
ವಿಜಯಪುರ: ಆರು ವರ್ಷಗಳಾದರೂ ಬಡವರಿಗೆ ಸಿಗದ ಸೂರು....
ವಿಜಯಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರಿನಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಹೇಳಿ ವಿಜಯಪುರ ನಗರದ ಸಾವಿರಾರು ಫಲಾನುಭವಿಗಳಿಂದ ವಂತಿಕೆ ಹಣ ಪಡೆದು, ಆರು ವರ್ಷವಾದರೂ ಮನೆಗಳನ್ನು ನಿರ್ಮಿಸಿ ಕೊಡದೇ ಬಡವರಿಗೆ ಪಂಗನಾಮ ಹಾಕಿರುವ ದೊಡ್ಡ ‘ಸರ್ಕಾರಿ’ ಹಗರಣವೊಂದು ನಗರದಲ್ಲಿ ನಡೆದಿರುವ ಆರೋಪ ಕೇಳಿಬಂದಿದೆ.
ಸ್ವಂತ ಸೂರು ಸಿಗುವ ಆಸೆಯಲ್ಲಿ ಸಾವಿರಾರು ಬಡವರು ‘ಜನಪ್ರತಿನಿಧಿ’ಯೊಬ್ಬರ ಸಹಕಾರಿ ಬ್ಯಾಂಕಿನಲ್ಲೇ ಲಕ್ಷಾಂತರ ರೂಪಾಯಿ ಸಾಲ ಮಾಡಿ, ಐದಾರು ವರ್ಷಗಳಿಂದ ಬಡ್ಡಿ ಕಟ್ಟುತ್ತಿದ್ದಾರೆ. ಆದರೆ, ಇದುವರೆಗೂ ಅವರಿಗೆ ಮನೆ ಸಿಕ್ಕಿಲ್ಲ. ಅತ್ತ ಬಾಡಿಗೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇನ್ನು ಕೆಲವರು ಕೊಳೆಗೇರಿಗಳಲ್ಲೇ ವಾಸಿಸುತ್ತಿದ್ದಾರೆ.
‘ನಮೋ’ ಆವಾಸ್ ಹಗರಣದಲ್ಲಿ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ನೇರವಾಗಿ ಶಾಮೀಲಾಗಿರುವ ಆರೋಪ ಕೇಳಿಬಂದಿದ್ದು, ಲೋಕಾಯುಕ್ತ ತನಿಖೆಯಾಗಬೇಕು ಎಂಬ ಆಗ್ರಹ ಕೇಳಿಬಂದಿದೆ.
ಹೌದು, ನಗರದ ಅಥಣಿ ರಸ್ತೆಯ ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ಹಿಂಭಾಗದ ‘ನಮೋ’ ನಗರ (ನರೇಂದ್ರ ಮೋದಿ)ದಲ್ಲಿ ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯ ಬಡವರಿಗೆ ಸ್ವಂತ ಸೂರು ಕಲ್ಪಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ₹94.93 ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿ+1 ಮಾದರಿಯ 1,493 ಗುಂಪು ಮನೆಗಳ ನಿರ್ಮಾಣಕ್ಕೆ 2020 ನವೆಂಬರ್‌ನಲ್ಲಿ ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು.
ಅಂದು ಸಚಿವ, ಶಾಸಕರು ನೀಡಿದ್ದ ಭರವಸೆಯ ಪ್ರಕಾರ ಫಲಾನುಭವಿಗಳಿಗೆ 2022ರ ನವೆಂಬರ್‌ನಲ್ಲಿ ಸ್ವಂತ ಸೂರು ಸಿಗಬೇಕಿತ್ತು. ಆದರೆ, ಇದುವರೆಗೂ ಮನೆಗಳು ನಿರ್ಮಾಣವಾಗಿಲ್ಲ. ಸಮರ್ಪಕ ರಸ್ತೆ ನಿರ್ಮಾಣವಾಗಿಲ್ಲ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ, ಬೀದಿ ದೀಪ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ, ಮನೆ ನಿರ್ಮಾಣಕ್ಕೆ ಹಾಕಿರುವ ಸ್ಲ್ಯಾಬ್, ಕಾಲಂಗಳ ಅಸ್ಥಿ ಪಂಜರ ಕಾಣಿಸುತ್ತಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಬಡ ಫಲಾನುಭವಿಗಳಿಗೆ ಸೂರು ಲಭಿಸುವುದು ಮರೀಚಿಕೆಯಾಗಿದೆ.
‘ಬಂಡಿ ಇನ್ಫ್ರಾ ಪ್ರೈವೆಟ್ ಲಿಮಿಟೆಡ್’ ಮನೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ. ತಿಂಗಳಿಗೆ ಒಂದು ಮನೆ ಮಾಡಿದ್ದರೂ ಇಷ್ಟರೊಳಗೆ ಎಲ್ಲ ಮನೆಗಳು ನಿರ್ಮಾಣವಾಗಿ, ಜನರಿಂದ ತುಂಬಿ ತುಳುಕಬೇಕಿತ್ತು. ಆದರೆ, ಗುತ್ತಿಗೆದಾರರ ನಿರ್ಲಕ್ಷ್ಯ, ಮಹಾನಗರ ಪಾಲಿಕೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇಷ್ಟಾದರೂ ಸ್ಥಳೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಒಮ್ಮೆಯೂ ‘ನಮೋ ನಗರ’ದ ಕಡೆ ಗಮನ ಹರಿಸದೇ ಇರುವುದು ಬಡವರ ಸೂರಿನ ಕನಸು ಹಳ್ಳ ಹಿಡಿದಿದೆ.
‘ನಮೋ ನಗರದಲ್ಲಿ ವಾಸಿಸುವ ಕುಟುಂಬಗಳಿಗೆ ಅನುಕೂಲವಾಗುವಂತೆ ಅಂಗನವಾಡಿ ಕೇಂದ್ರ, ಮಾರುಕಟ್ಟೆ, ದಿನಸಿ ಅಂಗಡಿ, ಶುದ್ಧ ಕುಡಿಯುವ ನೀರಿನ ಘಟಕ, ಸಮರ್ಪಕ ವಿದ್ಯುತ್ ಸೌಲಭ್ಯ, ಒಳಚರಂಡಿ ಹಾಗೂ ಇತರೇ ಮೂಲ ಸೌಕರ್ಯ ಒದಗಿಸಬೇಕು’ ಎಂದು ಫಲಾನಭವಿ ಭಾರತಿ ಹೊಸಮನಿ ಆಗ್ರಹಿಸಿದರು.
‘ನಮೋ’ ನಗರ ಪ್ರದೇಶಕ್ಕೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಆರ್.ಓ ಘಟಕ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಈ ಹಿಂದೆ ಶಾಸಕ ಯತ್ನಾಳ ಸೂಚಿಸಿದ್ದರು. ಆದರೆ, ಅಧಿಕಾರಿ ವರ್ಗ ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ' ಎಂದು ನಮೋ ನಗರದ ನಿವಾಸಿಗಳ ಸಂಘದ ಪದಾಧಿಕಾರಿ ಕಿರಣ ಕಾಂಬಳೆ ಆರೋಪಿಸಿದರು.
‘ಕಾಮಗಾರಿ ನಡೆಸುತ್ತಿರುವ ‘ಬಂಡಿಇನ್ಫ್ರಾ ಪ್ರೈವೆಟ್ ಲಿಮಿಟೆಡ್’ ನವರು ಹೆಚ್ಚಿನ ಮುತುವರ್ಜಿ ವಹಿಸಿಲ್ಲ. ಅಲ್ಲದೇ,ಮನೆಗಳ ಗುಣಮಟ್ಟ ಕಳಪೆಯಾಗಿದೆ, ನಮ್ಮಿಂದ ಲಕ್ಷಾಂತರ ರೂಪಾಯಿ ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ’ಎಂದು ಫಲಾನುಭವಿಗಳಾದ ಲಕ್ಷ್ಮಣಗುಡಗುಂಟಿ, ಮಲ್ಲನಗೌಡ ಪಾಟೀಲ, ಕೌಸರ್ ಬಾನು ಆರೋಪಿಸಿದರು.
‘ನಮೋ’ ನಗರದಲ್ಲಿ ಸ್ವಂತ ಮನೆ ಹೊಂದಲು ವಿಜಯಪುರ ನಗರದ ಸಾವಿರಾರು ಬಡವರು ಕಾತರದಿಂದ ಕಾಯುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸುವರೇ ಎಂದು ಕಾದುನೋಡಬೇಕಿದೆ.
ಕೇವಲ 53 ಮನೆಗಳಲ್ಲಿ ವಾಸ!
‘ಸದ್ಯ ಸುಮಾರು 300 ಮನೆಗಳು ಪೂರ್ಣಗೊಂಡಿದ್ದು, ಹಂಚಿಕೆ ಮಾಡಿ, ಹಕ್ಕುಪತ್ರ ನೀಡಲಾಗಿದೆ. ಇದರಲ್ಲಿ 53 ಫಲಾನುಭವಿಗಳು ಮನೆಗಳಿಗೆ ಬಂದು ವಾಸವಾಗಿದ್ದಾರೆ’ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಿಕಿ ‘ಪ್ರಜಾವಾಣಿ’ಗೆ ತಿಳಿಸಿದರು.
‘400 ಮನೆಗಳು ಪೂರ್ಣಗೊಳ್ಳುವ ಹಂತ ತಲುಪಿದ್ದು, ತಾತ್ಕಾಲಿಕ ಹಕ್ಕುಪತ್ರ ನೀಡಲಾಗಿದೆ. ಇನ್ನುಳಿದಂತೆ 622 ಮನೆಗಳಿಗೆ ಸ್ಲ್ಯಾಬ್, ಗ್ರೌಂಡ್ ಪ್ಲೋರ್, ಫಸ್ಟ್ ಪ್ಲೋರ್ ಆಗಿದೆ. ಇನ್ನುಳಿದ 571 ಮನೆಗಳ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ನನೆಗುದಿಗೆ ಬಿದ್ದಿದೆ. ಈಗಾಗಲೇ ಅವರಿಗೆ ನೋಟಿಸ್ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.