
ಚಿಕ್ಕಮಗಳೂರು: ವರಮಹಾಲಕ್ಷ್ಮಿ ಪೂಜೆ ಅಂಗವಾಗಿ ಭರ್ಜರಿ ವಹಿವಾಟು
ಚಿಕ್ಕಮಗಳೂರು: ವರಮಹಾಲಕ್ಷ್ಮಿ ಪೂಜೆ ಅಂಗವಾಗಿ ನಗರದ ಮಾರುಕಟ್ಟೆಗಳಲ್ಲಿ ಲಕ್ಷ್ಮಿಮೂರ್ತಿ, ಹೂವು–ಹಣ್ಣು, ಹೊಸ ಬಟ್ಟೆ, ಸಿಹಿ ತಿನಿಸು, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.
ನಗರದ ಮಾರುಕಟ್ಟೆ ರಸ್ತೆ, ಅಂಬೇಡ್ಕರ್ ರಸ್ತೆ, ಎಂ.ಜಿ ರಸ್ತೆ, ದೀಪಾ ನರ್ಸಿಂಗ್ ಹೋಂ ರಸ್ತೆ, ಬೈಪಾಸ್ ರಸ್ತೆ, ತೊಗರಿಹಂಕಲ್ ವೃತ್ತ, ವಿಜಯಪುರ ಸೇರಿ ನಗರ ವಿವಿಧೆಡೆ ವ್ಯಾಪಾರ ಹಾಗೂ ಖರೀದಿ ಜೋರಾಗಿತ್ತು.
ಈ ಬಾರಿ ಮಾರುಕಟ್ಟೆಯಲ್ಲಿ ಹೂವು–ಹಣ್ಣುಗಳ ದರ ಸ್ವಲ್ಪ ಹೆಚ್ಚಾಗಿತ್ತು. ಸೇವಂತಿಗೆ ಒಂದು ಮಾರಿಗೆ ₹80, ಚೆಂಡು ಹೂವು ₹50, ಗುಲಾಬಿ ಹೂವು ಕೆ.ಜಿಗೆ ₹150, ಬಾಳೆಗಿಡ ಜೋಡಿಗೆ ₹50, ತಾವರೆ ಹೂವು ಒಂದಕ್ಕೆ ₹50, ಹೊಂಬಾಳೆ, ಮಾವಿನ ತೋರಣ, ಎಲೆ, ಅಡಿಕೆ, ಕಬ್ಬು, ಎಳೆನೀರು, ತೆಂಗಿನ ಕಾಯಿ ಖರೀದಿ ನಡೆಯಿತು.
ಸೇಬು ಒಂದು ಕೆಜಿಗೆ ₹160, ದಾಳಿಂಬೆ ₹100, ಬಾಳೆಹಣ್ಣು ₹120, ದ್ರಾಕ್ಷಿಹಣ್ಣು ₹160, ಕರ್ಬುಜ ₹50, ಕಲ್ಲಂಗಡಿ ₹25, ಮಾವಿನ ಹಣ್ಣು ₹160 ಇತ್ತು.
ಮಹಿಳೆಯರು ಮನೆಗಳಲ್ಲಿ ಲಕ್ಷ್ಮಿಮೂರ್ತಿ ಪ್ರತಿಷ್ಠಾಪನೆ ಮಾಡಲು ಲಕ್ಷ್ಮಿ ಮೂರ್ತಿ, ಲಕ್ಷ್ಮಿ ಆಭರಣ, ತೋಮಾಲೆ, ಮೆಟಲ್ ಪ್ಲೇಟ್, ಸ್ಕ್ರೀನ್, ಲಕ್ಷ್ಮಿಪೀಠ, ಲಕ್ಷ್ಮಿ ಸೀರೆ, ಲಕ್ಷ್ಮಿ ಕಿರೀಟ, ಲೈಟಿಂಗ್ಸ್, ರಂಗೋಲಿ, ಬಣ್ಣಗಳು ಹಾಗೂ ಲಕ್ಷ್ಮಿ ಪ್ರತಿಷ್ಠಾಪನೆಗೆ ಬಳಕೆ ಮಾಡುವ ಅಲಂಕಾರಿಕ ವಸ್ತುಗಳನ್ನು ಖರೀದಿ ಮಾಡಿದರು. ಪ್ರತಿ ವರ್ಷವೂ ಮಾರುಕಟ್ಟೆಯಲ್ಲಿ ಲಕ್ಷ್ಮಿಮೂರ್ತಿ ಹಾಗೂ ಅಲಂಕಾರಿಕ ವಸ್ತುಗಳಿಗೆ ಬೇಡಿಕೆ ಹೆಚ್ಚಿರುತ್ತದೆ ಎಂದು ಶ್ರೀಕೃಷ್ಣ ಏಜೆನ್ಸಿ ಅಂಗಡಿ ಮಾಲೀಕ ಪ್ರಿಯಾ ತಿಳಿಸಿದರು.
ವರಮಹಾಲಕ್ಷ್ಮಿ ಪೂಜೆಯಂದು ಸಿಹಿ ವಿತರಿಸಲು ನಗರದ ಪ್ರಮುಖ ಸಿಹಿ ತಿನಿಸು ಅಂಗಡಿಗಳಲ್ಲಿ ಪೇಡಾ, ಬೂಂದಿ, ಜಾಂಗಿರ್, ಹೋಳಿಗೆ ಸೇರಿ ವಿವಿಧ ಸಿಹಿ ತಿನಿಸುಗಳ ಖರೀದಿಯಲ್ಲಿ ನಗರದ ಜನರು ನಿರತರಾಗಿದ್ದರು.
ವರಮಹಾಲಕ್ಷ್ಮಿ ಪೂಜೆಗೆ ಮಹಿಳೆಯರು, ಮಕ್ಕಳು ಹೊಸ ಬಟ್ಟೆ ಧರಿಸುವುದು ವಾಡಿಕೆ ಇದೆ. ಲಕ್ಷ್ಮಿ ದೇವತೆಗೆ ಬಣ್ಣ ಬಣ್ಣದ ಸೀರೆ ಉಡಿಸಿ ಅಲಂಕಾರ ಮಾಡಲು ನಗರದ ಎಂ.ಜಿ. ರಸ್ತೆ, ಐ.ಜಿ. ರಸ್ತೆ, ಮಾರ್ಕೆಟ್ ರಸ್ತೆಯ(ಅಂಬೇಡ್ಕರ್ ರಸ್ತೆ) ಪ್ರಮುಖ ಬಟ್ಟೆ ಅಂಗಡಿಗಳಲ್ಲಿ ಹೊಸ ಬಟ್ಟೆ ಖರೀದಿಯಲ್ಲಿ ಜನ ತುಂಬಿದ್ದರು.
ಕೆ.ಎಂ. ರಸ್ತೆಯ ಲಕ್ಷ್ಮಿ ದೇವಸ್ಥಾನ ಹಾಗೂ ನಗರದ ವಿವಿಧ ದೇವಾಲಯಗಳಲ್ಲಿ ಲಕ್ಷ್ಮಿ ಪೂಜೆ ಹಾಗೂ ಪ್ರಸಾದ ವಿತರಣೆಗೆ ಸಿದ್ಧತೆ ನಡೆಯಿತು.
ಲಕ್ಷ್ಮಿ ಮೂರ್ತಿ ತಯಾರಿಸಿ ಮಾರಾಟ
‘ಪ್ರತಿ ಬಾರಿಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ನಮ್ಮ ಅಂಗಡಿಯಲ್ಲಿ ವಿಶೇಷವಾಗಿ ಲಕ್ಷ್ಮಿ ಮೂರ್ತಿಗಳನ್ನು ನಾವೆ ಸ್ವತಃ ಕೈಯಲ್ಲಿ ತಯಾರು ಮಾಡುತ್ತೇವೆ’ ಎಂದು ಕೃಷ್ಣ ಏಜೆನ್ಸಿ ಮಾಲೀಕ ಅಮರ್ ತಿಳಿಸಿದರು.
‘ಯಾವ ರೀತಿ ಲಕ್ಷ್ಮಿ ಮೂರ್ತಿ ಇರಬೇಕು, ಅಲಂಕಾರ ಮತ್ತು ವಿನ್ಯಾಸ ಹೇಗಿರಬೇಕು ಎಂದು ಹೇಳುತ್ತಾರೆ. ಅದರಂತೆ ನಾವು ಅವರಿಗೆ ತಯಾರು ಮಾಡಿಕೊಡುತ್ತೇವೆ. ಈ ಬಾರಿಯೂ ನಮ್ಮ ಅಂಗಡಿಯಲ್ಲಿ ಮಾರಾಟವಾಗುತ್ತಿರುವ ಲಕ್ಷ್ಮಿ ಮೂರ್ತಿಗಳು ನಾವೇ ತಯಾರಿಸಿದ್ದೇವೆ’ ಎಂದು ಅವರು ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-126-1980820820