Kodagu Rain: ಕೊಡಗಿನಲ್ಲಿ ಶೇ 37 ಮಳೆ ಕೊರತೆ, ಭತ್ತದ ಬಿತ್ತನೆ ಪ್ರಮಾಣ ಅತ್ಯಲ್ಪ

Kodagu Rain: ಕೊಡಗಿನಲ್ಲಿ ಶೇ 37 ಮಳೆ ಕೊರತೆ, ಭತ್ತದ ಬಿತ್ತನೆ ಪ್ರಮಾಣ ಅತ್ಯಲ್ಪ

Kodagu Rain: ಕೊಡಗಿನಲ್ಲಿ ಶೇ 37 ಮಳೆ ಕೊರತೆ, ಭತ್ತದ ಬಿತ್ತನೆ ಪ್ರಮಾಣ ಅತ್ಯಲ್ಪ

ಬೆಂಗಳೂರು: ರಾಜ್ಯದ ಅತಿ ಹೆಚ್ಚು ಮಳೆಯಾಗುವ ಜಿಲ್ಲೆಗಳಲ್ಲಿ ಒಂದಾದ ಕೊಡಗಿನಲ್ಲಿಯೇ ಈ ಬಾರಿ ಹೆಚ್ಚು ಮಳೆಯಾಗಿಲ್ಲ. ಜುಲೈ ಅಂತ್ಯದವರೆಗೂ ಶೇ 37ರಷ್ಟು ಮಳೆ ಕೊರತೆ ಉಂಟಾಗಿದೆ. ಮಳೆಯಾಗದೇ ಕೃಷಿ ಚಟುವಟಿಕೆಯಲ್ಲೂ ನಿರೀಕ್ಷಿತ ಪ್ರಗತಿ ಆಗಿಲ್ಲ.

ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಅವರು ಮಡಿಕೇರಿಯಲ್ಲಿ ಸಭೆ ನಡೆಸಿದಾಗ ಅಧಿಕಾರಿಗಳು ಈ ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಶೇ.37 ರಷ್ಟು ಮಳೆಯ ಕೊರತೆ ಇದೆ. ಜಿಲ್ಲೆಯ ಶಾಂತಳ್ಳಿ, ಕುಶಾಲನಗರ, ಹುದಿಕೇರಿ ಭಾಗದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಉಳಿದಂತೆ ಕೊರತೆ ಇದೆ. ಜುಲೈ ತಿಂಗಳಲ್ಲಿ ವಾಡಿಕೆ ಮಳೆ 859 ಮಿ.ಮೀ ಆಗಿದ್ದು, ಇದರಲ್ಲಿ 599 ಮಿ.ಮೀ ಮಾತ್ರ ಈ ಬಾರಿ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ವಿವರಿಸಿದರು.

ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಹೋಬಳಿ ಹಾಗೂ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 20 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ಈ ಬಾರಿ ಪೂರ್ವ ಮುಂಗಾರು ಸಂದರ್ಭದಲ್ಲಿ 13 ಮತ್ತು ಮುಂಗಾರಿನಲ್ಲಿ 31 ಒಟ್ಟು 44 ಮನೆ ಹಾನಿ ಪ್ರಕರಣಕ್ಕೆ ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ. ಮುಂಗಾರು ಸಂದರ್ಭದಲ್ಲಿ ಇಬ್ಬರು ಮೃತಪಟ್ಟಿದ್ದು, ಅವರಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ ಎನ್ನುವುದು ಅವರ ವಿವರಣೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರ ಪ್ರಕಾರ, ಜಿಲ್ಲೆಯಲ್ಲಿ 19 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಭತ್ತ ಮತ್ತು ಮುಸುಕಿನ ಜೋಳ ಬಿತ್ತನೆ ಗುರಿ ಹೊಂದಲಾಗಿದ್ದು, 2800 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿದೆ. ಆಗಸ್ಟ್ ತಿಂಗಳ ಅಂತ್ಯದ ವರೆಗೂ ಭತ್ತ ನಾಟಿ ಕಾರ್ಯ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.

ಈ ಹಿಂದೆ 30 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಭತ್ತ ನಾಟಿ ಕಾರ್ಯ ಕಡಿಮೆಯಾಗುತ್ತಿದೆ.ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿರುವ ಹಿನ್ನೆಲೆ ಅಲ್ಪಾವಧಿ ಮತ್ತು ಮಧ್ಯಮಾವಧಿ ಬೆಳೆ ಬೆಳೆಯಲು ಒತ್ತು ನೀಡಲಾಗಿದೆ ಎಂದರು.

ಕಳೆದ ಮಳೆಗಾಲದಲ್ಲಿ ಶೇ 38 ಕ್ಕಿಂತ ಹೆಚ್ಚು ಭತ್ತ ನಾಟಿ ಕಾರ್ಯ ಆಗಿತ್ತು. ಈಗ ಶೇ 8 ರಷ್ಟು ಮಾತ್ರ ಭತ್ತ ನಾಟಿ ಕಾರ್ಯ ಆಗಿದೆ. ಹಾಗೆಯೇ ಮುಸುಕಿನ ಜೋಳ ಬಿತ್ತನೆ ಕಾರ್ಯವು 1800 ಹೆಕ್ಟೆರ್ ಪ್ರದೇಶದಲ್ಲಿ ಆಗಬೇಕಿದ್ದು, ಶೇ 80 ರಷ್ಟು ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಯೂರಿಯಾ, ಡಿಐಪಿ ಸೇರಿದಂತೆ ಅಗತ್ಯ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದ್ದು, ರಸಗೊಬ್ಬರದ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಶಿಧರ್, ಜಿಲ್ಲೆಯಲ್ಲಿ ಕಾಳುಮೆಣಸು, ಅಡಿಕೆ ಹಾಗೂ ಕಿತ್ತಳೆ ತೋಟಗಾರಿಕೆ ಬೆಳೆಗಳಿದ್ದು, ಕಾಳು ಮೆಣಸು ನಿಗದಿತ ಅವಧಿಯಲ್ಲಿ ಮಳೆಯಾಗದ ಹಿನ್ನೆಲೆ ಬೆಳೆಗಳ ಬೆಳವಣಿಗೆ ಸಂಬಂಧಿಸಿದಂತೆ ವಿವರಣೆ ನೀಡಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ