
ಕಾರ್ಕಳದಲ್ಲಿ ವಾಸವಿರುವ ಗದಗ ಮೂಲದ ಕಮಲ್ ಅಹ್ಮದ್‌ಗೆ ರಾಷ್ಟ್ರಪತಿಭವನದಲ್ಲಿ ಮನ್ನಣೆ
ಹೆಬ್ರಿ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ವಾಸವಿರುವ ಗದಗ ಮೂಲದ ಚಿತ್ರ ಕಲಾವಿದ, ವಿಜಯನಗರ ಗರುಡಾದ್ರಿ ಶೈಲಿಯಿಂದ ಪ್ರಭಾವಿತರಾಗಿರುವ ಕಮಲ್ ಅಹ್ಮದ್ ಮಾಳೇಕೊಪ್ಪ ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರತಿಷ್ಠಿತ ‘ಆರ್ಟಿಸ್ಟ್ ಇನ್ ರೆಸಿಡೆನ್ಸಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ 10 ದಿನಗಳ ಕಾಲ ಆಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ದೇಶದ ವಿವಿಧ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪ್ರತಿನಿಧಿಸುವ 12 ಮಂದಿ ಕಲಾವಿದರು ಭಾಗವಹಿಸಿದ್ದರು.
ಅದರಲ್ಲಿ ಬನಾರಸ್ ಮ್ಯೂರಲ್, ಥಾಂಕಾ, ನಾಯಕ್, ಕೇರಳ ಮ್ಯೂರಲ್, ಬಸೋಹ್ಲಿ, ಸುರಪುರ ಹಾಗೂ ಮೈಸೂರು ಶೈಲಿಯ ಕಲಾವಿದರು ಸೇರಿದ್ದರು. ಅವರೆಲ್ಲರೂ ರಾಷ್ಟ್ರಪತಿ ಭವನದಲ್ಲೇ ವಾಸ್ತವ್ಯ ಹೂಡಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ.
ಕಮಲ್ ಅಹ್ಮದ್ ಮಾಳೇಕೊಪ್ಪ ಅವರು ಮೂರು ದಶಕಗಳಿಂದ ವಿಜಯನಗರ ಗರುಡಾದ್ರಿ ಶೈಲಿಯಿಂದ ಪ್ರಭಾವಿತರಾಗಿ ತಮ್ಮದೇ ಆದ ಶೈಲಿಯನ್ನು ಕಂಡುಕೊಂಡು ಮೀನಿಚರ್ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರು ರಾಷ್ಟ್ರಪತಿ ಭವನದಲ್ಲೂ ಒಂದು ಕಲಾಕೃತಿಯನ್ನು ರಚಿಸಿದ್ದಾರೆ. ಅಲ್ಲದೇ ಒಂದು ಕಲಾಕೃತಿಯನ್ನು ಪ್ರದರ್ಶಿಸಿದ್ದಾರೆ. ಅವುಗಳಲ್ಲಿ ಒಂದನ್ನು ‘ಪಂಚತಂತ್ರ’ ಕಥಾವಸ್ತುವಿನ ಆಧಾರದ ಮೇಲೆ ರಚಿಸಲಾಗಿತ್ತು.
ಅದೇ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಲಾವಿದರೊಂದಿಗೆ ಸಂವಾದ ನಡೆಸಿದರು. ಅವರ ಕಲಾಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
‘ಆರ್ಟಿಸ್ಟ್ ಇನ್ ರೆಸಿಡೆನ್ಸಿ’ ಕಾರ್ಯಕ್ರಮವು ಭಾರತದ ಶ್ರೀಮಂತ ಕಲಾ ಪರಂಪರೆಯನ್ನು, ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ಹಾಗೂ ಭಾರತದ ಸಾಂಸ್ಕೃತಿಕ ಗುರುತನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾಗುತ್ತದೆ.
ಕಮಲ್ ಅಹ್ಮದ್ ಅವರು ಹೆಬ್ರಿ ತಾಲ್ಲೂಕಿನ ಶಿವಪುರ ಸರ್ಕಾರಿ ಪ್ರೌಢಶಾಲೆಯಲ್ಲಿ 18 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ವಿವಿಧ ಕಲಾಕೃತಿಗಳು ಹೆಬ್ರಿ ಸರ್ಕಾರಿ ಕಚೇರಿ ಕಟ್ಟಡಗಳು, ವಿವಿಧ ಸಂಸ್ಥೆಗಳ ಗೋಡೆಗಳಲ್ಲಿ ಕಂಗೊಳಿಸುತ್ತಿವೆ.
‘ರಾಷ್ಟ್ರೀಯ ಮನ್ನಣೆ ಸಂತಸ ತಂದಿದೆ’
‘ರಾಷ್ಟ್ರಪತಿ ಭವನದ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ನನ್ನನ್ನು ಆಯ್ಕೆ ಮಾಡಿರುವುದು ಅತ್ಯಂತ ಖುಷಿ ನೀಡಿದೆ. ಇದು ನನ್ನ ಜೀವನದ ಮರೆಯಲಾಗದ ಕ್ಷಣವಾಗಿದೆ. ಈ ಮೂಲಕ ವಿಜಯನಗರ ಗರುಡಾದ್ರಿ ಪ್ರೇರಿತ ಚಿತ್ರಕಲೆ ಶೈಲಿಗೆ ರಾಷ್ಟ್ರೀಯ ಮನ್ನಣೆ ಮತ್ತು ಗೌರವ ಲಭಿಸಿದಂತಾಗಿದೆ. ಇದು ಭಾರತದ ಶ್ರೀಮಂತ ಕಲಾತ್ಮಕ ಪರಂಪರೆಯ ಮಹತ್ವವನ್ನು ಮತ್ತಷ್ಟು ಎತ್ತಿ ತೋರಿಸಿದೆ’ ಎಂದು ಚಿತ್ರಕಲಾವಿದ ಕಮಲ್ ಅಹ್ಮದ್ ಮಾಳೇಕೊಪ್ಪ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-28-2139996190