ಗೌರಿ ಕಲ್ಯಾಣ ಧಾರಾವಾಹಿ: ಮೋನಿಕಾ ಗರ್ಭಿಣಿಯಲ್ಲ ಎನ್ನುವ ಸತ್ಯ ಮನೆಯವರೆದುರು ಬಯಲು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಗೌರಿ ಕಲ್ಯಾಣ’ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಗರ್ಭಿಣಿಯೆಂದು ಸುಳ್ಳು ಹೇಳುವ ಮೂಲಕ ಧೀನಬಂದು ಮನೆಯ ಸೊಸೆಯಾಗಿದ್ದ ಮೋನಿಕಾ ಅಸಲಿಯತ್ತು ಬಯಲಾಗಿದೆ.
ಭಾನುವಾರ ಪ್ರಸಾರವಾಗುವ ಸಂಚಿಕೆಯ ಪ್ರೊಮೋದಲ್ಲಿ ಮೋನಿಕಾ ಬಣ್ಣ ಬಯಲಾದ ಬಗ್ಗೆ ತೋರಿಸಲಾಗಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೋನಿಕಾ ಆನ್‌ಲೈನ್‌ನಲ್ಲಿ ಮಾತ್ರೆಗಳನ್ನು ತರಿಸಿಕೊಂಡಿದ್ದಳು. ಇದನ್ನು ನೋಡಿದ್ದ ಅತ್ತೆ ಚಂಚಲಾ, ಗೂಢಾಚಾರಿಕೆ ಮಾಡಿ ಯಾವ ಮಾತ್ರೆಗಳು ತೆಗೆದುಕೊಂಡಿದ್ದಾಳೆ ಎಂದು ಪತ್ತೆ ಮಾಡಿದ್ದಾಳೆ. ಆಗ ಮೋನಿಕಾ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡಿರುವುದು ಗೊತ್ತಾಗಿದೆ. ನೋವಿನ ಮಾತ್ರೆಗಳನ್ನು ಪಡೆದಿದ್ದಾಳೆ ಎಂದರೆ ಮೋನಿಕಾ ಗರ್ಭಿಣಿಯಲ್ಲ ಎಂಬುದನ್ನು ಚಂಚಲಾ ಕಂಡುಕೊಂಡಿದ್ದಾಳೆ.
ಇದೇ ವಿಚಾರವನ್ನು ಗಂಡ ಅನಿಕೇತ್ ಎದುರೇ ಮೋನಿಕಾ ಬಳಿ ಕೇಳುತ್ತಿದ್ದಾಗ ಗೌರಿ ಬಂದಿದ್ದಾಳೆ. ಏನಾಗಿದೆ ಎಂದು ಕೇಳಿದಾಗ ಮೋನಿಕಾ, ಸತ್ಯ ಗೊತ್ತಾಗಿದೆ ಎಂದು ಉತ್ತರಿಸಿದ್ದಾಳೆ. ಇದರಿಂದ ಗೌರಿ ಆಘಾತಕ್ಕೆ ಒಳಗಾಗಿದ್ದಾಳೆ. ಮುಂದೆ ಏನಾಗಲಿದೆ ಎನ್ನುವುದು ಭಾನುವಾರದ ಸಂಚಿಕೆಯಲ್ಲಿ ತಿಳಿಯಲಿದೆ.
ಹೆತ್ತವರ ನೆರವಿಗೆ ನಿಂತ ಗೌರಿ
ಸಾಲ ತೀರಿಸಲು ಗೌರಿ ಹೆತ್ತವರು ಮನೆಯನ್ನು ಅಡವಿಟ್ಟ ಸುದ್ದಿ ಕೇಳಿ ಗೌರಿ ನೊಂದಿದ್ದಳು. ಗೌರಿ ನೋವಿನ ಬಗ್ಗೆ ಶ್ಯಾಮ್ ಬಳಿ ಕೇಳಿ ತಿಳಿದುಕೊಂಡಿದ್ದ ವಿವೇಕ್, ಗೌರಿಗೆ ಹೇಗಾದರೂ ಸಹಾಯ ಮಾಡಬೇಕೆಂದು ಯೋಚಿಸಿದ್ದ. ಹೀಗಾಗಿ ಗೌರಿ ಮಾಡಿಕೊಟ್ಟ ಆಭರಣದ ವಿನ್ಯಾಸಗಳಿಗೆ ಹಣ ನೀಡಿದ್ದಾನೆ. ಆ ಹಣವನ್ನು ಪಡೆದ ಗೌರಿ ಸಂಕಷ್ಟದಲ್ಲಿರುವ ತವರನ್ನು ಉಳಿಸಬೇಕೆಂದು ನಿರ್ಧರಿಸಿ ಹೊರಟಿದ್ದಾಳೆ.