KRS Reservoir: ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳ
ಬೆಂಗಳೂರು: ಕೊಡಗಿನ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಗುರುವಾರ ಬೆಳಿಗ್ಗೆ ಹೊತ್ತಿಗೆ ಜಲಾಶಯಕ್ಕೆ 17427 ಕ್ಯುಸೆಕ್ ನೀರು ಹರಿದು ಬರುತ್ತಿದೆ. ನಿರಂತರವಾಗಿ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ನೀರಿನ ಮಟ್ಟದಲ್ಲೂ ಏರಿಕೆ ಕಂಡಿದೆ. ಜಲಾಶಯದ ನೀರಿನ ಮಟ್ಟವು 110 ಅಡಿಯನ್ನು ತಲುಪಿದೆ. ಇನ್ನೂ ಭರ್ತಿಯಾಗಲು 14 ಅಡಿ ನೀರು ಬಾಕಿಯಿದೆ.
ಎರಡು ದಿನದಿಂದ ಕಾವೇರಿ ನದಿ ಮೂಲಕ ಹೆಚ್ಚಿನ ನೀರು ಹರಿದು ಬರುತ್ತಿದೆ. ಬುಧವಾರ ಸಂಜೆ ಹೊತ್ತಿಗೆ ಒಳಹರಿವಿನ ಪ್ರಮಾಣವು 13 ಸಾವಿರ ಕ್ಯುಸೆಕ್ ದಾಟಿತ್ತು. ಗುರುವಾರ ಬೆಳಿಗ್ಗೆ ಹೊತ್ತಿಗೆ ಇದು 17 ಸಾವಿರ ಕ್ಯುಸೆಕ್ ದಾಟಿದೆ. ಸಂಜೆ ಹೊತ್ತಿಗೆ 20 ಸಾವಿರ ಕ್ಯುಸೆಕ್ ಸಮೀಪಿಸಬಹುದು.
ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 31.47 ಟಿಎಂಸಿ ನೀರು ಸಂಗ್ರಹವಿದೆ. ಇಲ್ಲಿ 49.45 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಕಳೆದ ವರ್ಷ ಇದೇ ದಿನ ಜಲಾಶಯವು ಬಹುತೇಕ ಭರ್ತಿಯಾಗಿತ್ತು.
ಜಲಾಶಯದಿಂದ ಈಗಲೂ 4514 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಇದರಲ್ಲಿ ಬೆಂಗಳೂರು ಹಾಗೂ ಇತರೆ ನಗರ, ಪಟ್ಟಣಗಳ ಕುಡಿಯುವ ನೀರು ಹಾಗೂ ನಾಲೆಗಳ ಮೂಲಕ ಕೆರೆ ತುಂಬಿಸುವ ನೀರಿನ ಪಾಲು ಸೇರಿದೆ.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ಸದ್ಯ 7676 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ, ಹೊರಹರಿವು 7760 ಕ್ಯುಸೆಕ್ ನಷ್ಟಿದೆ. ಜಲಾಶಯದ ನೀರಿನ ಮಟ್ಟವು 2272.76 ಅಡಿಗೆ ತಲುಪಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2283.40 ಅಡಿ ನೀರಿತ್ತು. ಇಲ್ಲಿ 2284 ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯವಿದೆ. ಜಲಾಶಯದಿಂದ ನಿರಂತರವಾಗಿ ನೀರು ಹೊರ ಹರಿಸುತ್ತಿರುವುದರಿಂದ ನೀರಿನ ಮಟ್ಟವು ಕುಸಿದಿದ್ದು, 13.07 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ ಇದೇ ದಿನ 19.12 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಿತ್ತು.
ಕೇರಳದ ವಯನಾಡು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಒಳಹರಿವು ನಿಧಾನವಾಗಿ ಕಡಿಮೆಯಾಗುತ್ತಿದೆ. ಈ ವಾರಾಂತ್ಯಕ್ಕೆ ಮಳೆಯಾದರೆ ಹೆಚ್ಚಿನ ನೀರು ನಿರೀಕ್ಷಿಸಬಹುದು ಎನ್ನುವುದು ಕಬಿನಿ ಜಲಾಶಯ ಅಧಿಕಾರಿಗಳ ವಿವರಣೆ.
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದರೆ, ಹೊರ ಹರಿವನ್ನು ಏರಿಕೆ ಮಾಡಲಾಗಿದೆ. ಸದ್ಯ 2210 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದರೆ, 5500 ಕ್ಯುಸೆಕ್ ಅನ್ನು ನದಿ ಮೂಲಕ ಹೊರಬಿಡಲಾಗುತ್ತಿದೆ. ಇಲ್ಲಿ ಹರಿಬಿಡುವ ಹೆಚ್ಚಿನ ನೀರು ಕೃಷ್ಣರಾಜಸಾಗರ ಜಲಾಶಯಕ್ಕೆ ಸೇರಲಿದೆ. ಜಲಾಶಯದಲ್ಲಿ ಈಗ 30 ಟಿಎಂಸಿ ನೀರಿದೆ. 37.10 ಟಿಎಂಸಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ.
ಕೊಡಗಿನ ಹಾರಂಗಿ ಜಲಾಶಯಕ್ಕೂ 4275 ಕ್ಯುಸೆಕ್ ನೀರು ಒಳಹರಿವು ಇದ್ದರೆ, 3458 ಕ್ಯುಸೆಕ್ ಹೊರ ಹರಿವು ಇದೆ. ಕೊಡಗಿನಲ್ಲಿ ಮಳೆಯಾಗುತ್ತಿರುವುದರಿಂದ ಹೆಚ್ಚಿನ ನೀರು ಬರುತ್ತಿದೆ. ಜಲಾಶಯದಲ್ಲಿ ಈಗ 8.34 ಟಿಎಂಸಿ ನೀರು ಲಭ್ಯವಿದ್ದು, 8.5ಟಿಎಂಸಿ ಸಂಗ್ರಹಿಸಲು ಅವಕಾಶವಿದೆ.