
ಜೆಡಿಎಸ್ ಪಾದಯಾತ್ರೆಯಿಂದ ಬಿಎಸ್‌ವೈ ದೂರ: ಮೈತ್ರಿ ಗೊಂದಲದ ಬಗ್ಗೆ ಸ್ಟಷ್ಟನೆ ನೀಡಿದ ಬಿ ವೈ ವಿಜಯೇಂದ್ರ
ಬೆಂಗಳೂರು: ಬಿಡದಿ ರೈತರ ಜಮೀನು ಹಾಗೂ ರೈತರ ಹಿತರಕ್ಷಣೆಯ ವಿಚಾರದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ಗೊಂದಲವಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಎರಡೂ ರೈತರ ಹಿತಕ್ಕಾಗಿ ಹೋರಾಟ ನಡೆಸುತ್ತಿದ್ದು, ರೈತರ ಹಿತರಕ್ಷಣೆಯೇ ನಮ್ಮೆಲ್ಲರ ಸಾಮಾನ್ಯ ಉದ್ದೇಶವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸ್ಪಷ್ಟಪಡಿಸಿದರು.
ಬಿಡದಿ ಪಾದಯಾತ್ರೆಯ ಕುರಿತು ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಕಳೆದ ವಾರ ದೂರವಾಣಿ ಮೂಲಕ ಮಾತನಾಡಿ, ಬಿಜೆಪಿ ಕೂಡ ರೈತರ ಪರವಾಗಿದ್ದು, ಬಿಜೆಪಿ-ಜೆಡಿಎಸ್ ಎರಡೂ ಪಕ್ಷಗಳು ಒಟ್ಟಾಗಿ ಪಾದಯಾತ್ರೆ ನಡೆಸುವ ಕುರಿತು ಚರ್ಚಿಸಿದ್ದೆ. ಇದಕ್ಕೆ ಕುಮಾರಸ್ವಾಮಿ ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎಂದು ವಿಜಯೇಂದ್ರ ತಿಳಿಸಿದರು.
ನಂತರ ಜೆಡಿಎಸ್ ವತಿಯಿಂದ ಪಾದಯಾತ್ರೆಯ ದಿನಾಂಕವನ್ನು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿ, ಯಾವುದೇ ಕಾರಣಕ್ಕೂ ಗೊಂದಲಕ್ಕೆ ಅವಕಾಶ ನೀಡಬಾರದು ಎಂಬ ನಿರ್ಧಾರಕ್ಕೆ ಬರಲಾಯಿತು. ಜೆಡಿಎಸ್ ಈಗಾಗಲೇ ದಿನಾಂಕ ಘೋಷಿಸಿರುವ ಹಿನ್ನೆಲೆಯಲ್ಲಿ, ಸಾಂಕೇತಿಕವಾಗಿ ಪಾದಯಾತ್ರೆಗೆ ಬೆಂಬಲ ನೀಡಬೇಕು ಮತ್ತು ಸದನದ ಒಳಗೂ ರೈತರ ಪರವಾಗಿ ಹೋರಾಟ ಮುಂದುವರಿಸಬೇಕು ಎಂದು ತೀರ್ಮಾನಿಸಲಾಗಿದೆ ಎಂದರು.
ತಾವು ಪಾದಯಾತ್ರೆಯಲ್ಲಿ ಭಾಗವಹಿಸದಿರುವುದಕ್ಕೆ ಯಾವುದೇ ರಾಜಕೀಯ ಕಾರಣವಿಲ್ಲ. ಚಿಕ್ಕಬಳ್ಳಾಪುರ ಮತ್ತು ಕೋಲಾರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮಗಳು ಹಲವು ಬಾರಿ ಮುಂದೂಡಲ್ಪಟ್ಟಿದ್ದವು. ಭಾನುವಾರ ಕಾರ್ಯಕ್ರಮ ನಡೆಸಬೇಕೆಂಬ ಸ್ಥಳೀಯ ನಾಯಕರ ಒತ್ತಾಯದ ಹಿನ್ನೆಲೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮದಂತೆ ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ತೆರಳಬೇಕಾಯಿತು ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಪಕ್ಷದ ಮುಖಂಡರು ಸಾಂಕೇತಿಕವಾಗಿ ಪಾದಯಾತ್ರೆಗೆ ಬೆಂಬಲ ನೀಡಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಒಳಗೆ ಯಾವುದೇ ರೀತಿಯ ಗೊಂದಲವಿಲ್ಲ. ರೈತರ ಹೋರಾಟದ ವಿಚಾರದಲ್ಲಿ ಬಿಜೆಪಿ ಸದಾ ರೈತರ ಪರವಾಗಿಯೇ ನಿಲ್ಲಲಿದೆ ಎಂದು ಹೇಳಿದರು.
ಬಿಡದಿಯಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವ ರೈತರ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿದ್ದು, ಪರಿಹಾರ ನೀಡುವ ಹೆಸರಿನಲ್ಲಿ ಕೆಲವರನ್ನು ಹೋರಾಟದಿಂದ ಹಿಂದೆ ಸರಿಸುವ ಪ್ರಯತ್ನ ಮಾಡುತ್ತಿದೆ ಎಂಬ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ಈ ವಿಚಾರವನ್ನು ಈಗಾಗಲೇ ಸಂಬಂಧಪಟ್ಟ ಸಚಿವರ ಗಮನಕ್ಕೂ ತರಲಾಗಿದೆ ಎಂದು ವಿಜಯೇಂದ್ರ ಹೇಳಿದರು.
ಇದರ ಅರ್ಥ ಬಿಜೆಪಿ ಈ ಹೋರಾಟದಿಂದ ಹಿಂದೆ ಸರಿದಿದೆ ಎಂದಲ್ಲ. ಬಿಡದಿ ಮಾತ್ರವಲ್ಲದೆ, ರಾಜ್ಯದಾದ್ಯಂತ ರೈತರ ಜಮೀನುಗಳ ರಕ್ಷಣೆಯ ವಿಚಾರದಲ್ಲಿ ಬಿಜೆಪಿ ಹೋರಾಟ ನಡೆಸಲಿದೆ. ಬಿಡದಿ, ವಿಮಾನ ನಿಲ್ದಾಣ ಸೇರಿದಂತೆ ರೈತರ ಭೂಮಿಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ಬಿಜೆಪಿ ರೈತರ ಪರವಾಗಿ ನಿಲ್ಲಲಿದೆ ಎಂದರು.
ಚಿಕ್ಕಬಳ್ಳಾಪುರ ಪ್ರವಾಸದ ವೇಳೆ ಶಿಡ್ಲಘಟ್ಟದಲ್ಲಿಯೂ ಕೆಐಎಡಿಬಿ ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಗಮನಕ್ಕೆ ಬಂದಿದೆ. ರೈತರ ಜಮೀನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದರು.
ಮಾಜಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧದ ಗಂಭೀರ ಭ್ರಷ್ಟಾಚಾರ ಆರೋಪಗಳ ಕುರಿತು ಮಾತನಾಡಿದ ವಿಜಯೇಂದ್ರ ಅವರು, ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸರ್ಕಾರಕ್ಕೆ ಗೌರವವಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಟೀಕಿಸಿದರು.
ಪರಿಶಿಷ್ಟ ಪಂಗಡದ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ನೂರಾರು ಕೋಟಿ ರೂಪಾಯಿ ಹಣದ ದುರುಪಯೋಗಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು, ಪ್ರಕರಣದ ತನಿಖೆ ಪೂರ್ಣಗೊಳ್ಳುವ ಮುನ್ನವೇ ಹಾಗೂ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿರುವ ಸಂದರ್ಭದಲ್ಲೇ ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.