ಕೋಲಾರ ಜಿಲ್ಲೆಯಲ್ಲಿ ಶೇ 5ರಷ್ಟು ಬಿತ್ತನೆ: ಅನ್ನದಾತ ಕಂಗಾಲು

ಕೋಲಾರ ಜಿಲ್ಲೆಯಲ್ಲಿ ಶೇ 5ರಷ್ಟು ಬಿತ್ತನೆ: ಅನ್ನದಾತ ಕಂಗಾಲು

ಕೋಲಾರ ಜಿಲ್ಲೆಯಲ್ಲಿ ಶೇ 5ರಷ್ಟು ಬಿತ್ತನೆ: ಅನ್ನದಾತ ಕಂಗಾಲು

ಕೋಲಾರ: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಕೇವಲ ಶೇ 5ರಷ್ಟು ಬಿತ್ತನೆ ಆಗಿದ್ದು, ಮಳೆ ಕೊರತೆಯಿಂದ ರೈತರು ಕಂಗಾಲಾಗಿದ್ದಾರೆ. ಬರಪೀಡಿತ ಜಿಲ್ಲೆ ಎಂಬ ಘೋಷಣೆ ಮಾತ್ರ ಬಾಕಿ ಇದ್ದು, ಮುಂದೇನು ಎಂಬ ಚಿಂತೆ ಅನ್ನದಾತರನ್ನು ತೀವ್ರವಾಗಿ ಕಾಡುತ್ತಿದೆ.

ಮುಂಗಾರು ಹಂಗಾಮು ಅವಧಿಯಲ್ಲಿ ಅಂದರೆ ಜೂನ್‌, ಜುಲೈ ತಿಂಗಳು ಹಾಗೂ ಆಗಸ್ಟ್‌ನಲ್ಲಿ ಇಲ್ಲಿಯವರೆಗೆ ಮಳೆ ಕೊರತೆ ಉಂಟಾಗಿದ್ದು, ಬಿತ್ತನೆಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ. ‌‌ಒಂದೆರಡು ದಿನ ಚದುರಿದಂತೆ ಬಂದು ಹೋಗಿರುವ ಮಳೆ ಯಾವುದಕ್ಕೂ ಸಾಕಾಗುತ್ತಿಲ್ಲ. ಈ ಮಳೆ ನಂಬಿಕೊಂಡು ಬಿತ್ತನೆ ಮಾಡಿದರೆ ಮತ್ತೆ ಕೈಸುಟ್ಟುಕೊಳ್ಳಬೇಕಾಗುತ್ತದೆ. ಹೀಗಾಗಿ, ಉತ್ತಮ ಮಳೆ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿಂದ ಸೇರಿ ಈ ಹಂಗಾಮಿನಲ್ಲಿ ಒಟ್ಟು 85,801 ಹೆಕ್ಟೇರ್‌ ವಿಸ್ತೀರ್ಣದ ಕೃಷಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ವರೆಗೆ ಕೇವಲ 4,147 ಹೆಕ್ಟೇರ್‌ (ಶೇ 4.83) ಬಿತ್ತನೆಯಾಗಿದೆ. ಬಿತ್ತನೆಯಾದ ಪ್ರದೇಶದಲ್ಲೂ ಬಹುಪಾಲು ಬೀಜ ಮೊಳಕೆಯಾಗಿಲ್ಲ. ಮೊಳಕೆಯಾಗಿರುವುದು ತೇವಾಂಶ ಕೊರತೆಯಿಂದ ಒಣಗಲಾರಂಭಿಸಿದ್ದು, ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಅನ್ನದಾತರು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

‘ತೀವ್ರ ಬರಗಾಲ ಪರಿಸ್ಥಿತಿಯಿಂದಾಗಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಮಾಣ ತೀರಾ ಕಡಿಮೆ ಆಗಿದೆ. ಬಿತ್ತನೆ ಆಗಿರುವುದೂ ಮಳೆ ಕೊರತೆಯಿಂದ ಒಣಗುತ್ತಿದೆ. ಒಂದೆರಡು ದಿನ ಮಳೆ ಆಗಿದ್ದು, ಭರವಸೆಯಲ್ಲಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ವಿಮೆ ಮಾಡಿಸಿಕೊಂಡರೆ ಒಳ್ಳೆಯದು. ಜೊತೆಗೆ ಅಲ್ಪಾವಧಿ ಬೆಳೆಗೆ ಒತ್ತು ಕೊಡಬೇಕು’ ಎಂದು ಜಂಟಿ ಕೃಷಿ ನಿರ್ದೇಶಕಿ ಎಂ.ಎನ್‌.ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂಗಾರು ಅವಧಿಯಲ್ಲಿ ಅಂದರೆ ಜೂನ್‌ 1ರಿಂದ ಆಗಸ್ಟ್‌ 7ರವರೆಗೆ ಜಿಲ್ಲೆಯಲ್ಲಿ 86 ಮಿ.ಮೀ. ಮಳೆ ಆಗಿದೆ. ಈ ಸಂದರ್ಭದಲ್ಲಿ ವಾಡಿಕೆ ಮಳೆ 164 ಮಿ.ಮೀ ಆಗಬೇಕಿತ್ತು. ಶೇ 47 ರಷ್ಟು ಕೊರತೆ ಆಗಿದೆ. ಅದರಲ್ಲೂ ಜುಲೈ ತಿಂಗಳಿನಲ್ಲಿ ಶೇ 81ರಷ್ಟು ಮಳೆ ಕೊರತೆ ಉಂಟಾಗಿತ್ತು.

ಜಿಲ್ಲೆಯಲ್ಲಿ ಕೋಲಾರ ತಾಲ್ಲೂಕಿನಲ್ಲಿ (ಶೇ 1.48) ತೀರಾ ಕಡಿಮೆ ಬಿತ್ತನೆಯಾಗಿದೆ. ಮುಳಬಾಗಿಲು ತಾಲ್ಲೂಕಿನಲ್ಲಿ (ಶೇ 10.52) ಹೆಚ್ಚಿನ ಪ್ರಮಾಣದ ಬಿತ್ತನೆ ಆಗಿದೆ.

ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ರಾಗಿಯನ್ನು ಈ ಬಾರಿ ಒಟ್ಟು 61 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಇಟ್ಟುಕೊಳ್ಳಲಾಗಿದೆ. ಆದರೆ, ಈವರೆಗೆ ಕೇವಲ 831 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಒಂದೆರಡು ದಿನ ಮಳೆ ಬಂತೆಂದು ಕೆಲ ರೈತರು ರಾಗಿ ಬಿತ್ತನೆ ಮಾಡಿದ್ದು, ಮೊಳಕೆಯಲ್ಲೇ ಒಣಗುತ್ತಿದೆ. ಜಿಲ್ಲೆಯಲ್ಲಿ ರಾಗಿ ಬಿತ್ತನೆಗೆ ಇನ್ನಷ್ಟು ಕಾಲಾವಕಾಶವಿದ್ದು, ರೈತರು ಮಳೆ ನಿರೀಕ್ಷೆಯಲ್ಲಿದ್ದಾರೆ.

‘ಈಗಾಗಲೇ ಒಮ್ಮೆ ರಾಗಿ ಬಿತ್ತಿದ್ದು, ಬೆಳೆ ಮೊಳಕೆಯೂ ಬಂದಿಲ್ಲ. ಮೊಳಕೆ ಬಂದಿರುವ ಕಡೆ ಒಣಗುತ್ತಿದೆ. ಈ ಬಾರಿ ಇದೇ ರೀತಿ ಮಳೆ ಕೈಕೊಟ್ಟರೆ ಮುಂದೆ ತುಂಬಾ ಕಷ್ಟವಾಗಲಿದೆ. ನಮಗೆ ಮುದ್ದೆ ಸಿಗಲ್ಲ; ಜಾನುವಾರುಗಳಿಗೆ ಮೇವು ಸಿಗಲ್ಲ’ ಎಂದು ರೈತರು ಆತಂಕ ಹೇಳಿಕೊಂಡಿದ್ದಾರೆ.

ತೊಗರಿ ಹಾಗೂ ಶೇಂಗಾ ಬಿತ್ತನೆಯೂ ಸರಿಯಾಗಿ ನಡೆಯಲಿಲ್ಲ. ತೀರಾ ಅಲ್ಪ ಪ್ರಮಾಣದಲ್ಲಿ ಬಿತ್ತನೆ ಮಾಡಿದ್ದರು. ಆ ಬಾಕಿ ಜಾಗದಲ್ಲಿ ರಾಗಿ ಬಿತ್ತನೆ ಮಾಡಿಕೊಳ್ಳಲು ಜಮೀನು ಹದ ಮಾಡಿಟ್ಟುಕೊಂಡ ರೈತರಿಗೆ ಮಳೆ ಕರುಣೆ ತೋರಲಿಲ್ಲ. ಅವರೆ, ಜೋಳ, ಅಲಸಂದೆ ಬಿತ್ತನೆಗೂ ಹಿನ್ನಡೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-18-91422938

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ