
ಹುಣಸೂರು: ಆಂಧ್ರ ತಂಬಾಕು ದರ– ಇಲ್ಲಿ ತಲ್ಲಣ
ಹುಣಸೂರು: ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ವರ್ಜೀನಿಯ ತಂಬಾಕು ಈ ಸಾಲಿನ ಬರದ ಛಾಯೆಯಲ್ಲೂ ಗುಣಮಟ್ಟದಲ್ಲಿ ಬೆಳೆದು, ಹದಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಬೆಳೆಗಾರರು ಉತ್ತಮ ದರದ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯದ ಹಳೆ ಮೈಸೂರು ಭಾಗದ ಪ್ರಮುಖ ವಾಣಿಜ್ಯ ಬೆಳೆ ವರ್ಜೀನಿಯ ತಂಬಾಕು ಈ ಸಾಲಿನಲ್ಲಿ ಅಂದಾಜಿನಂತೆ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನೋಂದಾಯಿತ 42 ಸಾವಿರ ರೈತರು ಬೆಳೆದಿದ್ದು, ಶೇ60 ರಷ್ಟು ಗುಣಮಟ್ಟದ ಉತ್ಪನ್ನ ಬಂದಿದೆ. ಆದರೆ ಶೇ 40 ಭಾಗ ನಿರೀಕ್ಷಿತ ಗುಣಮಟ್ಟ ಇಲ್ಲದೆ ಬಂಡವಾಳ ಮರಳಿ ಸಿಕ್ಕರೆ ಸಾಕು ಎನ್ನುವ ಮನಸ್ಥಿತಿ ಬೆಳೆಗಾರರಲ್ಲಿ ಮನೆ ಮಾಡಿದೆ.
ವಾರ್ಷಿಕ ಬೆಳೆಯಾದ ತಂಬಾಕು ಸಸಿ ಮಡಿಯಲ್ಲಿ ಬೆಳೆಸಿ ಟ್ರೇಗಳಿಗೆ ವರ್ಗಾಯಿಸಿ, ಸದೃಢ ಸಸಿಯನ್ನು ಹೊಲದಲ್ಲಿ ನಾಟಿ ಮಾಡಿ ಸಕಾಲಕ್ಕೆ ಮಳೆಗಾಗಿ ಆಕಾಶದತ್ತ ಮುಖ ಮಾಡುವುದು ಸಾಮಾನ್ಯ. ಈ ಸಾಲಿನಲ್ಲಿ ನಾಟಿ ಮಾಡಿದ ಹಂತದಲ್ಲಿ ಒಂದೆರಡು ಮಳೆ ಲಭಿಸಿ, ಸಸಿ ಬೆಳವಣಿಗೆ ಉತ್ತಮವಾಗಿ ಬಂದಿತ್ತು. ನಂತರದಲ್ಲಿ ಮಳೆ ಕ್ಷೀಣಿಸಿ ಒಣಹವೆಯಿಂದ ಕೆಲವು ರೋಗಕ್ಕೆ ಬಲಿಯಾಗಿ ಇಳುವರಿ ಕುಂಠಿತವಾಗಿದೆ ಎಂದು ಹೊಸಕೋಟೆ ಗ್ರಾಮದ ಬೆಳೆಗಾರ ಸಿದ್ದಪ್ಪಾಜಿ ತಿಳಿಸಿದರು.
ಅನ್ಯ ಮಾರ್ಗವಿಲ್ಲ: ಹಳೆ ಮೈಸೂರು ಭಾಗದ ರೈತರಿಗೆ ತಂಬಾಕು ಬಿಟ್ಟು ಬೇರಾವುದೇ ಬೆಳೆ ಆರ್ಥಿಕವಾಗಿ ಭಧ್ರತೆ ನೀಡುತ್ತಿಲ್ಲ. ಇವರು ನಷ್ಟವಾದರೂ ಪ್ರತಿ ವರ್ಷ ತಂಬಾಕು ಬೆಳೆಯಬೇಕಾಗಿದೆ. ರೈತ ಪ್ರತಿ ವರ್ಷ ಉತ್ತಮ ದರ ನಿರೀಕ್ಷೆಯಲ್ಲಿ ಸಾಲ ಮಾಡಿ ಬೇಸಾಯ ಮಾಡುತ್ತಿದ್ದು, ಮೂರು ವರ್ಷದಿಂದ ಮಾರುಕಟ್ಟೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೆ ಆರ್ಥಿಕವಾಗಿ ಸೊರಗಿದ್ದೇವೆ. ಈ ಸಾಲಿನಲ್ಲಿ ಬೆಳೆ ಪ್ರಮಾಣ ತಗ್ಗಿಸಿದ್ದು ರೈತರು ಹಿಂದಿನ ನಷ್ಟವನ್ನು ಈ ಸಾಲಿನ ಮಾರುಕಟ್ಟೆಯಿಂದಲೇ ತುಂಬಿಸಿಕೊಳ್ಳಬೇಕಾಗಿದೆ. ಉತ್ತಮ ದರ ಸಿಕ್ಕರಷ್ಟೇ ಉಳಿಗಾಲ. ಇಲ್ಲವಾದರೆ ಭವಿಷ್ಯದಲ್ಲಿ ತಂಬಾಕು ಕೃಷಿ ಬಿಟ್ಟು ಬೇರೆ ಬೆಳೆ ಬೆಳೆಯಬೇಕು ಎಂದು ರೈತರು ತಿಳಿಸಿದರು.
ನಿಗದಿ: ರಾಜ್ಯಕ್ಕೆ ತಂಬಾಕು ಮಂಡಳಿ 2026-27 ನೇ ಸಾಲಿಗೆ 5.6 ಕೋಟಿ ಕೆ.ಜಿ. ನಿಗದಿಗೊಳಿಸಿದ್ದು, ಸಿಂಗಲ್ ಬ್ಯಾರನ್ ಪರವಾನಗಿ ಹೊಂದಿದ ರೈತನಿಗೆ 1,017 ಕೆ.ಜಿ. ಮಾರಾಟಕ್ಕೆ ಅವಕಾಶ ನೀಡಿದೆ. 2025-26 ನೇ ಸಾಲಿನಲ್ಲಿ 1,807 ಕೆ.ಜಿ. ನಿಗದಿಗೊಳಿಸಿದ್ದು, ಈ ಸಾಲಿಗೆ ಸರಾಸರಿ 800 ಕೆ.ಜಿ. ಕಡಿತಗೊಳಿಸಿದೆ. ಈ ರೀತಿ ಮಾಡುವುದರಿಂದ ರೈತರಿಗೆ ಲಾಭವಿಲ್ಲ, ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಪ್ರತಿ ಕೆ.ಜಿ.ಗೆ ₹ 150 ತಗಲುತ್ತಿದೆ ಎಂದು ತಂಬಾಕು ಬೆಳೆಗಾರರ ಹಿತರಕ್ಷಣಾ ವೇದಿಕೆ ಗೌರವಾಧ್ಯಕ್ಷ ಉಂಡವಾಡಿ ಚಂದ್ರೇಗೌಡ ತಿಳಿಸಿದರು.
ಮನವಿ: ತಂಬಾಕು ಮಂಡಳಿ ನಿರ್ದೇಶಕ ಶ್ರೀನಿವಾಸ್ ಸಮ್ಮುಖದಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ ಬರದಲ್ಲಿಯೂ ರೈತರು ತಂಬಾಕು ಬೇಸಾಯ ಮಾಡಿದ್ದು, ಈ ಸಾಲಿಗೆ ರಾಜ್ಯಕ್ಕೆ ನಿಗದಿಗೊಳಿಸಿದ ಗರಿಷ್ಠ ಉತ್ಪತ್ತಿ ಸಡಿಲಗೊಳಿಸಿ ಪ್ರತಿ ರೈತರಿಗೆ ಕನಿಷ್ಠ 1,500 ಕೆ.ಜಿ. ಮಾರಾಟಕ್ಕೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ. ಶೇ 10 ರಷ್ಟು ಹೆಚ್ಚು ಕಮ್ಮಿ ಇಳುವರಿಗೆ ದಂಡ ವಿಧಿಸದಂತೆ ಕ್ರಮವಹಿಸಲು ರೈತಸಂಘ ಮತ್ತು ಬೆಳೆಗಾರರು ಮನವಿ ಮಾಡಿದ್ದೇವೆ ಎಂದರು.
ಪರ್ಯಾಯ ಬೆಳೆ: ತಂಬಾಕು ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮಂಡಳಿ ಪರವಾನಗಿ ಹಿಂಪಡೆದು ರೈತರ ಬೇಡಿಕೆಯಂತೆ ಪ್ರತಿ ಪರವಾನಗಿಗೆ ₹ 25 ಲಕ್ಷ ಪರಿಹಾರ ನೀಡಿದಲ್ಲಿ ತಂಬಾಕು ಬೆಳೆಯಿಂದ ಹೊರ ಬರುತ್ತೇವೆ. ಪರ್ಯಾಯ ವಾಣಿಜ್ಯ ಬೆಳೆ ಅಳವಡಿಸಿಕೊಳ್ಳಲು ಈಗಲೂ ಬದ್ಧರಿದ್ದೇವೆ ಎಂದು ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ ಶಿವಣ್ಣ ಹೇಳಿದರು.
ಆಂಧ್ರಪ್ರದೇಶದಲ್ಲಿ ಈಗಾಗಲೇ ತಂಬಾಕು ಮಾರುಕಟ್ಟೆ ಆರಂಭವಾಗಿದ್ದು ಅಲ್ಲಿಯ ಮಾರುಕಟ್ಟೆ ಸ್ಥಿತಿ ರಾಜ್ಯದ ಬೆಳೆಗಾರರ ಮೇಲೆಪರಿಣಾಮ ಬೀರಿದೆ. ಕಳೆದ ಸಾಲಿನಲ್ಲಿ ₹ 280 ಸರಾಸರಿ ದರ ಸಿಕ್ಕಿದ್ದು, ಈ ಬಾರಿ ಕನಿಷ್ಠ ₹ 300 ಸಿಗಬೇಕು. ರಾಜ್ಯದ ಮಾರುಕಟ್ಟೆ ಹೇಗಿರುತ್ತದೆ ಎಂಬ ಆತಂಕದಲ್ಲಿ ತಂಬಾಕು ಬೆಳೆದು ಹದಗೊಳಿಸುವ ಹಂತಕ್ಕೆ ಬಂದಿದ್ದೇವೆ ಎಂದು ಹೊಸಕೋಟೆ ಗ್ರಾಮದ ತಂಬಾಕು ಬೆಳೆಗಾರ ಸಿದ್ದಪ್ಪಾಜಿ ತಿಳಿಸಿದರು.
ರೈತ ಸ್ನೇಹಿ ನಿರ್ಣಯ ಆಗಲಿ
ತಂಬಾಕು ಮಂಡಳಿ ರಾಜ್ಯಕ್ಕೆ ಈ ಸಾಲಿನ ತಂಬಾಕು ಉತ್ಪಾದನಾ ಗಾತ್ರ ವಿಳಂಬವಾಗಿ ಪ್ರಕಟಿಸಿದ್ದು, ಬೆಳೆಗಾರರು ಅದಾಗಲೇ ಸಸಿ ನಾಟಿ ಪ್ರಕ್ರಿಯೆ ಪೂರೈಸಿದ್ದರು, ಹೀಗಾಗಿ ಮಂಡಳಿ ನಿಗದಿಗೊಳಿಸಿರುವ ಪ್ರಮಾಣ ಪರಿಷ್ಕರಿಸಿ ರೈತ ಸ್ನೇಹಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಂಬಾಕು ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಉಂಡವಾಡಿ ಚಂದ್ರೇಗೌಡ ಆಗ್ರಹಿಸಿದರು
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260810-38-92143586