ಕುಮಾರ್, ‘ಐ ಯಾಮ್ ಕಮಿಂಗ್..’ ಎಂಬ ಚಿತ್ರದಲ್ಲಿ ಯಶ್ ಒಂದು ದೃಶ್ಯದಲ್ಲಿ ಅಬ್ಬರಿಸುವುದನ್ನೇ ಉಲ್ಲೇಖಿಸಿ, ‘ಬನ್ನಿ. ನಾನೂ ಕಾಯುತ್ತಿದ್ದೇನೆ, ನಾವು ಎಲ್ಲರೂ ಕಾಯುತ್ತಿದ್ದೇವೆ’ ಎಂದರು.
‘ಚಿತ್ರರಂಗದಲ್ಲಿ ಯಶ್ ಬೆಳವಣಿಗೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಕನ್ನಡಿಗನ ಈ ಬೆಳವಣಿಗೆ ಖುಷಿ ನೀಡುತ್ತದೆ. ನಾನೇ ಮಾಡಿದಷ್ಟೂ ಖುಷಿ ಆಗುತ್ತಿದೆ’ ಎಂದೂ ಶಿವಣ್ಣ ಸಂತಸ ಹಂಚಿಕೊಂಡರು.
ವಣಕ್ಕಂ ಎಂದು ಮಾತು ಆರಂಭಿಸಿದ ನಯನತಾರಾ, ‘ಯಶ್ ವೃತ್ತಿ ಬದುಕಿನಲ್ಲಿ ಎಷ್ಟು ಎತ್ತರಕ್ಕೆ ಏರಿದ್ದಾರೋ, ವ್ಯಕ್ತಿತ್ವದಲ್ಲೂ ಅಷ್ಟೇ ಎತ್ತರದವರು’ ಎಂದು ಶ್ಲಾಘಿಸಿದರು. ಕನ್ನಡತಿಯೇ ಆಗಿರುವ ರುಕ್ಮಿಣಿ ವಸಂತ್ ಅವರ ನಟನೆ ಕುರಿತು ಯಶ್ ವಿಶೇಷವಾಗಿ ಮೆಚ್ಚುಗೆ ಸೂಚಿಸಿದರು. ಇತರ ನಟಿಯರು ‘ಎಲ್ಲರಿಗೂ ನಮಸ್ಕಾರ’ ಎಂದು ತಮ್ಮ ಮಾತು ಆರಂಭಿಸುವ ಮೂಲಕ ಚಪ್ಪಾಳೆ ಗಿಟ್ಟಿಸಿದರು.
ಇಂಗ್ಲಿಷ್ ಜೊತೆಗೆ ಕನ್ನಡದಲ್ಲೂ ಮಾತನಾಡಿದ ನಿರ್ದೇಶಕಿ ಗೀತು ಮೋಹನ್‌ದಾಸ್, ‘ಟಾಕ್ಸಿಕ್‌ನಲ್ಲಿ ನನ್ನ ಕನಸನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಯಶ್ ನಡೆದಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ’ ಎಂದು ಭಾವುಕರಾದರು.
ಯಶ್ ಮಾತನಾಡಿ, ‘ನನ್ನ ಪ್ರತಿ ಚಿತ್ರವನ್ನು ಗೆಲ್ಲಿಸುವ ಮೂಲಕ ಕರ್ನಾಟಕದ ಜನರು ನೀಡಿದ ಆಶೀರ್ವಾದದ ಪ್ರತೀಕವೇ ಈ ಚಿತ್ರ. ಪ್ರತಿ ಚಿತ್ರ ಗೆಲ್ಲಿಸಿದಾಗಲೂ ಅಲ್ಲಿ ಹೋಗಿ ಕೆಲಸ ಮಾಡು ಎಂದು ಜವಾಬ್ದಾರಿ ನೀಡಿದ್ದರು. ಅದರಂತೆ ನಾವೀಗ ಒಂದು ಹೆಜ್ಜೆ ಇಟ್ಟಿದ್ದೇನೆ. ಟಾಕ್ಸಿಕ್ ಬರುತ್ತಿದೆ. ಆಶೀರ್ವದಿಸಿ’ ಎಂದು ಕೋರಿದರು.
‘ದಾರಿ ಯಾವುದಾದರೂ ಗುರಿ ಮುಟ್ಟಬೇಕು. ಆ ದಾರಿಯಲ್ಲಿ ಕೆಲ ಹೋರಾಟವಿರುತ್ತದೆ. ಕಾಲಕ್ಕೆ ತಕ್ಕಂತೆ ನಡೆಯಬೇಕು. ತಾಳಕ್ಕೆ ತಕ್ಕಂತೆ ಕುಣಿಯಬೇಕು’ ಎಂದು ಚಿತ್ರವನ್ನು ಕುರಿತು ಹೇಳಿಕೊಂಡರು.
‘ಚಿತ್ರದಲ್ಲಿರುವ ವಿವಿಧ ಭಾಷೆಗಳ ನಟಿಯರು ಪ್ರತಿಭಾನ್ವಿತರು. ಅವರ ಕ್ಷೇತ್ರದಲ್ಲಿ ಸಾಕಷ್ಟು ಬ್ಯುಸಿ ಅಗಿದ್ದವರು. ಸಮಯವನ್ನು ಹೊಂದಿಸಿಕೊಂಡು ಇಲ್ಲಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವರ ವೃತ್ತಿ ಬದುಕಿನಲ್ಲೇ ಇದು ಸ್ಮರಣಾರ್ಹ ಚಿತ್ರವಾಗಲಿದೆ ಎಂಬ ಭರವಸೆಯನ್ನು ನೀಡಲ ಬಯಸುತ್ತೇನೆ’ ಎಂದರು. ಕೆವಿಎನ್ ಪ್ರೊಡಕ್ಷನ್‌ನಡಿ ವೆಂಕಟ್ ಕೆ.ನಾರಾಯಣ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್‌ನಡಿ ಯಶ್ ಜಂಟಿಯಾಗಿ ಟಾಕ್ಸಿಕ್ ನಿರ್ಮಿಸಿದ್ದಾರೆ. ಚಿತ್ರ ಇದೇ 26ರಂದು ಬಿಡುಗಡೆ ಕಾಣಲಿದೆ.v