
Rarest Stars: ಕೋಟ್ಯಂತರ ನಕ್ಷತ್ರಗಳ ನಡುವೆ ಇವು ಬಹಳ ಅಪರೂಪ! ವಿಶ್ವದ 7 ವಿಚಿತ್ರ ನಕ್ಷತ್ರಗಳು
ನೆನಪಿದೆಯಾ? ಬಾಲ್ಯದಲ್ಲಿ ಮನೆಯ ಟೆರೇಸ್ ಮೇಲೆ ಮಲಗಿ, ಮೇಲೆ ಆಕಾಶದಲ್ಲಿ ಕಾಣುವ ನಕ್ಷತ್ರಗಳ ಎಣಿಸುತ್ತಲೇ ನಿದ್ದೆ ಹೋಗುತ್ತಿದ್ದೆವು. ಕೆಲವೊಮ್ಮೆ ಅಮ್ಮನೋ ಅಪ್ಪನೋ ಅದೋ ನೋಡು ಧ್ರುವ ನಕ್ಷತ್ರ, ಅಲ್ಲಿದೆ ಇದು ಸಪ್ತರ್ಷಿ ಮಂಡಲ ಎಂದೆಲ್ಲ ವಿವರಣೆ ನೀಡುತ್ತಿದ್ದರು. ಆದರೆ ಇವೆಲ್ಲಾ ನಮ್ಮ ಕ್ಷೀರಪಥದಲ್ಲೇ ಇರುವಂಥದು, ಅದಕ್ಕಿಂತ ಆಚೆಗೆ ನೋಡಲು ನಮಗೆ ಸಾಧ್ಯವಿಲ್ಲ ಎಂದು ನಮಗೆ ಗೊತ್ತಿರಲಿಲ್ಲ.
ರಾತ್ರಿ ಆಕಾಶವನ್ನು ನೋಡಿದಾಗ ನಮಗೆ ಕಾಣಿಸುವ ನಕ್ಷತ್ರಗಳೆಲ್ಲವೂ ಒಂದೇ ರೀತಿಯವು ಎಂದು ಅನಿಸಬಹುದು. ಆದರೆ ಅದು ನಿಜವಲ್ಲ. ನಕ್ಷತ್ರಗಳಲ್ಲೂ ಹಲವು ಬಗೆಗಳಿವೆ. ಹಾಗೇ ಎಲ್ಲವೂ ಕಾಣಿಸೋದಿಲ್ಲ. ಕೆಲವು ಸಾಮಾನ್ಯವಾಗಿದ್ದರೆ, ಇನ್ನೂ ಕೆಲವು ಎಷ್ಟು ಅಪರೂಪ ಎಂದರೆ ನಮ್ಮ ಇಡೀ ಕ್ಷೀರಪಥ ಗ್ಯಾಲಕ್ಸಿಯಲ್ಲೇ ಬೆರಳೆಣಿಕೆಯಷ್ಟು ಮಾತ್ರ ಕಂಡುಬರುತ್ತವೆ.
ಇಂತಹ ಅಪರೂಪದ ನಕ್ಷತ್ರಗಳು ವಿಜ್ಞಾನಿಗಳ ಗಮನ ಸೆಳೆಯುತ್ತವೆ. ಏಕೆಂದರೆ ಅವುಗಳ ಮೂಲಕ ನಕ್ಷತ್ರಗಳು ಹೇಗೆ ಹುಟ್ಟುತ್ತವೆ, ಹೇಗೆ ಬೆಳೆಯುತ್ತವೆ ಮತ್ತು ಕೊನೆಗೆ ಹೇಗೆ ಸಾಯುತ್ತವೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಇನ್ನೂ ಕುತೂಹಲಕಾರಿ ಸಂಗತಿಯೆಂದರೆ, ಈ ಕೆಲವು ನಕ್ಷತ್ರಗಳ ಅಸ್ತಿತ್ವವೇ ವಿಜ್ಞಾನಿಗಳ ಹಳೆಯ ಲೆಕ್ಕಾಚಾರಗಳಿಗೆ ಸವಾಲು ಹಾಕುವಂತಿದೆ. ಹಾಗಾದರೆ ವಿಶ್ವದಲ್ಲೇ ಅಪರೂಪದ ನಕ್ಷತ್ರಗಳು ಯಾವುವು ಎಂದು ಇಲ್ಲಿ ತಿಳಿಯಿರಿ.
1. ವೈಟ್ ಡ್ವಾರ್ಫ್ ಪಲ್ಸಾರ್
ಕನ್ನಡದಲ್ಲಿ ಶ್ವೇತ ಕುಬ್ಜ ಎಂದು ಕರೆಯಬಹುದು ಇದನ್ನು. 'ವೈಟ್ ಡ್ವಾರ್ಫ್' ಎಂದರೆ ತನ್ನ ಜೀವನದ ಕೊನೆಯ ಹಂತದಲ್ಲಿರುವ, ಅತ್ಯಂತ ಸಾಂದ್ರವಾಗಿರುವ ನಕ್ಷತ್ರದ ಅವಶೇಷ. ಆದರೆ ಇವುಗಳಲ್ಲಿ ಕೆಲವು ಅತ್ಯಂತ ವೇಗವಾಗಿ ತಿರುಗುತ್ತಾ ನಿಯಮಿತವಾಗಿ ವಿದ್ಯುತ್ಕಾಂತೀಯ ಸಂಕೇತಗಳನ್ನು ಹೊರಸೂಸುತ್ತವೆ. ಅದಕ್ಕೇ ಇವುಗಳಿಗೆ ವೈಟ್ ಡ್ವಾರ್ಫ್ ಪಲ್ಸಾರ್ ಎಂಬ ಹೆಸರು.
ಇದು ಸಾಮಾನ್ಯ ವೈಟ್ ಡ್ವಾರ್ಫ್ ಅಲ್ಲ. ಪಲ್ಸಾರ್‌ಗಳೆಂದರೆ ಸಾಮಾನ್ಯವಾಗಿ ನ್ಯೂಟ್ರಾನ್ ನಕ್ಷತ್ರಗಳೊಂದಿಗೆ ಹೆಚ್ಚು ಸಂಬಂಧ ಹೊಂದಿರುವ ವಿದ್ಯಮಾನ. ಹಾಗಾಗಿ ಪಲ್ಸಾರ್‌ನಂತಹ ವರ್ತನೆ ತೋರಿಸುವ ವೈಟ್ ಡ್ವಾರ್ಫ್‌ಗಳು ವಿಜ್ಞಾನಿಗಳಿಗೆ ವಿಶೇಷ. ಇವುಗಳನ್ನು ಪತ್ತೆಹಚ್ಚುವುದೂ ಸುಲಭವಲ್ಲ. ಈವರೆಗೆ ಇಂತಹ ನಕ್ಷತ್ರಗಳ ಸಂಖ್ಯೆ ಬಹಳ ಕಡಿಮೆ. ಆಕಾಶದಲ್ಲಿ ಕೋಟ್ಯಂತರ ನಕ್ಷತ್ರಗಳಿದ್ದರೂ ಇಂತಹ ಅಪರೂಪದ ನಕ್ಷತ್ರಗಳು ಬೆರಳೆಣಿಕೆಯಷ್ಟು ಮಾತ್ರ.
2. ಥಾರ್ನ್-ಜೈಟ್ಕೋ ವಸ್ತು
ಇದು ಕೇಳಲು ಯಾವುದೋ ವೈಜ್ಞಾನಿಕ ಕಾದಂಬರಿಯ ವಸ್ತುವಿನಂತೆ ಕಾಣಬಹುದು. ಆದರೆ ಇದರ ಹಿಂದಿರುವ ಕಲ್ಪನೆ ಬಹಳ ವಿಚಿತ್ರ. ಒಂದು ದೊಡ್ಡ ಸೂಪರ್‌ಜೈಂಟ್ ನಕ್ಷತ್ರದ ಒಳಗೆ ನ್ಯೂಟ್ರಾನ್ ನಕ್ಷತ್ರ ಸೇರಿಕೊಂಡರೆ ಏನಾಗಬಹುದು? ಈ ರೀತಿಯ ಅಸಾಮಾನ್ಯ ವ್ಯವಸ್ಥೆಯನ್ನೇ ಥಾರ್ನ್-ಜೈಟ್ಕೋ ವಸ್ತು ಎಂದು ಕರೆಯಲಾಗುತ್ತದೆ.
ಇಂತಹ ವಸ್ತುಗಳು ನಿಜವಾಗಿಯೂ ಅಸ್ತಿತ್ವದಲ್ಲಿವೆ ಎಂಬುದಕ್ಕೆ ಇನ್ನೂ ಖಚಿತ ಪುರಾವೆ ಸಿಕ್ಕಿಲ್ಲ. ಕೆಲವು ವಸ್ತುಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಆದರೆ ಅವು ನಿಜವಾದ ಥಾರ್ನ್-ಜೈಟ್ಕೋ ವಸ್ತುಗಳೇ ಎಂಬುದು ಇನ್ನೂ ಚರ್ಚೆಯ ವಿಷಯ. ಹೀಗಾಗಿ ಇದು ವಿಶ್ವದ ಅತ್ಯಂತ ವಿಚಿತ್ರ ಹಾಗೂ ಇನ್ನೂ ಬಗೆಹರಿಯದ ನಕ್ಷತ್ರೀಯ ರಹಸ್ಯಗಳಲ್ಲಿ ಒಂದು.
3. ಹೈಪರ್‌ಜೈಂಟ್ ನಕ್ಷತ್ರಗಳು
'ಹೈಪರ್‌ಜೈಂಟ್' ಎಂಬ ಹೆಸರೇ ಇವುಗಳ ಗಾತ್ರದ ಬಗ್ಗೆ ಹೇಳುತ್ತದೆ. ಇವು ಸಾಮಾನ್ಯ ನಕ್ಷತ್ರಗಳಿಗಿಂತ ಅತಿದೊಡ್ಡವು. ಅಪಾರ ಪ್ರಮಾಣದ ದ್ರವ್ಯರಾಶಿ ಹೊಂದಿರುವ ಈ ನಕ್ಷತ್ರಗಳು ಅತ್ಯಂತ ಪ್ರಕಾಶಮಾನವಾಗಿರುತ್ತವೆ. ಆದರೆ ಅವುಗಳ ಜೀವನ ಹೆಚ್ಚು ದೀರ್ಘವಾಗಿರುವುದಿಲ್ಲ.
ಏಕೆಂದರೆ ಇವು ತಮ್ಮಲ್ಲಿರುವ ಇಂಧನವನ್ನು ಬಹಳ ವೇಗವಾಗಿ ಬಳಸುತ್ತವೆ. ಜೊತೆಗೆ ಅವುಗಳ ಹೊರಪದರದಲ್ಲಿ ಭಾರೀ ಬದಲಾವಣೆಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ಅಪಾರ ಪ್ರಮಾಣದ ಅನಿಲ ಮತ್ತು ವಸ್ತುಗಳನ್ನು ಬಾಹ್ಯಾಕಾಶಕ್ಕೆ ಹೊರಹಾಕುತ್ತವೆ. ನಮ್ಮ ಸೂರ್ಯನಿಗಿಂತ ಸಾವಿರಾರು ಪಟ್ಟು ದೊಡ್ಡದಾಗಿರುವ ಹೈಪರ್‌ಜೈಂಟ್‌ಗಳೂ ಇವೆ. ಇಂತಹ ನಕ್ಷತ್ರಗಳ ಸಂಖ್ಯೆ ಬಹಳ ಕಡಿಮೆ. ಇದೇ ಕಾರಣಕ್ಕೆ ಇವುಗಳನ್ನು ಅಧ್ಯಯನ ಮಾಡುವುದು ವಿಜ್ಞಾನಿಗಳಿಗೆ ಅಮೂಲ್ಯ ಅವಕಾಶ.
4. O-ಟೈಪ್ ಭಾರಿ ನಕ್ಷತ್ರಗಳು
ನಮ್ಮ ಸೂರ್ಯನನ್ನು ಒಂದು ಸಾಮಾನ್ಯ ನಕ್ಷತ್ರ ಎಂದುಕೊಂಡರೆ, O-ಟೈಪ್ ನಕ್ಷತ್ರಗಳು ಅದಕ್ಕೆ ಹೋಲಿಸಿದರೆ ದೈತ್ಯರಂತೆ. ಇವು ಅತ್ಯಂತ ಬಿಸಿಯಾಗಿರುತ್ತವೆ. ಸಾಮಾನ್ಯವಾಗಿ ನೀಲಿ ಅಥವಾ ನೀಲಿ-ಬಿಳಿ ಬಣ್ಣದಲ್ಲಿ ಕಾಣುತ್ತವೆ. ಅತಿಯಾದ ಪ್ರಮಾಣದಲ್ಲಿ ಅಲ್ಟ್ರಾವಯೊಲೆಟ್ ಕಿರಣಗಳನ್ನು ಹೊರಸೂಸುತ್ತವೆ.
ಇವುಗಳ ದೊಡ್ಡ ವಿಶೇಷತೆಯೇ ಅಪರೂಪತೆ. ಸೂರ್ಯನ ಸುತ್ತಮುತ್ತಲಿನ ನಕ್ಷತ್ರಗಳನ್ನು ಗಮನಿಸಿದರೆ O-ಟೈಪ್ ನಕ್ಷತ್ರಗಳು ಸುಮಾರು 0.00003% ಮಾತ್ರ ಎಂದು NASA ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಸುಮಾರು 30 ಲಕ್ಷ ನಕ್ಷತ್ರಗಳಲ್ಲಿ ಒಂದಷ್ಟೇ O-ಟೈಪ್ ಆಗಿರಬಹುದು. ಇಷ್ಟು ದೊಡ್ಡ ನಕ್ಷತ್ರಗಳು ಬಹಳ ವೇಗವಾಗಿ ಇಂಧನವನ್ನು ಬಳಸಿಕೊಳ್ಳುವುದರಿಂದ ಅವುಗಳ ಜೀವನವೂ ತುಲನಾತ್ಮಕವಾಗಿ ಚಿಕ್ಕದು. ಅವು ಸ್ಫೋಟಗೊಂಡು ಸೂಪರ್‌ನೋವಾ ಆಗುವ ಹಂತ ತಲುಪುವ ಮೊದಲೇ ಹಲವು ಬದಲಾವಣೆಗಳನ್ನು ಅನುಭವಿಸುತ್ತವೆ.
5. ವುಲ್ಫ್-ರಯೆಟ್ ನಕ್ಷತ್ರಗಳು
ಇವು ಕೂಡ ನಕ್ಷತ್ರಗಳ ಜಗತ್ತಿನ ಅಪರೂಪದ ದೈತ್ಯರು.ವುಲ್ಫ್-ರಯೆಟ್ ನಕ್ಷತ್ರಗಳು ಅತ್ಯಂತ ಬಿಸಿಯಾಗಿದ್ದು, ಭಾರೀ ಪ್ರಮಾಣದಲ್ಲಿ ಅನಿಲವನ್ನು ತಮ್ಮ ಮೇಲ್ಮೈಯಿಂದ ಹೊರಗೆ ಎಸೆಯುತ್ತಿರುತ್ತವೆ. ಇವುಗಳ ಅನಿಲದ ವೇಗವೂ ಅಪಾರ. ವಿಜ್ಞಾನಿಗಳ ಅಂದಾಜಿನ ಪ್ರಕಾರ ನಮ್ಮ ಕ್ಷೀರಪಥದಲ್ಲಿ ಇಂತಹ ನಕ್ಷತ್ರಗಳ ಸಂಖ್ಯೆ 500ಕ್ಕಿಂತ ಕಡಿಮೆ ಇರಬಹುದು.
ಇವುಗಳ ಅಪರೂಪವಷ್ಟೇ ಅಲ್ಲ. ದೊಡ್ಡ ನಕ್ಷತ್ರಗಳು ತಮ್ಮ ಜೀವನದ ಕೊನೆಯ ಹಂತಗಳಲ್ಲಿ ಹೇಗೆ ಬದಲಾಗುತ್ತವೆ ಮತ್ತು ಸೂಪರ್‌ನೋವಾ ಸ್ಫೋಟಕ್ಕೆ ಮುನ್ನ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇವು ನೆರವಾಗುತ್ತವೆ. ಇನ್ನೊಂದು ಕಾರಣದಿಂದಲೂ ಇವು ಮುಖ್ಯ. ಭಾರವಾದ ಮೂಲಧಾತುಗಳು ವಿಶ್ವದಲ್ಲಿ ಹೇಗೆ ರೂಪುಗೊಳ್ಳುತ್ತವೆ ಮತ್ತು ಹರಡುತ್ತವೆ ಎಂಬುದರ ಬಗ್ಗೆ ಇವು ಸುಳಿವು ನೀಡುತ್ತವೆ.
6. ಕಾರ್ಬನ್ ನಕ್ಷತ್ರಗಳು
ನಕ್ಷತ್ರಗಳ ವಾತಾವರಣದಲ್ಲಿ ಹೈಡ್ರೋಜನ್ ಮತ್ತು ಹೀಲಿಯಂ ಸಾಮಾನ್ಯವಾಗಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕಾರ್ಬನ್ ನಕ್ಷತ್ರಗಳ ವಾತಾವರಣದಲ್ಲಿ ಕಾರ್ಬನ್ ಪ್ರಮಾಣ ಗಮನಾರ್ಹವಾಗಿ ಹೆಚ್ಚಿರುತ್ತದೆ. ಇವು ಸಾಮಾನ್ಯ ನಕ್ಷತ್ರಗಳಿಗಿಂತ ವಿಭಿನ್ನ ರಾಸಾಯನಿಕ ಸಂಯೋಜನೆಯನ್ನು ಹೊಂದಿರುತ್ತವೆ.
ನಕ್ಷತ್ರಗಳ ಒಳಗೆ ನಡೆಯುವ ಅಣುಸಮ್ಮಿಳನ ಪ್ರಕ್ರಿಯೆಗಳು ಮತ್ತು ಅವುಗಳ ಜೀವನದ ಕೊನೆಯ ಹಂತಗಳಲ್ಲಿ ನಡೆಯುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಇಂತಹ ನಕ್ಷತ್ರಗಳು ವಿಜ್ಞಾನಿಗಳಿಗೆ ಸಹಾಯ ಮಾಡುತ್ತವೆ. ನಮ್ಮ ಕ್ಷೀರಪಥದಲ್ಲಿ ಇವು ಕೂಡ ಅಪರೂಪ.
7. HADS(B) ನಕ್ಷತ್ರಗಳು
ಈ ಹೆಸರನ್ನು ನೆನಪಿಟ್ಟುಕೊಳ್ಳುವುದು ಸ್ವಲ್ಪ ಕಷ್ಟ. ಆದರೆ ಇವುಗಳ ವರ್ತನೆ ಕುತೂಹಲಕಾರಿ. HADS(B) ನಕ್ಷತ್ರಗಳು ಒಂದು ರೀತಿಯ ಬದಲಾಗುವ ನಕ್ಷತ್ರಗಳು. ಅಂದರೆ ಇವುಗಳ ಹೊಳಪು ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಇವುಗಳ ಬೆಳಕಿನ ಬದಲಾವಣೆ ಸಾಮಾನ್ಯ ರೀತಿಯದ್ದಲ್ಲ. ಅದರಲ್ಲೂ ಬೆಳಕಿನ ಏರಿಳಿತದಲ್ಲಿ ಒಂದು ರೀತಿಯ ಅಸಮತೋಲನ ಕಂಡುಬರುತ್ತದೆ.
ಇದುವರೆಗೆ ಇಂತಹ ನಕ್ಷತ್ರಗಳ ಸಂಖ್ಯೆ ಕೇವಲ ನೂರರ ಆಸುಪಾಸಿನಲ್ಲಿದೆ ಎಂದು ಹೇಳಲಾಗುತ್ತದೆ. ಹೀಗಾಗಿ ನಕ್ಷತ್ರಗಳ ಒಳಗೆ ನಡೆಯುವ ಕಂಪನಗಳು ಮತ್ತು ಅವುಗಳ ರಚನೆಯ ಬಗ್ಗೆ ತಿಳಿದುಕೊಳ್ಳಲು ಇವು ವಿಜ್ಞಾನಿಗಳಿಗೆ ವಿಶೇಷ ಪ್ರಯೋಗಾಲಯಗಳಂತಿವೆ.
ಈ ನಕ್ಷತ್ರಗಳು ಏಕೆ ಮುಖ್ಯ?
ಅಪರೂಪದ ನಕ್ಷತ್ರಗಳನ್ನು ಹುಡುಕುವುದರಲ್ಲಿ ವಿಜ್ಞಾನಿಗಳಿಗೆ ಕುತೂಹಲ, ಕಾರಣಗಳಿರುತ್ತವೆ. ನಕ್ಷತ್ರಗಳ ಜೀವನವನ್ನು ಒಂದು ರೀತಿಯಲ್ಲಿ ಹುಟ್ಟು, ಬೆಳವಣಿಗೆ ಮತ್ತು ಸಾವು ಎಂದು ನೋಡಬಹುದು. ಕೆಲವು ನಕ್ಷತ್ರಗಳು ನಿಧಾನವಾಗಿ ತಮ್ಮ ಇಂಧನವನ್ನು ಬಳಸುತ್ತವೆ. ಕೆಲವು ಬಹಳ ವೇಗವಾಗಿ ಬದಲಾಗುತ್ತವೆ. ಕೆಲವು ಸ್ಫೋಟಗೊಂಡು ತಮ್ಮಲ್ಲಿರುವ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಹರಡುತ್ತವೆ.
ಈ ಪ್ರಕ್ರಿಯೆಗಳಲ್ಲೇ ವಿಶ್ವದ ಅನೇಕ ಭಾರವಾದ ಮೂಲಧಾತುಗಳು ರೂಪುಗೊಳ್ಳುತ್ತವೆ ಅಥವಾ ಹರಡುತ್ತವೆ. ಹೀಗಾಗಿ ಇಂತಹ ಅಪರೂಪದ ನಕ್ಷತ್ರಗಳನ್ನು ಅಧ್ಯಯನ ಮಾಡುವ ಮೂಲಕ ವಿಜ್ಞಾನಿಗಳು ಒಂದು ನಕ್ಷತ್ರದ ಕಥೆಯ ಜೊತೆಗೆ ವಿಶ್ವ ಹೇಗೆ ಬದಲಾಗುತ್ತಾ ಬಂದಿದೆ ಎಂಬುದನ್ನೂ ಅರ್ಥ ಮಾಡಿಕೊಳ್ಳುತ್ತಾರೆ.
ಈ ದೃಷ್ಟಿಯಿಂದ ಹೈಪರ್‌ಜೈಂಟ್‌ಗಳಂತಹ ನಕ್ಷತ್ರಗಳು ವೈಜ್ಞಾನಿಕವಾಗಿ ಬಹಳ ಉಪಯುಕ್ತ. ಅವುಗಳ ಅತಿದೊಡ್ಡ ಗಾತ್ರ, ಅಸ್ಥಿರ ಸ್ವಭಾವ ಮತ್ತು ಭಾರವಾದ ಮೂಲಧಾತುಗಳನ್ನು ವಿಶ್ವಕ್ಕೆ ಹರಡುವಲ್ಲಿ ಅವುಗಳ ಪಾತ್ರ ವಿಜ್ಞಾನಿಗಳಿಗೆ ವಿಶೇಷ ಆಸಕ್ತಿ ಮೂಡಿಸುತ್ತದೆ. ಉದಾಹರಣೆಗೆ UY Scuti ಎಂಬ ನಕ್ಷತ್ರ, ಸೂರ್ಯನಿಗಿಂತ ಅಪಾರ ಪ್ರಮಾಣದಲ್ಲಿ ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. ಇಂತಹ ದೈತ್ಯ ನಕ್ಷತ್ರಗಳನ್ನು ಅಧ್ಯಯನ ಮಾಡುವುದರಿಂದ ನಕ್ಷತ್ರಗಳು ತಮ್ಮ ಜೀವನದ ಕೊನೆಯ ಹಂತದಲ್ಲಿ ಹೇಗೆ ಬದಲಾಗುತ್ತವೆ ಎಂಬುದನ್ನು ತಿಳಿಯಬಹುದು.