ಶಂಕರಪುರ ಮಲ್ಲಿಗೆ ಧಾರಣೆ ಏರಿಕೆ; ಬೆಳೆಗಾರರಲ್ಲಿ ಮಂದಹಾಸ

ಶಂಕರಪುರ ಮಲ್ಲಿಗೆ ಧಾರಣೆ ಏರಿಕೆ; ಬೆಳೆಗಾರರಲ್ಲಿ ಮಂದಹಾಸ

ಶಂಕರಪುರ ಮಲ್ಲಿಗೆ ಧಾರಣೆ ಏರಿಕೆ; ಬೆಳೆಗಾರರಲ್ಲಿ ಮಂದಹಾಸ

ಉಡುಪಿ: ಹಬ್ಬಗಳ ಋತು ಆರಂಭವಾಗುತ್ತಿದ್ದಂತೆ ಶಂಕರಪುರ ಮಲ್ಲಿಗೆಗೂ ಧಾರಣೆ ಏರಿಕೆ ಆಗಿರುವುದು ಮಲ್ಲಿಗೆ ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ.

ನಾಗರ ಪಂಚಮಿಯ ಮುನ್ನಾ ದಿನವಾದ ಭಾನುವಾರದಂದು ಶಂಕರಪುರ ಮಲ್ಲಿಗೆ ದರವು ಅಟ್ಟಿಗೆ ₹1,700ಕ್ಕೆ ಏರಿಕೆಯಾಗಿತ್ತು. ಸೋಮವಾರ ಅಟ್ಟಿಗೆ ₹1,300, ಮಂಗಳವಾರದಂದು ಅಟ್ಟಿ ಮಲ್ಲಿಗೆಯ ದರವು ₹730 ಇತ್ತು.

ಸಾಮಾನ್ಯವಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆ ಶಂಕರಪುರ ಮಲ್ಲಿಗೆಯ ಇಳುವರಿ ಕುಸಿಯುತ್ತದೆ. ಆ ಕಾರಣಕ್ಕೆ ಪ್ರತಿ ವರ್ಷ ಮಳೆಗಾಲದಲ್ಲೂ ಮಲ್ಲಿಗೆಗೆ ಉತ್ತಮ ದರ ಇರುತ್ತಿತ್ತು. ಆದರೆ ಈ ಬಾರಿ ಆ. 10ರ ವರೆಗೂ ಅಟ್ಟಿ ಮಲ್ಲಿಗೆಯ ದರವು ₹280ರಿಂದ ₹430ರ ನಡುವೆ ಇತ್ತು. ಆ. 14ರಂದು ಅಟ್ಟಿ ಮಲ್ಲಿಗೆ ದರವು ₹670ಕ್ಕೆ ಏರಿಕೆಯಾಗಿತ್ತು. ಅನಂತರ ದರವು ಏರುಮುಖವಾಗಿದೆ.

ಮಳೆಗಾಲದಲ್ಲೂ ಬಿಸಿಲಿನ ವಾತಾವರಣವಿದ್ದ ಕಾರಣಕ್ಕೆ ಮಲ್ಲಿಗೆಯ ಇಳುವರಿ ಅಧಿಕವಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ದರ ಕುಸಿತವಾಗಿತ್ತು ಎನ್ನುತ್ತಾರೆ ಬೆಳೆಗಾರರು.

ಕಳೆದ ವರ್ಷ ಮೇ ತಿಂಗಳ ಎರಡನೇ ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಶಂಕರಪುರ ಮಲ್ಲಿಗೆಯ ಇಳುವರಿ ಕುಸಿದಿತ್ತು. ಮಳೆಯಿಂದಾಗಿ ಮಲ್ಲಿಗೆ ಗಿಡಗಳ ಬುಡದಲ್ಲಿ ನೀರು ನಿಂತು ಕಾಂಡ ಕೊಳೆತು ಹೋಗಿ ಸಮಸ್ಯೆಯಾಗಿತ್ತು ಎಂದು ಹೇಳುತ್ತಾರೆ ಬೆಳೆಗಾರರು.

ಆಷಾಢ ಮಾಸದಲ್ಲಿ ಶುಭ ಕಾರ್ಯಗಳು ನಡೆಯದಿರುವ ಕಾರಣ ಮಲ್ಲಿಗೆಗೆ ಬೇಡಿಕೆ ಕುಸಿಯುತ್ತದೆ ಆ ಕಾರಣಕ್ಕೂ ಧಾರಣೆ ಇಳಿಕೆಯಾಗುತ್ತದೆ.

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಶುಭ ಸಮಾರಂಭಗಳು ನಡೆಯುವುದರಿಂದ ಈ ಮಲ್ಲಿಗೆಗೆ ಬೇಡಿಕೆಯು ಹೆಚ್ಚುತ್ತದೆ. ಈ ತಿಂಗಳಲ್ಲಿ ದೇವಸ್ಥಾನಗಳಲ್ಲಿ ಹೂವಿನ ಪೂಜೆಯು ನಡೆಯುವುದರಿಂದ ಹೆಚ್ಚಿನ ಬೇಡಿಕೆ ಕುದುರುತ್ತದೆ ಎನ್ನುತ್ತಾರೆ ಬೆಳೆಗಾರರು.

‘ಕಳೆದ ವರ್ಷ ಶಂಕರಪುರ ಮಲ್ಲಿಗೆಯ ದರ ಅಟ್ಟಿಗೆ ₹2,100 ರ ವರೆಗೂ ಏರಿಕೆಯಾಗಿತ್ತು. ಈ ಬಾರಿ ಹೂವಿನ ಲಭ್ಯತೆ ಅಧಿಕವಾಗಿರುವುದರಿಂದ ಕಳೆದ ವರ್ಷದಷ್ಟು ಧಾರಣೆ ಏರಿಕೆಯಾಗುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಮಲ್ಲಿಗೆ ಬೆಳೆಗಾರ ಮಾರ್ಕ್ ಡಿಸೋಜ.

‘ಕರಾವಳಿಯಲ್ಲಿ ಮಾತ್ರವಲ್ಲದೆ ತುಳುವರು ನೆಲೆಸಿರುವ ಮುಂಬೈ, ಮಧ್ಯಪ್ರಾಚ್ಯ ದೇಶಗಳಲ್ಲೂ ಶಂಕರಪುರ ಮಲ್ಲಿಗೆಗೆ ಬೇಡಿಕೆ ಇದೆ’ ಎನ್ನುತ್ತಾರೆ ಅವರು.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಶಂಕರಪುರ ಮಲ್ಲಿಗೆಗೆ ಉತ್ತಮ ಧಾರಣೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಬಹುತೇಕ ಬೆಳೆಗಾರರಿದ್ದಾರೆ.

‘ಹೂವಿಗೆ ಪೂರಕ ವಾತಾವರಣ’

‘ಈ ಬಾರಿ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಮಳೆ ಕೊರತೆಯಾಗಿ ಬಿಸಿಲಿನ ವಾತಾವರಣವಿದ್ದುದು ಭತ್ತದ ಕೃಷಿಗೆ ಹೊಡೆತ ನೀಡಿದ್ದರೂ ಮಲ್ಲಿಗೆ ಹೂವಿನ ಕೃಷಿಗೆ ಪೂರಕವಾಗಿತ್ತು. ಹೆಚ್ಚು ಮಳೆ ಬಂದರೆ ಮಲ್ಲಿಗೆಯ ಇಳುವರಿ ಕುಸಿಯುತ್ತದೆ. ಬಿಸಿಲಿನ ವಾತಾವರಣವಿದ್ದರೆ ಹೆಚ್ಚು ಹೂವುಗಳು ಸಿಗುತ್ತವೆ. ಅತಿಯಾದ ಮಳೆ ಬಾರದ ಕಾರಣಕ್ಕೆ ಮಲ್ಲಿಗೆ ಗಿಡಗಳಿಗೆ ರೋಗಗಳು ಬಾಧಿಸಿಲ್ಲ. ಇಲ್ಲದಿದ್ದರೆ ಮಳೆಗಾಲದಲ್ಲಿ ರೋಗ ನಿಯಂತ್ರಿಸುವುದೇ ಸವಾಲಾಗುತ್ತದೆ’ ಎಂದು ಮಲ್ಲಿಗೆ ಕೃಷಿಕ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-28-2007084373

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ