
ರಾಮದುರ್ಗ | ಮಳೆ ಕೊರತೆಯಿಂದ ಹೆಸರು, ಗೋವಿನಜೋಳ ಬೆಳೆ ಹಾನಿ: ರೈತರ ಅಳಲು
ರಾಮದುರ್ಗ: ‘ಮಳೆ ಕೊರತೆಯಿಂದ ಹೆಸರು ಬೆಳೆ ಹುಲುಸಾಗಿ ಬೆಳೆದಿಲ್ಲ. ಬೆಳೆದಿರುವ ಬೆಳೆಯಲ್ಲಿ ಕಾಯಿ ಬಿಟ್ಟಿಲ್ಲ. ಭೂಮಿ ಬಿಟ್ಟು ಮೇಲೇಳದ ಹೆಸರು ಹಾಗೂ ಗೋವಿನಜೋಳದ ಬೆಳೆಯಲ್ಲಿ ಲಾಭದ ಕುರುಹು ಕಾಣುತ್ತಿಲ್ಲ’
ಹೀಗೆನ್ನುತ್ತ ಅಸಹಾಯಕತೆ ವ್ಯಕ್ತಪಡಿಸಿದ್ದು ತಾಲ್ಲೂಕಿನ ಬೂದನೂರು(ಸಾಲಹಳ್ಳಿ) ಗ್ರಾಮದ ರೈತ ಶಂಕರಗೌಡ ಸಿದ್ದನಗೌಡ ಪಾಟೀಲ.
‘ರಾಮದುರ್ಗ ತಾಲ್ಲೂಕಿನ ವಿವಿಧೆಡೆ ಬಿತ್ತನೆಯಾಗಿರುವ ಹತ್ತಿ, ಹೆಸರು, ಉದ್ದು, ತೊಗರಿ, ಗೋವಿನಜೋಳದ ಬೆಳೆಗಳು ಹುಲುಸಾಗಿ ಬೆಳೆದರೂ, ಹೂವು, ಕಾಯಿ ಬಿಡದೆ ಮೊಳಕೆಯೊಡೆಯುವ ಮುನ್ನವೇ ಕಮರಿ ಹೋಗುವ ಸಾಧ್ಯತೆ ಹೆಚ್ಚಿದೆ’ ಎನ್ನುತ್ತಾರೆ ಅವರು.
‘ಹೋದ ವರ್ಷ ಮಳೆ ಹೆಚ್ಚಾಗಿ ಗೋಳಾಡಿದೆವು. ಈ ವರ್ಷ ಮಳಿ ಇಲ್ಲದೆ ಗೋಳಾಡುವ ಸ್ಥಿತಿ ಬಂದಿದೆ. ಹೀಗೆ ಮುಂದುವರಿದರೆ ರೈತನ ಬಾಳು ಹಾಳಾಗಿ ಹೋಗುತ್ತದೆ’ ಎಂದು ಅವರು ವಿವರಿಸಿದರು.
‘ನಮ್ಮ 20 ಎಕರೆ ಹೊಲದಲ್ಲಿ ಬಿತ್ತಿದ ಹೆಸರು ಬೆಳೆಯು ಭೂಮಿ ಬಿಟ್ಟು ಮೇಲೇಳುವ ಸಾಧ್ಯತೆ ಕಡಿಮೆ. ಹತ್ತು ಎಕರೆಯಲ್ಲಿ ಬೆಳೆದಿದ್ದ ಬೆಳೆಯನ್ನು ಈಗಾಗಲೇ ಹರಗಲಾಗಿದೆ. ಹೆಸರು ಬೆಳೆಗೆ ಪ್ರತಿ ಎಕರೆಗೆ ₹15 ಸಾವಿರ ಖರ್ಚಾದರೂ ಒಂದು ಕಾಳು ಬೆಳೆ ಕೈಗೆ ಬರಲಿಲ್ಲ. ಹಾಕಿದ ಬೀಜಕ್ಕೂ ಬೆಲೆ ಇಲ್ಲದಂತಾಗಿದೆ’ ಎಂದು ಕಣ್ಣೀರು ಸುರಿಸಿದರು.
‘28 ಎಕರೆ ಹೊಲದಲ್ಲಿ ಒಂದೂವರೆ ಕ್ವಿಂಟಲ್ ಬಿತ್ತನೆ ಬೀಜ, 15 ಚೀಲ ರಸಗೊಬ್ಬರ ಹಾಕಿದರೂ, ಒಂದು ಅಡಿ ಕೂಡ ಬೆಳೆ ಬೆಳೆದಿಲ್ಲ. ಬರೀ ಕಸ ಬೆಳೆದಿದೆ. ಬೆಳೆ ಸಂಪೂರ್ಣ ನಾಶವಾಗುವ ಲಕ್ಷಣಗಳಿವೆ. ಈಗಾಗಲೇ 10ರಿಂದ 12 ಎಕರೆ ಹೆಸರು ಬೆಳೆಯನ್ನು ಕುರಿಗಳನ್ನು ಮೇಯಿಸಲು ಬಿಡಲಾಗಿದೆ’ ಎಂದು ಕುಳ್ಳೂರಿನ ರೈತ ಶಿವಾನಂದ ಬಸವರಾಜ ಬಳಿಗೇರ ಆತಂಕ ವ್ಯಕ್ತಪಡಿಸಿದರು.
‘ಬಿತ್ತನೆ ಮಾಡಿದ ಕಬ್ಬಿನ ಬೆಳೆಗೆ ನೀರು ಕಡಿಮೆಯಾಗಿ ‘ಉರುಮಲ್ಲಿಗೆ’ ರೋಗ ಬಂದಿದೆ. ಕಬ್ಬಿನ ಕಾಂಡದಲ್ಲಿನ ರಸವೂ ಕಡಿಮೆಯಾಗಿದೆ. ನೀರಾವರಿ ಭೂಮಿಯಲ್ಲಿ ಮಾತ್ರ ಬೆಳೆಯ ನಗು ಕಾಣಬಹುದಾಗಿದೆ. ಒಣ ಭೂಮಿಯಲ್ಲಿನ ಎಲ್ಲ ಬೆಳೆಗಳೂ ಕಮರಿ ಹೋಗಿವೆ’ ಎಂದು ವಿವರಿಸಿದರು.
‘ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹೆಸರು ಬಿತ್ತನೆಗೆ ಮಾಡಿದ ಸಾಲ ಹೆಗಲ ಮೇಲೇರಿದೆ. ಹಾಕಿದ ಬೀಜವೂ ಮೊಳಕೆಯೊಡೆಯಲಿಲ್ಲ. ಭೂಮಿಯಲ್ಲಿ ಮೊಳಕೆಯೊಡೆದ ಹೆಸರು ಬೆಳೆ ತೆಗೆಯಲು ಮತ್ತೆ ಸಾಲ ಮಾಡಬೇಕಿದೆ. ಸರ್ಕಾರ ರಾಮದುರ್ಗ ತಾಲ್ಲೂಕು ಅನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು’ ಎಂದು ಬಿಡಕಿ ರೈತ ಬಿ.ಎಸ್. ನಾಯ್ಕ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-21-131111610