
RBI Rules: ಸಾಲಗಾರರಿಗೆ ಪದೇ ಪದೇ ಫೋನ್ ಮಾಡುವಂತಿಲ್ಲ: ಸಾಲ ವಸೂಲಾತಿ ನಿಯಮ ಬದಲಾವಣೆ
ಮನೆ ಖರೀದಿಸುವುದಾಗಲಿ, ಕಾರು ಖರೀದಿಸುವುದಾಗಲಿ ಅಥವಾ ಮೆಡಿಕಲ್ ಎಮರ್ಜೆನ್ಸಿ ಇರಲಿ ಲೋನ್ ತೆಗೆದುಕೊಳ್ಳುವುದು ಸಾಮಾನ್ಯ. ಲೋನ್ ತೆಗೆದುಕೊಂಡ ಮೇಲೆ ಅದನ್ನು ಬಡ್ಡಿ ಸಮೇತ ವಾಪಸ್ ಕಟ್ಟಬೇಕಾಗುತ್ತದೆ. ಅದಕ್ಕಾಗಿ ಪ್ರತಿ ತಿಂಗಳು ಕಂತಿನ ಮೂಲಕ ಮರು ಪಾವತಿ ವ್ಯವಸ್ಥೆ ಇರುತ್ತದೆ. ಆದರೆ ಕೆಲವೊಮ್ಮೆ ಕೆಲವು ಕಾರಣಗಳಿಂದ ಹಣದ ಸಮಸ್ಯೆ ಎದುರಾಗುವುದು. ಆಗ EMI ಕಟ್ಟುವುದು ಸಾಧ್ಯವಾಗದೇ ಹೋಗಬಹುದು. EMI ಗಳನ್ನು ಪಾವತಿಸಲು ಸಾಧ್ಯವಾಗದೇ ಹೋದಾಗ ಮಾನಸಿಕ ಒತ್ತಡ ಹೆಚ್ಚಾಗುವುದು. ಜೊತೆಗೆ ವಸೂಲಾತಿ ಏಜೆಂಟ್‌ಗಳ ಫೋನ್ ಕರೆ, ಪದೇ ಪದೇ ಮನೆಗೆ ಬರುವುದು ಇವೆಲ್ಲಾ ಕಿರುಕುಳಕ್ಕಿಂತ ಕಡಿಮೆಯೇನಲ್ಲ.
ಸಾಲ ವಸೂಲಾತಿ ನಿಯಮ ಬದಲಾಯಿಸಿದ RBI
ವಸೂಲಾತಿ ಏಜೆಂಟ್‌ಗಳು ಹೆಚ್ಚಾಗಿ ನಿಂದನೀಯ ಭಾಷೆ ಬಳಸುತ್ತಾರೆ. ಹೇಗಾದರೂ ಮಾಡಿ ಹಣ ವಸೂಲಿ ಮಾಡುವುದು ಅವರ ಉದ್ದೇಶವಾಗಿರುತ್ತದೆ. ಹೀಗಾಗಿ ಪದೇ ಪದೇ ಫೋನ್ ಮಾಡುವುದು ಸೇರಿದಂತೆ ಬೆದರಿಕೆ ಕೂಡಾ ಹಾಕುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, RBI ಸಾಲ ವಸೂಲಾತಿಗೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಈ ನಿಯಮಗಳನ್ನು ಜನವರಿ 1, 2027 ರಿಂದ ಸಂಪೂರ್ಣವಾಗಿ ಜಾರಿಗೆ ತರಲಾಗುವುದು. ಈ ಹೊಸ ನಿಯಮ ಸಾಲಗಾರರಿಗೆ ಮಾನಸಿಕ ಕಿರುಕುಳ ನೀಡುವುದನ್ನು ತಡೆಯುತ್ತದೆ.
ತಪ್ಪಿಗೆ ಬ್ಯಾಂಕ್ ನೇರ ಹೊಣೆ
ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿಗಳನ್ನು ಅನುಸರಿಸಬೇಕು. ವಸೂಲಾತಿ ಏಜೆಂಟ್‌ಗಳು ನಿಗದಿತ ನೀತಿ ಸಂಹಿತೆಯನ್ನು ಪಾಲಿಸಬೇಕು. ವಸೂಲಾತಿ ಏಜೆಂಟ್‌ಗಳಿಂದ ಆಗುವ ಯಾವುದೇ ದುಷ್ಕೃತ್ಯಕ್ಕೆ ಬ್ಯಾಂಕ್ ನೇರ ಹೊಣೆಗಾರನಾಗಿರುತ್ತದೆ. ವಸೂಲಾತಿಯ ನೆಪದಲ್ಲಿ ಯಾರನ್ನೂ ಬೆದರಿಸುವ ಹಾಗಿಲ್ಲ. ಪದೇ ಪದೇ ಮನಗೆ ಬರುವಂತಿಲ್ಲ, ನಿಂದನೀಯ ಪದಗಳನ್ನು ಬಳಸುವಂತೆಯೂ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಸ್ನೇಹಿತರಿಗೆ ತೊಂದರೆ ಕೊಡುವುದು ಕೂಡಾ ತಪ್ಪು: RBI
ಸಾಲ ತೆಗೆದುಕೊಂಡವರಿಗೆ ಬೆದರಿಕೆ ಹಾಕುವುದು, ನಿಂದನೀಯ ಭಾಷೆ ಬಳಸುವುದು, ಸಾಲಗಾರರ ಕುಟುಂಬ ಅಥವಾ ಸ್ನೇಹಿತರಿಗೆ ಕಿರುಕುಳ ನೀಡುವುದು ತಪ್ಪು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ನಿಗದಿತ ಸಮಯದ ನಂತರ ಅಥವಾ ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡುವಂತೆಯೂ ಇಲ್ಲ ಎಂದು ಹೇಳಿದೆ. ಎಲ್ಲಾ ವಸೂಲಾತಿ ಏಜೆಂಟ್‌ಗಳು IIBF ಪ್ರಮಾಣೀಕರಿಸಲ್ಪಟ್ಟಿರಬೇಕು. ಇದಕ್ಕಾಗಿ ಅಸ್ತಿತ್ವದಲ್ಲಿರುವ ಏಜೆಂಟ್‌ಗಳಿಗೆ ಗಡುವು ನೀಡಲಾಗುತ್ತದೆ.
ಹೊಸ ರಚನೆಯಡಿಯಲ್ಲಿ, ವಸೂಲಾತಿ ಏಜೆಂಟ್‌ಗಳು ಮುಂಜಾನೆ ಅಥವಾ ರಾತ್ರಿಯ ಹೊತ್ತಿನಲ್ಲಿ ಸಾಲಗಾರರಿಗೆ ಕರೆ ಮಾಡುವಂತಿಲ್ಲ. ಆರ್‌ಬಿಐ ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ 7 ಗಂಟೆಯ ನಂತರ ಫೋನ್ ಮಾಡುವಂತಿಲ್ಲ ಎನ್ನುವ ಹಳೆಯ ವಸೂಲಾತಿ ಕರೆ ಸಮಯವನ್ನು ಕಾಯ್ದುಕೊಂಡಿದೆ. ಬ್ಯಾಂಕುಗಳು ತಮ್ಮ ಏಜೆಂಟರ ನಡವಳಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಮೇಲ್ವಿಚಾರಣಾ ವ್ಯವಸ್ಥೆಯನ್ನು ಇಟ್ಟುಕೊಳ್ಳಬೇಕು. ವಸೂಲಾತಿ ಏಜೆಂಟ್‌ಗಳು ಸಾಲಗಾರರ ಸಂಬಂಧಿಕರು, ಸ್ನೇಹಿತರು ಅಥವಾ ಸಹೋದ್ಯೋಗಿಗಳಿಗೆ ಕಿರುಕುಳ ನೀಡುವಂತಿಲ್ಲ.
ಸಾಲ ಮರುಪಾವತಿ ಕಾನೂನುಬದ್ಧ ಪ್ರಕ್ರಿಯೆ
ಸಾಲದ ಇಎಂಐ ಕಟ್ಟದೇ ಇರುವುದು ಹಣಕಾಸಿನ ಸಮಸ್ಯೆಯಾಗಿರಬಹುದು ಎಂದು ಆರ್‌ಬಿಐ ಹೇಳಿದೆ. ಆದರೆ ಇದು ಬ್ಯಾಂಕ್ ಅಥವಾ ವಸೂಲಾತಿ ಏಜೆಂಟ್‌ಗೆ ಯಾರನ್ನೂ ಬೆದರಿಸುವ, ನಿಂದಿಸುವ ಅಥವಾ ಅವಮಾನಿಸುವ ಹಕ್ಕಿಲ್ಲ ಎಂದು ಹೇಳಿದೆ. ಸಾಲ ವಸೂಲಾತಿ ಕಾನೂನು ಪ್ರಕ್ರಿಯೆ. ಅದನ್ನು ಕಾನೂನು ಚೌಕಟ್ಟಿನೊಳಗೆಯೇ ಪೂರ್ಣಗೊಳಿಸಬೇಕು. ಆರ್‌ಬಿಐನ ಹೊಸ ನಿಯಮ ವಸೂಲಾತಿ ಮತ್ತು ಕಿರುಕುಳದ ನಡುವೆ ಸ್ಪಷ್ಟವಾಗಿ ವ್ಯತ್ಯಾಸವನ್ನು ತೋರಿಸುತ್ತದೆ.