
Photography Day | ಶಿಡ್ಲಘಟ್ಟದಲ್ಲಿ ಅಳಿಯದ ಚಿತ್ರ: ಮರೆಯಾದ ನೆನಪುಗಳ ಅನಾವರಣ
ಶಿಡ್ಲಘಟ್ಟ: ಕಾಲ ಬದಲಾಯಿತು... ಪಟ್ಟಣ ಬದಲಾಯಿತು... ತಂತ್ರಜ್ಞಾನವೂ ಬದಲಾಯಿತು. ಆದರೆ ಕೆಲವು ಕ್ಷಣಗಳು ಮಾತ್ರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಕಪ್ಪು–ಬಿಳುಪಿನ ಚಿತ್ರಗಳು ಇಂದಿಗೂ ಜೀವಂತವಾಗಿವೆ.
ಒಂದು ಕಾಲದಲ್ಲಿ ಛಾಯಾಚಿತ್ರ ತೆಗೆಯುವುದು ಇಂದಿನ ಮೊಬೈಲ್‌ನಲ್ಲಿ ಕ್ಷಣಮಾತ್ರದಲ್ಲಿ ಸೆರೆಹಿಡಿದಷ್ಟು ಸುಲಭವಾಗಿರಲಿಲ್ಲ. ಕ್ಯಾಮೆರಾ, ಫಿಲ್ಮ್, ಬೆಳಕು, ಸರಿಯಾದ ಕ್ಷಣ—ಎಲ್ಲವೂ ಹೊಂದಿಕೆಯಾಗಬೇಕಿತ್ತು. ಹೀಗಾಗಿ ಆಗ ತೆಗೆದ ಒಂದೊಂದು ಚಿತ್ರವೂ ಇಂದು ಕೇವಲ ನೆನಪಲ್ಲ; ಅದು ಒಂದು ಕಾಲಘಟ್ಟದ ದಾಖಲೆಯಾಗಿದೆ.
ವಿಶ್ವ ಛಾಯಾಗ್ರಹಣ ದಿನದ ಸಂದರ್ಭದಲ್ಲಿ ಶಿಡ್ಲಘಟ್ಟದ ಹಳೆಯ ಕಪ್ಪು–ಬಿಳುಪು ಚಿತ್ರಗಳನ್ನು ತಿರುವಿ ನೋಡಿದಾಗ, ಇಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾರ್ವಜನಿಕ ಬದುಕಿನ ಹಲವು ಮಜಲುಗಳು ಕಣ್ಣ ಮುಂದೆ ತೆರೆದುಕೊಳ್ಳುತ್ತವೆ.
ಇಂದು ಸೆಲ್ಫಿ ಸಾಮಾನ್ಯವಾಗಿದೆ. ಆದರೆ, ಅಂದಿನ ಈ ಚಿತ್ರಗಳನ್ನು ಕಂಡಾಗ ಒಂದು ಚಿತ್ರ ತೆಗೆಸಿಕೊಳ್ಳಲು ಜನರು ಇಷ್ಟೊಂದು ಕಾತುರರಾಗಿರುತ್ತಿದ್ದರೇ ಎಂಬ ಪ್ರಶ್ನೆ ಕಾಡುತ್ತದೆ.
ರಾಜಕೀಯ ಇತಿಹಾಸಕ್ಕೆ ಸಾಕ್ಷಿ: 1970ರ ಅಕ್ಟೋಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ ಸಂದರ್ಭದ ಚಿತ್ರವೊಂದು ಇಲ್ಲಿನ ರಾಜಕೀಯ ಇತಿಹಾಸದ ಅಪರೂಪದ ದಾಖಲೆ ಎಂದೇ ಪರಿಗಣಿತವಾಗಿದೆ.
ಶಿಡ್ಲಘಟ್ಟ ಕಂಬೈನ್ಡ್ ಡಿಸ್ಪೆನ್ಸರಿ ಆವರಣದಲ್ಲಿ ದಾನಿಗಳಾದ ಡಾ. ಎಸ್.ಆರ್.ಎನ್. ಮೂರ್ತಿರಾವ್ ಹಾಗೂ ಮಹಾಲಕ್ಷ್ಮಮ್ಮ ಅವರ ನಿಧಿಯಿಂದ ನಿರ್ಮಾಣವಾಗುವ ಹೆರಿಗೆ ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆಗಮಿಸಿದ್ದರು. ಅಂದಿನ ವಿಧಾನಸಭಾ ಸದಸ್ಯ ಬಿ.ವೆಂಕಟರಾಯಪ್ಪ ಸೇರಿದಂತೆ ಸ್ಥಳೀಯ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಚಿತ್ರದ ದಾಖಲೆಯಿಂದ ತಿಳಿಯುತ್ತದೆ. ಇಂದು ಅಭಿವೃದ್ಧಿ ಭಾಗವಾಗಿ ಕಾಣುವ ಆಸ್ಪತ್ರೆ, ಆರೋಗ್ಯ ವ್ಯವಸ್ಥೆ ಮತ್ತು ಸಾರ್ವಜನಿಕ ಸಂಸ್ಥೆಗಳ ಹಿಂದೆ ಇಂತಹ ಹಲವು ಹೆಜ್ಜೆಗಳಿವೆ.
ಚಿತ್ರದಲ್ಲಿ ಉಳಿದ ಕಾಲ: ಶಿಡ್ಲಘಟ್ಟದ ಇತಿಹಾಸವನ್ನು ಬರಹ, ದಾಖಲೆ, ಕಟ್ಟಡ ಮತ್ತು ನೆನಪುಗಳ ಮೂಲಕ ತಿಳಿದುಕೊಳ್ಳಬಹುದು. ಆದರೆ ಛಾಯಾಚಿತ್ರ ಮಾತ್ರ ಆ ಕಾಲವನ್ನು ಕಣ್ಣಿಗೆ ಕಾಣುವಂತೆ ಮಾಡುತ್ತದೆ. ಹಳೆಯ ಚಿತ್ರಗಳನ್ನು ಗಮನಿಸಿದಾಗ ಅಂದಿನ ಉಡುಪು, ಕೇಶ ವಿನ್ಯಾಸ, ನಿಂತುಕೊಳ್ಳುವ ರೀತಿ, ಕಾರ್ಯಕ್ರಮಗಳ ಸರಳತೆ, ಜನರ ನಡುವಿನ ಆತ್ಮೀಯತೆ— ಹೀಗೆ ಎಲ್ಲ ಅಂಶಗಳನ್ನು ಒಳಗೊಂಡ ಹೂರಣ ಒಂದು ಚಿತ್ರ ನೀಡುತ್ತದೆ.
ಶಿಡ್ಲಘಟ್ಟ ಬದಲಾಗಿದೆ. ಆದರೆ, ಅದರ ನೆನಪುಗಳು ಇನ್ನೂ ಕಪ್ಪು–ಬಿಳುಪಿನಲ್ಲಿ ಜೀವಂತವಾಗಿವೆ.
ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರೊಂದಿಗೆ ಶಿಡ್ಲಘಟ್ಟದ ಮಾಜಿ ಸಚಿವ ಹಾಗೂ ಸ್ಥಳೀಯ ರಾಜಕೀಯ ಮುಖಂಡರೂ ಆದ ವಿ.ಮುನಿಯಪ್ಪ ಅವರು ಕಾಣಿಸಿಕೊಂಡ ಚಿತ್ರವೂ ಆ ಕಾಲದ ರಾಜಕೀಯ ಚಟುವಟಿಕೆಗಳ ನೆನಪನ್ನು ಹೊತ್ತು ತಂದಿದೆ.
ಇಂದಿನ ರಾಜಕೀಯ ಕಾರ್ಯಕ್ರಮಗಳಲ್ಲಿ ನೂರಾರು ಕ್ಯಾಮೆರಾಗಳು ಕಾಣಿಸಿಕೊಂಡರೂ, ಆಗ ಒಂದು ಕಾರ್ಯಕ್ರಮದಲ್ಲಿ ತೆಗೆದ ಒಂದೇ ಚಿತ್ರ ವರ್ಷಗಳ ನಂತರ ಸ್ಥಳೀಯ ಇತಿಹಾಸದ ಅಮೂಲ್ಯ ದಾಖಲೆ ಆಗುತ್ತಿತ್ತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-16-1076834707