
ಅಮೃತಧಾರೆ: ಕ್ಯಾನ್ಸರ್ ವಿರುದ್ಧ ಗೆದ್ದ ಭೂಮಿಕಾ ಮುಖದಲ್ಲಿ ನಗುವಿನ ಹಣತೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯ ಕಥೆಗೆ ವೀಕ್ಷಕರು ಮನಸೋತಿದ್ದಾರೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿರುವ ಈ ಧಾರಾವಾಹಿಯಲ್ಲಿ ಮಹಾಮಾರಿ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾಳೆ ಭೂಮಿಕಾ.
ಹೌದು, ಭೂಮಿಕಾ ಬದುಕಿನಲ್ಲಿ ಎಲ್ಲವೂ ಸರಿ ಇದೆ ಅನ್ನುವಷ್ಟರಲ್ಲಿ ಊಹಿಸಲಾಗದ ಟ್ವಿಸ್ಟ್ ಎದುರಾಗಿತ್ತು. ವೈದ್ಯರ ಅದೊಂದು ಮಾತು ಭೂಮಿಕಾಳ ಇಡೀ ಸಂಸಾರವನ್ನೇ ತಲೆ ಕೆಳಗಾಗುವಂತೆ ಮಾಡಿತ್ತು. ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದನ್ನು ವೈದರು ಖಚಿತಪಡಿಸಿದ್ದರು. ವೈದ್ಯರ ಮಾತು ಕೇಳುತ್ತಿದ್ದಂತೆ ಭೂಮಿಕಾಗೆ ದಿಕ್ಕು ತೋಚದಂತಾಗಿತ್ತು.
ಇದೀಗ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಭೂಮಿಕಾ ತಲೆ ಬೋಳಿಸಿಕೊಂಡಿದ್ದರು. ಕ್ಯಾನ್ಸರ್‌ನಿಂದ ಭರವಸೆಯನ್ನು ಕಳೆದುಕೊಂಡಿದ್ದ ಭೂಮಿಕಾಗೆ ಗೌತಮ್ ಬೆಂಬಲವಾಗಿ ನಿಂತಿದ್ದರು. ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಿದ ಭೂಮಿಕಾ ಸಾವಿಗೆ ಸವಾಲು ಹಾಕಿ ಗೆದ್ದಿದ್ದಾರೆ. ಕ್ಯಾನ್ಸರ್‌ನಿಂದ ಗೆದ್ದ ಭೂಮಿಕಾ ಈಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಜೀ ಕನ್ನಡ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರೋಮೊ ಹಂಚಿಕೊಂಡಿದೆ. ಅದರಲ್ಲಿ ಬಾಬ್ ಕಟ್ ಲುಕ್‌ನಲ್ಲಿ ಬಂದ ಭೂಮಿಕಾಳನ್ನು ನೋಡಿ ಗೌತಮ್ ಕಳೆದು ಹೋಗಿದ್ದಾನೆ. ಅಷ್ಟೇ ಅಲ್ಲದೇ ವೀಕ್ಷಕರು ಕೂಡ ಭೂಮಿಕಾಳ ಹೊಸ ಲುಕ್‌ಗೆ ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್ ಕಾಣಿಸಿಕೊಂಡಿದ್ದಾರೆ. ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ ಅಭಿನಯಿಸುತ್ತಿದ್ದಾರೆ.