ಸವದತ್ತಿ: ಕಾಯಿ ಕಟ್ಟುವ ಹಂತದಲ್ಲಿ ಕೈಕೊಟ್ಟ ಮಳೆ, ರೈತರ ಗಾಯದ ಮೇಲೆ ಬರೆ

ಸವದತ್ತಿ: ಕಾಯಿ ಕಟ್ಟುವ ಹಂತದಲ್ಲಿ ಕೈಕೊಟ್ಟ ಮಳೆ, ರೈತರ ಗಾಯದ ಮೇಲೆ ಬರೆ

ಸವದತ್ತಿ: ಕಾಯಿ ಕಟ್ಟುವ ಹಂತದಲ್ಲಿ ಕೈಕೊಟ್ಟ ಮಳೆ, ರೈತರ ಗಾಯದ ಮೇಲೆ ಬರೆ

ಸವದತ್ತಿ: ಮುಂಗಾರು ಹಂಗಾಮಿನ ಆರಂಭದಲ್ಲಿ ಸುರಿದ ಮಳೆ ವಿವಿಧ ಬೆಳೆಗಳ ಬಿತ್ತನೆಗೆ ಪೂರಕವಾಯಿತು. ಆದರೆ, ಹೂವು ಬಿಡುವ ಹಾಗೂ ಕಾಯಿ ಕಟ್ಟುವ ವೇಳೆ ಕೈಕೊಟ್ಟ ಮಳೆ ರೈತರ ಗಾಯದ ಮೇಲೆ ಬರೆ ಎಳೆದಿದೆ. ಹೆಸರು ಹಾಗೂ ಉದ್ದಿನ ಬೆಳೆಗಳು ಶೇ 60ಕ್ಕಿಂತ ಅಧಿಕ ಪ್ರಮಾಣದಲ್ಲಿ ಹಾನಿಗೀಡಾಗಿದ್ದರೆ, ಗೋವಿನಜೋಳ ಮತ್ತು ಹತ್ತಿ ಬೆಳೆಗಳ ಇಳುವರಿ ಕುಂಠಿತವಾಗಿದೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಬೆಳೆ ಕಟಾವು ಮಾಡುತ್ತಿರುವವರು ನಿರೀಕ್ಷಿತ ಇಳುವರಿ ಬಾರದ್ದಕ್ಕೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವೆಡೆ ಹೆಸರು ಬೆಳೆಯ ರಾಶಿ ಕಾರ್ಯ ಆರಂಭವಾಗಿದೆ.

‘ಹೂವು ಬಿಡುವಾಗ, ಕಾಯಿ ಕಟ್ಟುವಾಗ ಬೆಳೆಗೆ ಮಳೆ ಬೇಕಿತ್ತು. ಈಗ ಮಳೆ ಬಂದರೂ, ಒಣಗಿದ ಬೆಳೆ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಎಲ್ಲ ಬೆಳೆಗಳು ನೆಲಕಚ್ಚಿವೆ’ ಎಂದು ಹಿಟ್ಟಣಗಿಯ ರೈತ ಸುರೇಶ ಸಂಪಗಾವಿ ಅಳಲು ತೋಡಿಕೊಂಡರು.

‘ವರುಣನ ಅವಕೃಪೆಯಿಂದ ಹೆಸರು ಬೆಳೆಗೆ ಹಾನಿಯಾಗಿದೆ. ತೇವಾಂಶ ಇರದ ಭೂಮಿಯಲ್ಲಿ ಬೆಳೆ ಕಮರಿ ಹೋಗಿದೆ. ಇನ್ನೂ ಬೆಳೆ ಬರುತ್ತದೆ ಎಂಬ ನಿರೀಕ್ಷೆ ಹೋದ ಕಾರಣ, ಕುರಿ ಮೇಯಿಸಲು ಬಿಟ್ಟಿದ್ದೇವೆ’ ಎಂದು ಹಿರೇಉಳ್ಳಿಗೇರಿಯ ರೈತ ಮಹಾದೇವಪ್ಪ ನರಗುಂದ ಬೇಸರ ವ್ಯಕ್ತಪಡಿಸಿದರು.

‘ಮುಂಗಾರು ಹಂಗಾಮಿನ ಆರಂಭದಲ್ಲಿ ಸುರಿದ ಮಳೆ ನೆಚ್ಚಿಕೊಂಡು ಬಿತ್ತಲಾಗಿತ್ತು. ಭೂಮಿಯ ತೇವ ಒಣಗಿದ ಕಾರಣ ಪೂರ್ಣ ಜಮೀನನ್ನು ಹರಗಿ ಹಾಕುವ ಪರಿಸ್ಥಿತಿ ಎದುರಾಗಿದೆ’ ಎಂದು ರೈತ ಮಹಾದೇವಪ್ಪ ಹೊಸಮನಿ ತಿಳಿಸಿದರು.

‘ಮಳೆ ಕೊರತೆಯಿಂದ ಗೋವಿನಜೋಳ, ಹೆಸರು, ಹತ್ತಿಗೆ ಹೊಡೆತ ಬಿದ್ದಿದೆ. ಕಾಲುವೆ ಹಾಗೂ ಕೊಳವೆಬಾವಿಯಿಂದ ನೀರು ಹರಿಸಿದರೂ ಬೆಳೆ ಉಳಿಯುವ ಸಾಮರ್ಥ್ಯ ಕಳೆದುಕೊಂಡಿದೆ. ಬಿತ್ತನೆಬೀಜ, ರಸಗೊಬ್ಬರ, ಕೂಲಿಗೆ ಎಕರೆಗೆ ₹20 ಸಾವಿರ ಖರ್ಚಾಗಿದೆ. ಆದರೆ, ಬಿಡಿಗಾಸು ಆದಾಯ ಬರುವ ಸ್ಥಿತಿ ಇಲ್ಲ. ಲಾವಣಿ ಆಧರಿಸಿ ಕೃಷಿ ಮಾಡಿದವರ ಸ್ಥಿತಿ ಇನ್ನಷ್ಟು ದುಸ್ತರವಾಗಿದೆ’ ಎನ್ನುತ್ತಾರೆ ಹಂಚಿನಾಳದ ರೈತ ಬಸನಗೌಡ ಪಾಟೀಲ.

ತಾಲ್ಲೂಕಿನಲ್ಲಿ 1.05 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ

ತಾಲ್ಲೂಕಿನಲ್ಲಿ 1,02,331 ಹೆಕ್ಟೇರ್‌ನಲ್ಲಿ ಗುರಿ ಹೊಂದಲಾಗಿತ್ತು. ಈ ಪೈಕಿ 1,05,443 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಇನಾಮಹೊಂಗಲ, ಉಳ್ಳಿಗೇರಿ, ಹಂಚಿನಾಳ, ಧಡೇರಕೊಪ್ಪ, ಹಿರೇಕುಂಬಿ, ಉಗರಗೋಳ, ಬೆಟಸೂರ, ಕರೀಕಟ್ಟಿ, ಸಂಗ್ರೇಶಕೊಪ್ಪ, ಚುಳಕಿ, ಚಿಕ್ಕುಂಬಿ, ಆಚಮಟ್ಟಿ, ಕಗದಾಳ, ಹರಳಕಟ್ಟಿ, ಹೂಲಿಕಟ್ಟಿ, ಹೂಲಿ ಮತ್ತಿತರ ಗ್ರಾಮಗಳಲ್ಲಿ ಬರದ ಛಾಯೆ ಕಂಡುಬರುತ್ತಿದೆ.

‘ಕೊಳವೆಬಾವಿಯಲ್ಲೂ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸಾಲಮನ್ನಾ ಮಾಡಿ ಸಂಕಷ್ಟದಲ್ಲಿ ಇರುವ ರೈತರನ್ನು ಮೇಲೆತ್ತುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಸವದತ್ತಿಯ ರೈತ ಶಿವಾನಂದ ಸರದಾರ ಒತ್ತಾಯಿಸಿದರು.

‘ಬೆಳೆ ಹಾನಿಗೆ ತ್ವರಿತವಾಗಿ ಪರಿಹಾರ ನೀಡಬೇಕು’ ಎಂದು ಸವದತ್ತಿಯ ರೈತ ಬಸವರಾಜ ಬಿಜ್ಜೂರ ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-21-1486254673

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ