
ನನ್ನ ಕನಸಿನ ಬಂಡಿ... ನಾಲ್ಕು ತಲೆಮಾರಿನ ಬುಲೆಟ್ ನೆನಪು ಹಂಚಿಕೊಂಡ ನಟ ಜಗ್ಗೇಶ್
ನವರಸ ನಾಯಕ, ನಟ ಜಗ್ಗೇಶ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹಳೆಯ ‘ರಾಯಲ್ ಎನ್‌ಫೀಲ್ಡ್ ಬುಲೆಟ್’ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡು, ತಮ್ಮ ಜೀವನದ ಭಾವನಾತ್ಮಕ ಪಯಣದ ಬಗ್ಗೆ ನೆನಪಿಸಿಕೊಂಡಿದ್ದಾರೆ.
ನಾಲ್ಕು ತಲೆಮಾರುಗಳನ್ನು ಹೊತ್ತು ಸಾಗಿಬಂದ ಈ ಬುಲೆಟ್ ಬೈಕ್ ತಮ್ಮ ಬದುಕಿನ ಭಾಗ್ಯದೇವತೆ ಎಂದು ಬಣ್ಣಿಸಿರುವ ಜಗ್ಗೇಶ್, ಬಾಲ್ಯದ ಬದುಕಿನ ಕುರಿತು ಬರೆದುಕೊಂಡಿರುವ ಪೋಸ್ಟ್ ಈಗ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.
‘ಅಮ್ಮ ₹1,800 ಕೊಟ್ಟು ಕೊಡಿಸಿದ್ದ ಬೈಕ್ ಇದು’ ಜಗ್ಗೇಶ್ ಮನದಾಳ ಮಾತು
ಅಮ್ಮ ನನ್ನ ಗಂಡ ಬೈಕ್‌ನಲ್ಲಿ ಓಡಾಡಲಿ ಎಂದು 1956ರಲ್ಲಿ ಊದುಬತ್ತಿ ಮಾಡಿ, ತರಕಾರಿ ಮಾರಿ ಹಣ ಸೇರಿಸಿ ₹1,800 ಕೊಟ್ಟು ಅಪ್ಪನಿಗೆ ಕೊಡಿಸಿದ ಬುಲೆಟ್. ಬಾಲ್ಯದಲ್ಲಿ ನಾನು ಇದರ ಮುಂದೆ ಕೂತು ಅಪ್ಪ ಅಮ್ಮನ ಜೊತೆ ಮಾಯಸಂದ್ರಕ್ಕೆ ಹೋಗುತ್ತಿದ್ದೆ. ಬುಲೆಟ್ ಶಬ್ದಕ್ಕೆ ತಾತ ಬಾಗಿಲಲ್ಲಿ ಬರಮಾಡಿಕೊಳ್ಳಲು ಪ್ರೀತಿಯಿಂದ ನಿಲ್ಲುತ್ತಿದ್ದ. ಕಾಲೇಜಿಗೆ ಬಂದಾಗ ಅಪ್ಪನ ಬಳಿ ಕಾಡಿಬೇಡಿ ನಾನು ಪಡೆದೆ. ಪೆಟ್ರೋಲ್‌ಗೆ ಕಾಸಿಲ್ಲದೆ ಡೌನ್ ಬಂದಾಗ ನ್ಯೂಟ್ರಲ್ ಅಪ್ ಬಂದಾಗ ಗೇರಲ್ಲಿ ಜೀವನ’ ಎಂದಿದ್ದಾರೆ.
‘ಪರಿಮಳ ಗೆಳತಿ ಆದಾಗ ಅವಳ ಬಳಿಯೇ ₹7 ಪಡೆದು ಪೆಟ್ರೋಲ್ ಹಾಕಿಸಿ ಅವಳ ಹಿಂದೆ ಕೂರಿಸಿಕೊಂಡು ‘ಒಂದಲ್ಲ ಒಂದು ದಿವಸ ಆಗುತೀನಿ ನಾನು ನಾಡೆಲ್ಲಾ ಮೆಚ್ಚುವಂತ ಹಮ್ಮೀರ’ ಎಂದು ರೌಂಡ್ ಹಾಕಿಸಿ ಬರುತ್ತಿದ್ದೆ. ಮುಂದೆ ಅವಳನ್ನೇ ಮದುವೆಯಾಗಿ ಮಗ ಗುರುರಾಜನನ್ನು ಮುಂದೆ ಕೂರಿಸಿ ಅಪ್ಪನ ಹಾದಿ ತುಳಿದು ಸ್ವತಂತ್ರವಾಗಿ ಬೆಳೆದೆ. ಈಗ ಮೊಮ್ಮಗ ಅರ್ಜುನ ಈ ಬೈಕ್‌ಗೆ ನನ್ನ ಆತ್ಮೀಯ ಸಹಪಾಠಿ. ಅಲ್ಲಿಗೆ ನಾಲ್ಕು ತಲೆಮಾರು ಹೊತ್ತ ನನ್ನ ಬದುಕಿನ ಭಾಗ್ಯದೇವತೆ ಈ ಬುಲೆಟ್’ ಎಂದಿದ್ದಾರೆ.
‘ನಮ್ಮ ನಿಮ್ಮ ಬದುಕು ಇಷ್ಟೇ.. ಮೊನ್ನೆ ತಾತ, ನೆನ್ನೆ ಅಪ್ಪ, ಇಂದು ನಾವು, ನಾಳೆ ಮಕ್ಕಳು, ನಾಡಿದ್ದು ಮೊಮ್ಮಕ್ಕಳು ಆಮೇಲೆ ಗೋಡೆ ಮೇಲಿನ ಚಿತ್ರಪಟ. ಈ ಸಿರಿಗೆ ಯಾಕೆ ಬೇಕು ನಾನು ನಂದು ನನ್ನಿಂದ. ಕಾಲವನ್ನು ತಡೆಯೋರು ಯಾರು ಇಲ್ಲ. ತೃಪ್ತರಾಗಿರಿ, ಸಂತೋಷವಾಗಿರಿ, ಇಂದಿನ ದಿನವನ್ನು ಆನಂದಿಸಿ. ನಾಳೆ ಏನಾಗುತ್ತೋ ಯಾರಿಗೂ ತಿಳಿದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ನಟ ಜಗ್ಗೇಶ್ ಅವರ ಈ ಸರಳ, ಸುಂದರ ಹಾಗೂ ಪ್ರೇರಣಾದಾಯಿ ಮಾತುಗಳಿಗೆ ಅಭಿಮಾನಿಗಳು ಮನಸೋತಿದ್ದು, ‘ಬಾಳಿಗೊಂದು ಅರ್ಥ ಹೇಳಿದ ನಟ’ ಎಂದು ಕಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.