
ಪೋಷಕರ ಆದರ್ಶಗಳಿಗೂ ಹಕ್ಕುದಾರರಾಗಿ: ಡಿವೈಎಸ್‌ಪಿ ಪ್ರಮೋದ್ ಕುಮಾರ್
ಪುತ್ತೂರು: ‘ಪ್ರಪಂಚದಲ್ಲಿ ಬೆಲೆ ಕಟ್ಟಲಾಗದಿರುವುದು ತಂದೆ ತಾಯಿಯ ಮೌಲ್ಯ. ಅವರು ಮಾಡಿಟ್ಟ ಆಸ್ತಿಗೆ ಮಾತ್ರ ಹಕ್ಕುದಾರರಾಗದೆ, ಅವರ ಆದರ್ಶಗಳಿಗೂ ಹಕ್ಕುದಾರರಾಗಬೇಕು’ ಎಂದು ಡಿವೈಎಸ್‌ಪಿ ಪ್ರಮೋದ್ ಕುಮಾರ್ ಹೇಳಿದರು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಶೀಂಟೂರು ನಾರಾಯಣ ರೈ ಅವರ 15ನೇ ವರ್ಷದ ದಿನಾಚರಣೆ ‘ಶೀಂಟೂರು ಸ್ಮೃತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸವಣೂರು ಸೀತಾರಾಮ ರೈ ಅವರು ತನ್ನ ತಂದೆ– ತಾಯಿಯ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆದು ಬಂದಿರುವುದರಿಂದಲೇ ಈ ರೀತಿಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು, ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದರು.
ಶೀಂಟೂರು ಸಂಸ್ಮರಣೆ ಮಾಡಿದ ಮೈಸೂರಿನ ಅಂತರ್ ಸಂತೆ ಕಾಲೇಜಿನ ಉಪಪ್ರಾಂಶುಪಾಲ ಸುಂದರ ಕೇನಾಜೆ ಅವರು, ‘ಶೀಂಟೂರು ನಾರಾಯಣ ರೈ ಅವರು 94 ವರ್ಷ ಬದುಕಿ ಹೆಜ್ಜೆ ಗುರುತುಗಳನ್ನು ಸಮಾಜದಲ್ಲಿ ಉಳಿಸಿದ್ದಾರೆ. ಯೋಧರಾಗಿ, ಶಿಕ್ಷಕರಾಗಿ, ಸಹಕಾರಿಯಾಗಿ ನಿಃಸ್ವಾರ್ಥ ಸೇವೆಯ ಮೂಲಕ ನಾಡು ಕಟ್ಟಿದ್ದಾರೆ. ಅವರ ಶಿಸ್ತು, ಸಮಯ ಪಾಲನೆ, ಸ್ವಾವಲಂಬನೆಯ ಬದುಕು ಸಮಾಜಕ್ಕೆ ಆದರ್ಶ’ ಎಂದರು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ, ವಕೀಲ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ದ.ಕ. ಜಿಲ್ಲಾ ಉಪನಿರ್ದೇಶಕ ಜಿ.ಎಸ್. ಶಶಿಧರ್ ಅವರು ಸುಳ್ಯ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ರೇವತಿ ನಂದನ್ ಅವರಿಗೆ ‘ಶೀಂಟೂರು ಸನ್ಮಾನ’ ಮಾಡಿದರು. ಎಸ್.ಎನ್.ಆರ್. ರೂರಲ್ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿ ಎನ್. ಸುಂದರ ರೈ ನಡುಮನೆ ಶೀಂಟೂರು ನಾರಾಯಣ ರೈ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-29-25047870