
ಹೆಬ್ರಿ: ಖಜಾನೆ– ಪಡುಕುಡೂರು ರಸ್ತೆಯಲ್ಲಿ ಕಂದಕ: ಆತಂಕದಲ್ಲೇ ವಾಹನ ಚಾಲನೆ
ಹೆಬ್ರಿ: ಖಜಾನೆ– ಪಡುಕುಡೂರು– ಮುನಿಯಾಲು ಮುಖ್ಯ ರಸ್ತೆಯ ಪಡುಕುಡೂರು ಶಾಲೆಯ ಬಳಿ ಉದ್ಭವ ಆಗಿರುವ ರಸ್ತೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ನಿತ್ಯವೂ ವಾಹನಗಳು ರಸ್ತೆಯಲ್ಲಿರುವ ಕಂದಕ ಬಗ್ಗೆ ಗಮನಕ್ಕೆ ಬಾರದೆ ಅಪಾಯಕ್ಕೆ ಸಿಲುಕುತ್ತಿವೆ. ಪ್ರತಿದಿನ ಬೈಕ್‌ಗಳು ಹೊಂಡಕ್ಕೆ ಬೀಳುತ್ತಿವೆ. ದ್ವಿಚಕ್ರ, ಲಘು ವಾಹನಗಳ ಚಕ್ರಗಳು ರಸ್ತೆಯಲ್ಲಿನ ಕೆಸರಿನಲ್ಲಿ ಹೂತು ಹೋಗುತ್ತಿವೆ. ಇತ್ತೀಚೆಗೆ ಪಿಕ್‌ಅಪ್ ವಾಹನವೊಂದು ಕಂದಕ್ಕೆ ಉರುಳುವ ಹಂತಕ್ಕೆ ತಲುಪಿತ್ತು. ಸ್ಥಳೀಯರು ಸೇರಿ ವಾಹನವನ್ನು ಎಳೆದು ಅಪಾಯದಿಂದ ತಪ್ಪಿಸಿದ್ದರು.
ರಸ್ತೆಯ ಒಂದು ಬದಿ ದೊಡ್ಡ ಕಂದಕ ನಿರ್ಮಾಣವಾಗಿದೆ. ಅಲ್ಲದೆ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿ ಮಳೆಯ ನೀರು ತುಂಬಿಕೊಂಡು ಕೆಸರುಮಯವಾಗಿವೆ. ಇದರಿಂದ ಈ ಭಾಗದಲ್ಲಿ ನಡೆದಾಡುವ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ. ವಾಹನಗಳು ಬರುವ ಸಂದರ್ಭ ಕೆಸರಿನ ಸಿಂಚನವಾಗುತ್ತಿದೆ ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಸೂಚನೆಗೆ ಕಿವಿಗೊಡದ ಅಧಿಕಾರಿಗಳು: ಇತ್ತೀಚೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಜಿಲ್ಲೆಗೆ ಭೇಟಿ ನೀಡಿದ್ದಾಗ ಸ್ಥಳೀಯ ಪ್ರಮುಖರಾದ ಭಾರವಿ ಶೆಟ್ಟಿ ಪಟೇಲರ ಮನೆ, ಭುಜಂಗ ಶೆಟ್ಟಿ, ಪ್ರಸನ್ನ ಶೆಟ್ಟಿ ಅವರ ನೇತೃತ್ವದಲ್ಲಿ ಪಡುಕುಡೂರು ರಸ್ತೆಯಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದರು. ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಸಚಿವರು ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಜನರಿಗೆ ತೊಂದರೆಯಾಗಬಾರದು. ಸಮಸ್ಯೆ ಬಗೆರಹರಿಸಿ ಎಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸೂಚಿಸಿದ್ದರು.
ಆದರೆ ಅಧಿಕಾರಿಗಳು ಈವರೆಗೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ರಸ್ತೆಯ ಸಮಸ್ಯೆ ಹಾಗೆಯೇ ಉಳಿದಿದೆ. ಸಾರ್ವಜನಿಕರು, ವಾಹನ ಚಾಲಕರು ಅಪಾಯದ ಭಯದಲ್ಲೇ ಸಂಚರಿಸಬೇಕಾಗಿದೆ. ಒಂದೇ ಬದಿಯಲ್ಲಿ ಘನ ವಾಹನಗಳು ಸಂಚರಿಸಿ ಸರಿಯಿದ್ದ ಒಂದು ಬದಿಯ ರಸ್ತೆಯಲ್ಲೂ ಸಂಚರಿಸುವುದು ಕಷ್ಟವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-28-1091580386