ಜನಸಾಮಾನ್ಯರಿಗೆ ಹತ್ತಿರ, ಸಂಘಟನಾ ಚತುರ ‘ಸಾರಾ’

ಜನಸಾಮಾನ್ಯರಿಗೆ ಹತ್ತಿರ, ಸಂಘಟನಾ ಚತುರ ‘ಸಾರಾ’

ಜನಸಾಮಾನ್ಯರಿಗೆ ಹತ್ತಿರ, ಸಂಘಟನಾ ಚತುರ ‘ಸಾರಾ’

ರಾಜ್ಯದ ಪ್ರಮುಖ ರಾಜಕಾರಣಿಗಳಲ್ಲಿ ಮೈಸೂರಿನ ಸಾ.ರಾ. ಮಹೇಶ್ ಅವರದು ಪ್ರಮುಖ ಹೆಸರು. ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದ, ಪ್ರವಾಸೋದ್ಯಮ ಸಚಿವರಾಗಿದ್ದ ಅವರು, ಆಡಳಿತ, ರಾಜಕಾರಣ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ‘ಹೆಜ್ಜೆ ಗುರುತು’ ಮೂಡಿಸಿದ್ದಾರೆ. ತಮ್ಮದೇ ಅದ ಕೊಡುಗೆಗಳನ್ನೂ ನೀಡುತ್ತಾ ಬಂದಿದ್ದಾರೆ.

ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ, ಅಧಿಕಾರವಿರಲಿ, ಅಧಿಕಾರ ಇಲ್ಲದಿರಲಿ ಜನರೊಂದಿಗೆ ಸದಾ ನಿಲ್ಲುವ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ನಂಬಿದವರು, ಜೊತೆಗಿರುವವರು, ಪಕ್ಷದ ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲುತ್ತಲೇ ಬರುವ ಅವರು, ಜಾತ್ಯತೀತ ಜನತಾದಳದ ಪ್ರಮುಖ ‘ದಳಪತಿ’ಯೂ ಹೌದು. ಅದರಲ್ಲೂ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಯ ವಿಚಾರದಲ್ಲಿ ಅವರದು ನಿರ್ಣಾಯಕವಾದ ಪಾತ್ರವೇ. ಯುವಕರು ಸೇರಿದಂತೆ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಗುಣದಿಂದ ಗಮನಸೆಳೆಯುತ್ತಿದ್ದಾರೆ. ಎಲ್ಲ ಜಾತಿ–ವರ್ಗದವರ ಪ್ರೀತಿಯನ್ನೂ ಗಳಿಸಿದ್ದಾರೆ.

ವರಿಷ್ಠರೊಂದಿಗೆ ನಿಕಟ ಸಂಬಂಧ: ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷರೂ, ಕೇಂದ್ರ ಸಚಿವರಾಗಿರುವ ಎಚ್‌.ಡಿ. ಕುಮಾಸ್ವಾಮಿ ಅವರೊಂದಿಗೆ ನಿಕಟ ಸಂಬಂಧ–ಗೌರವ ಹಾಗೂ ಪ್ರೀತಿಗೆ ಭಾಜನವಾಗಿದ್ದಾರೆ. ಆದ್ದರಿಂದಲೇ ಈ ಭಾಗದಲ್ಲಿ ಪಕ್ಷದಿಂದ ಅಥವಾ ರಾಜಕೀಯವಾಗಿ ತೀರ್ಮಾನಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಮಹೇಶ್ ಅವರನ್ನು ವರಿಷ್ಠರು ಪ್ರಮುಖವಾಗಿ ನೆಚ್ಚಿಕೊಂಡಿದ್ದಾರೆ. ಇಲ್ಲಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮುಂದಡಿಯನ್ನು ವರಿಷ್ಠರು ಇಡದಿರುವುದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಅಷ್ಟರ ಮಟ್ಟಿಗೆ ಅವರು ಪಕ್ಷದಲ್ಲಿ ಪ್ರಭಾವಿಯಾಗಿ ಹೊರಹೊಮ್ಮಿದ್ದಾರೆ.

ಕೆ.ಆರ್. ನಗರದ ಶಾಸಕರಾಗಿ, ಸಚಿವರಾಗಿ ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆಯನ್ನು ನೀಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ರೈತರು, ಶ್ರೀಸಾಮಾನ್ಯರ ಪರವಾದ ಚಿಂತನೆಯ ಕಾರಣದಿಂದಲೇ ಅವರು ಹೆಸರು ಮಾಡಿದ್ದಾರೆ. ಜನಪ್ರಿಯರೂ ಆಗಿದ್ದಾರೆ. ಈ ಕಾರಣದಿಂದಾಗಿಯೇ, ಮೈಸೂರಿನಲ್ಲಿರುವ ಅವರ ಕಚೇರಿಗೆ ಜನರು ಸಹಾಯ, ನೆರವು, ಬೆಂಬಲ ಕೋರಿ ಬರುತ್ತಿರುತ್ತಾರೆ. ಹಲವು ರೀತಿಯಲ್ಲಿ ತಮಗೆ ನೆರವಾಗಿದ್ದಕ್ಕೆ ಅಭಿನಂದನೆ ಸಲ್ಲಿಸಲೆಂದು ಜನರು ಶಾಲು, ಹಾರ ತಂದು ಕಾಯುತ್ತಿರುತ್ತಾರೆ.

ಸಂಘಟನೆಗೆ ಬಲ: ಮೈಸೂರು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ‘ಬಲ’ ತುಂಬುವ ನಿಟ್ಟಿನಲ್ಲಿ ಶ್ರಮಿಸುತ್ತಲೇ ಬಂದಿದ್ದಾರೆ. ಪಕ್ಷದಿಂದ ಹೊರನಡೆದಿದ್ದ ಹಲವರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ಅವರು ವಹಿಸುತ್ತಲೇ ಬಂದಿದ್ದಾರೆ. ಇತ್ತೀಚಗೆ ಹಲವು ನಾಯಕರನ್ನು ಪಕ್ಷದಿಂದ ಸೆಳೆದಿರುವುದು ಅವರ ಸಂಘಟನಾ ಚಾತುರ್ಯಕ್ಕೆ ಸಾಕ್ಷಿಯಾಗಿದೆ ಎಂಬ ವಿಶ್ಲೇಷಣೆಗಳೂ ಇವೆ.

ಎಚ್‌.ಡಿ. ಕುಮಾರಸ್ವಾಮಿ ಅವರ ಆತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಅವರಿಗೆ ಈ ಭಾಗದಿಂದ ಶಕ್ತಿ ತುಂಬುವುದಕ್ಕೆ ಆದ್ಯತೆ ಕೊಡುತ್ತಲೇ ಬಂದಿದ್ದಾರೆ. ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ ನನಗೆ ಶಕ್ತಿ ತುಂಬಿದ ಮಹೇಶ್ ಅವರ ಶ್ರಮವನ್ನು ಮರೆಯಲಾಗದು’ ಎಂದು ಎಚ್‌.ಡಿ. ಕುಮಾರಸ್ವಾಮಿ ಅವರು ಅನೇಕ ಬಾರಿ ಹೇಳಿ ನೆನೆದಿದ್ದಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರವೂ ಸೇರುತ್ತದೆ. ಕೆ.ಆರ್. ನಗರ ಕ್ಷೇತ್ರವನ್ನು ಹಿಂದೆ ಪ್ರತಿನಿಧಿಸಿದ ಅನುಭವಿ ಸಾ.ರಾ. ಮಹೇಶ್ ಅವರು ಲೋಕಸಭಾ ಚುನಾವಣೆಯಲ್ಲಿ ನೀಡಿದ ಕೊಡುಗೆ ಕುಮಾರಸ್ವಾಮಿ ಅವರ ಗೆಲುವಿಗೆ ಕಾರಣವಾಗಿದ್ದು ಇತಿಹಾಸ.

ಕೆ.ಆರ್.ನಗರದಲ್ಲಿ ಸಕ್ರಿಯ: ತಮ್ಮ ‘ಕರ್ಮಭೂಮಿ’ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಿಂದ 2028ರ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದಲೇ, ಹಲವು ಕಾರಣಗಳಿಂದ ಕಣ ಸಜ್ಜುಗೊಳಿಸುತ್ತಿದ್ದಾರೆ. ‘ನಾನು ಮತ್ತೊಮ್ಮೆ ಕೆ.ಆರ್.ನಗರದಿಂದಲೇ ಸ್ಪರ್ಧಿಸುವುದು ಖಚಿತ’ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಲೇ ಬಂದಿರುವ ಅವರು, ಜನರೊಂದಿಗೆ ಹಲುವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ ಭಾಗದಲ್ಲಿ ಪಕ್ಷದ ಕಾರ್ಯಕರ್ತರಿಗೆ ತೊಂದರೆ ಉಂಟಾದಾಗ ಸಿಡಿದೇಳುತ್ತಿದ್ದಾರೆ.

ಶ್ರೀರಾಮಂದಿರಕ್ಕೆ ದೇಣಿಗೆ ನೀಡಿ ಗಮನಸೆಳೆದವರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ, ಅವರು ಶಾಸಕರಾಗಿದ್ದಾಗ ಸಾ.ರಾ.ಮಹೇಶ್‌ ಅವರು ₹ 5 ಲಕ್ಷ ದೇಣಿಗೆ ನೀಡಿ ಗಮನಸೆಳೆದಿದ್ದರು. ಜೆಡಿಎಸ್‌ನಲ್ಲಿರುವ ಅವರು ದೇಣಿಗೆ ನೀಡಿದ್ದು ಎಲ್ಲರಿಗೂ ಹುಬ್ಬೇರುವಂತೆ ಮಾಡಿತ್ತು. ದೇಣಿಗೆ ಸಂಗ್ರಹ ಅಭಿಯಾನ ಅಂಗವಾಗಿ ತಮ್ಮ ನಿವಾಸಕ್ಕೆ ಆಗ ಭೇಟಿ ನೀಡಿದ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಡಿಡಿಯನ್ನು ಮಹೇಶ್ ಹಸ್ತಾಂತರಿಸಿದ್ದರು.

‘ನಾನು ಕೂಡ ಬಿಜೆಪಿಯಲ್ಲಿ ಈ ಹಿಂದೆ ಇದ್ದವನು. ಆಗ ಇಟ್ಟಿಗೆ ಹೊತ್ತಿದ್ದೇನೆ. ಆ ವಿಚಾರ ಮರೆಯುವಂತಿಲ್ಲ. ಶ್ರೀರಾಮನ ದೇಗುಲ ಯಾವ ಪಕ್ಷದ ಆಸ್ತಿಯೂ ಅಲ್ಲ. ಶ್ರೀರಾಮ ಎಲ್ಲರಿಗೂ ಸೇರಿದವನು. ಅಳಿಲು ಸೇವೆಯಾಗಿ ನಾನು ಈ ದೇಣಿಗೆ ನೀಡಿದ್ದೇನೆ. ಇದಕ್ಕೆ ಬೇರೆ ಯಾವುದೇ ಅರ್ಥ ಕಲ್ಪಿಸಬೇಕಾಗಿಲ್ಲ’ ಎಂದು ಹೇಳಿಕೆ ಕೊಟ್ಟಿದ್ದರು. ಈಗ, ಮಿತ್ರಪಕ್ಷ ಬಿಜೆಪಿಯ ಜೊತೆಗೆ ಅಧಿಕೃತವಾಗಿಯೇ ಸೇರಿ ಕೆಲಸ ಮಾಡುವ ಅವಕಾಶ ಅವರಿಗೆ ಇದೆ.

ಕೆ.ಆರ್. ನಗರ ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಹಲವು ವರ್ಗದವರ ಸಮುದಾಯಗಳಿಗೆ ಭವನಗಳು, ರಸ್ತೆಗಳು, ಚರಂಡಿ, ಕುಡಿಯುವ ನೀರು ಪೂರೈಕೆ, ಬೀದಿದೀಪ ಮೊದಲಾದ ಮೂಲಸೌಕರ್ಯಗಳನ್ನು ಒದಗಿಸಲು ಶ್ರಮಿಸಿದ್ದರು. ನೀರಾವರಿ ಯೋಜನೆಗಳಿಗೂ ಶ್ರಮಿಸಿದ್ದರು. ಸರ್ಕಾರೀ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಶ್ರಮಿಸಿದ್ದರು. ಜನಸಂಪರ್ಕ ಸಭೆಗಳನ್ನು ನಡೆಸಿ ಅಹವಾಲುಗಳನ್ನು ಆಲಿಸಿ ಪರಿಹರಿಸುತ್ತಿದ್ದರು. ಸೋತ ನಂತರವೂ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರ ದೃಷ್ಟಿ ಈಗ ಮುಂಬರುವ ವಿಧಾನಸಭಾ ಚುನಾವಣೆಯ ಮೇಲಿದೆ.

‘ಸಾರಾ’ ಎಂದೇ ಬ್ರ್ಯಾಂಡ್‌

ಕೆ.ಆರ್.ನಗರ ವಿಧಾನಸಭಾ ಕ್ಙೇತ್ರದ ವ್ಯಾಪ್ತಿಗೆ ಬರುವ ಅವಳಿ ತಾಲ್ಲೂಕುಗಳಾದ ಕೆ.ಆರ್.ನಗರ ಮತ್ತು ಸಾಲಿಗ್ರಾಮದ ಜೊತೆಗೆ ಇಡೀ ಮೈಸೂರು ಜಿಲ್ಲೆಯಲ್ಲಿ, ಜನರಿಂದ ಸಾ.ರಾ.ಮಹೇಶ್ ಎನ್ನುವುದಕ್ಕಿಂತಲೂ, ‘ಸಾರಾ’, ‘ಸಾರಾ ಮಹೇಶಣ್ಣ’ ಎಂದೇ ಕರೆಸಿಕೊಂಡು ತಮ್ಮದೇ ‘ಬ್ರ್ಯಾಂಡ್‌’ ಸೃಷ್ಟಿಸಿಕೊಂಡಿದ್ದಾರೆ. ಆ ತಾಲ್ಲೂಕುಗಳ ಜನರ ಹಿತಚಿಂತನೆಯೇ ಅವರ ನಡೆ–ನುಡಿಗಳಲ್ಲಿ, ಹೋರಾಟಗಳಲ್ಲಿ ಕಂಡುಬರುತ್ತಲೇ ಇರುತ್ತದೆ. ಅವರನ್ನು ಬೆಂಬಲಿಸುವ ‘ಸಾರಾ ಬಳಗ’ ದೊಡ್ಡದಾಗಿ ಬೆಳೆಯುತ್ತಲೇ ಇದೆ.

‘ಆಷಾಢ ಶುಕ್ರವಾರದ ಸಂದರ್ಭದಲ್ಲಿ ವಿಐಪಿಗಳಾದ ನಮ್ಮಂಥವರು ಚಾಮುಂಡಿಬೆಟ್ಟಕ್ಕೆ ಹೋಗಬಾರದು, ಜನಸಾಮಾನ್ಯರು ಸುಗಮವಾಗಿ ದರ್ಶನ ಪಡೆಯಲು ಅವಕಾಶ ಮಾಡಿಕೊಡಬೇಕು’ ಎಂಬ ಹೇಳಿಕೆಯ ಮೂಲಕ ಶ್ರೀಸಾಮಾನ್ಯರಿಗೆ ಹತ್ತಿರವಾಗುತ್ತಾರೆ.

ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸುವ ಮೂಲಕ ಕೃಷಿಕರು, ತೋಟಗಾರಿಕೆ ಬೆಳೆಗಾರರಿಗೆ ಆಪ್ತವಾಗುತ್ತಾರೆ. ಅಕ್ರಮಗಳು ನಡೆದಾಗ ಅದರ ವಿರುದ್ಧ ಧ್ವನಿ ಎತ್ತುವ ಮೂಲಕ ಸಾಮಾಜಿಕ ಹೋರಾಟಗಾರರಿಗೆ ಸ್ಫೂರ್ತಿಯೂ ಆಗುತ್ತಾರೆ. ಅಧಿಕಾರಿಗಳು ಎಸಗುವ ಅಕ್ರಮ–ಅವ್ಯವಹಾರಗಳನ್ನು ಬಯಲಿಗೆ ಎಳೆಯುವ ಮೂಲಕ ದಿಟ್ಟ ಹೋರಾಟಗಾರರಂತೆಯೂ ಕಾಣಿಸುತ್ತಾರೆ. ವಿವಿಧ ಕ್ಷೇತ್ರದ ಸಾಧಕರನ್ನು ಬೆನ್ನು ತಟ್ಟುವ ಗುಣದಿಂದ ವಿಶಾಲ ಮನೋಭಾವದ ಹಿರಿಯ ಸ್ನೇಹಿತನಂತೆಯೂ ಕಾಣುತ್ತಾರೆ. ಜನಸಾಮಾನ್ಯರಿಗೆ ನೇರವಾಗಿ ಸಂಬಂಧಿಸಿದ ವಿಷಯಗಳಿಗೆ ಸ್ಪಂದಿಸುವ ಕಾರಣದಿಂದ ಆಪ್ತ ಎನಿಸುತ್ತಾರೆ.

ಪಕ್ಷಗಳು ಹಾಗೂ ರಾಜಕೀಯದಿಂದಾಚೆಗೆ, ಎಲ್ಲ ಪಕ್ಷಗಳ ನಾಯಕರೊಂದಿಗೂ, ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಉತ್ತಮ ಒಡನಾಟವನ್ನು ಹೊಂದಿರುವ ಮಹೇಶ್ ರಾಜಕೀಯ, ಸಮಾಜಸೇವಾ ಕ್ಷೇತ್ರದಲ್ಲಿ ಮತ್ತಷ್ಟು ದುಡಿಯಬೇಕು, ಸೇವೆ ಮಾಡಬೇಕು ಎಂಬ ಹಂಬಲವನ್ನು ಕಳೆದುಕೊಂಡಿಲ್ಲ. ಜನರೊಂದಿಗಿನ ಒಡನಾಟವನ್ನು ಬಿಟ್ಟು ಕೊಟ್ಟಿಲ್ಲ. ಇದಕ್ಕಾಗ ಸಾರಾ ಸ್ನೇಹ ಬಳಗದಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದ್ದಾರೆ.

ಕುಮಾರಸ್ವಾಮಿ ಕರೆತರಲು...

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ರಾಜ್ಯ ರಾಜಕಾರಣಕ್ಕೆ ಬಂದು ಮೈಸೂರಿನಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಈ ಭಾಗದಲ್ಲಿ ಹೆಚ್ಚಿನ ಬಲ ಬರುತ್ತದೆ ಎಂದು ಪ್ರತಿಪಾದಿಸುತ್ತಲೇ ಬಂದಿರುವ ಅವರು, ಚಾಮುಂಡೇಶ್ವರಿ ಕ್ಷೇತ್ರದಿಂದ ಅವರು ಕಣಕ್ಕಿಳಿಯಬೇಕು ಎಂಬುದು ಕಾರ್ಯಕರ್ತರು–ಮುಖಂಡರ ಅಪೇಕ್ಷೆಯಾಗಿದೆ ಎಂದು ಹೇಳುತ್ತಲೇ ಬಂದಿದ್ದಾರೆ. ಅವರ ಈ ಹೇಳಿಕೆ ರಾಜಕೀಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

‘ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ, ನಗರಪಾಲಿಕೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬೇಕು ಎನ್ನುವ ಆಕಾಂಕ್ಷಿಗಳು ಸಕ್ರಿಯ ಸದಸ್ಯರಾಗಿರಬೇಕು.‌ ಇಲ್ಲದಿದ್ದರೆ ಅವಕಾಶ ಸಿಗುವುದಿಲ್ಲ’ ಎಂದು ಹೇಳುತ್ತಾ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಸದಸ್ಯತ್ವ ನೋಂದಣಿಗೆ ಪ್ರೇರಣೆ ನೀಡುತ್ತಿದ್ದಾರೆ. ‘ಸಂಘಟನೆ ಬಲಪಡಿಸಲು ನಡೆಸಲಾಗುತ್ತಿರುವ ಸದಸ್ಯತ್ವ ನೋಂದಣಿ ಪ್ರಕ್ರಿಯೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು. ಅದರಲ್ಲೂ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚು ನೇತೃತ್ವ ವಹಿಸಬೇಕು’ ಎಂದು ಸೂಚಿಸುತ್ತಾ, ಮುಂದಿನ ಚುನಾವಣೆಗಳಿಗೆ ತಯಾರಿ ನಡೆಸುವಂತೆಯೂ ಪ್ರೇರಣೆ ಕೊಡುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260810-39-1837244036

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ