
ಅಂಧ್ರದ ಹೊರಗೂ ನೆಲೆ ವಿಸ್ತರಿಸಿಕೊಳ್ಳುವ ಪವನ್ ಕಲ್ಯಾಣ್ ಯೊಜನೆಯ ಲಾಭ ಬಿಜೆಪಿಗೆ?
ಹೈದರಾಬಾದ್: ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ರಾಜ್ಯದ ಮೊದಲ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಜಯನಗರದ ಭೋಗಾಪುರಂನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾವುಕರಾಗಿದ್ದರು. ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಾ, ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆದ ಜೆನ್-ಝೀ ಪ್ರತಿಭಟನೆಗಳನ್ನು ಸ್ಮರಿಸಿದ್ದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆನ್‌ಲೈನ್‌ನಲ್ಲಿ ಹಾಗೂ ಸಾರ್ವಜನಿಕವಾಗಿ ವ್ಯಕ್ತವಾದ ಟೀಕೆಗಳು ತಮ್ಮನ್ನು ಘಾಸಿಗೊಳಿಸಿವೆ. ದೇಶಕ್ಕಾಗಿ ದಣಿವರಿಯದೆ ದುಡಿಯುವ ನಾಯಕರನ್ನು ಈ ರೀತಿ ನಿಂದಿಸುವುದು ಕಣ್ಣೀರು ತರಿಸಿದೆ ಎಂದು ಹೇಳಿದ್ದರು.
ಪ್ರಧಾನಿ ಮೋದಿ ಅವರು ಗಡಿಯಲ್ಲಿ ಶತ್ರುಗಳ ವಿರುದ್ಧವೂ ಹೋರಾಡಬೇಕು. ದೇಶದ ಒಳಗೆ ಎದುರಾಳಿಗಳ ವಿರುದ್ಧವೂ ಸೆಣಸಬೇಕಿದೆ. ಹಾಗಾಗಿ, ಭಾರತೀಯರು ಅವರಿಗೆ ಕನಿಷ್ಠ ಬೆಂಬಲ ನೀಡಬೇಕು ಎಂಬುದು ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ಪವನ್ ಕಲ್ಯಾಣ್ ಅಭಿಮತ.
ಜಂತರ್ ಮಂತರ್ ಪ್ರತಿಭಟನೆಯನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಸಮರ್ಥಿಸಿಕೊಂಡಿರುವ ಸಂದರ್ಭದಲ್ಲಿ, ಎನ್‌ಡಿಎ ಮೈತ್ರಿಕೂಟದಲ್ಲಿರುವ ಉಳಿದೆಲ್ಲ ಪಕ್ಷಗಳಿಗಿಂತಲೂ ಹೆಚ್ಚಾಗಿ ಪವನ್ ಕಲ್ಯಾಣ್ ಅವರು ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದರ ಹಿಂದೆ ಹಲವು ಲೆಕ್ಕಾಚಾರಗಳು ಇವೆ ಎನ್ನಲಾಗುತ್ತಿದೆ.
ಪಕ್ಷದ ನೆಲೆ ವಿಸ್ತರಿಸುವ ಚಿಂತನೆ
ಜನಸೇನಾ ಪಕ್ಷವನ್ನು ಆಂಧ್ರ ಪ್ರದೇಶದ ಆಚೆಗೂ ವಿಸ್ತರಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ಪವನ್ ಕಲ್ಯಾಣ್, ರಾಷ್ಟ್ರ ರಾಜಧಾನಿಯಲ್ಲಿ ಜೂನ್ ತಿಂಗಳಲ್ಲಿ ʼಸೇನಾ ಪ್ರಸ್ಥಾನಂʼ ಹೆಸರಿನ ಎರಡು ದಿನಗಳ ಕಾರ್ಯಕ್ರಮ ಆಯೋಜಿಸಿದ್ದರು. ʼಜಾತೀಯ ಸಮಗ್ರತಾ ಕೋಸಂʼ (ರಾಷ್ಟ್ರೀಯ ಏಕೀಕರಣದತ್ತ ಪಕ್ಷದ ಪ್ರಯಾಣ) ಘೋಷದೊಂದಿಗೆ ನಡೆದ ಸಭೆಯಲ್ಲಿ ಜನಸೇನಾದ ಸಂಸದರು, ಶಾಸಕರು, ಪರಿಷತ್ ಸದಸ್ಯರು ಸೇರಿದಂತೆ ಇತರ ನಾಯಕರು ಪಕ್ಷ ವಿಸ್ತರಣೆ, ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ ಚರ್ಚಿಸಿದ್ದರು.
ಇದೀಗ, ತಮ್ಮ ಪಕ್ಷದ ಕಾರ್ಯಕರ್ತರನ್ನು ನಿಯಮಿತವಾಗಿ ರಾಷ್ಟ್ರೀಯತೆಯ ದೃಷ್ಟಿಕೋನದಲ್ಲಿ ಸಾಗಲು ಹಾಗೂ ಪಕ್ಷದ ವ್ಯಾಪ್ತಿಯನ್ನು ತವರು ರಾಜ್ಯದ ಆಚೆಗೆ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಈ ಯೋಜನೆಗೆ ಕಲ್ಯಾಣ್ ಅವರು ದೆಹಲಿಯನ್ನೇ ಆಯ್ಕೆ ಮಾಡಿಕೊಂಡಿದ್ದು ಏಕೆ ಎಂಬುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಹತ್ವಾಕಾಂಕ್ಷೆಯ ಬೆನ್ನೇರಿ..
ಜನಸೇನಾ ಪಕ್ಷವು, ದಕ್ಷಿಣ ಭಾರತದಲ್ಲಿ ಅಂದರೆ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸ ಆರಂಭಿಸಿದೆ. ಕೇರಳದಲ್ಲಿ ಚಿಂತಕರ ಚಾವಡಿ ಕಟ್ಟಿಕೊಂಡಿದೆ.
ತಮಿಳುನಾಡು ಮತ್ತು ಕೇರಳ ಧಾರ್ಮಿಕ ಕ್ಷೇತ್ರಗಳಿಗೆ ಆಗಾಗ್ಗೆ ಭೇಟಿ ನೀಡುವ ಪವನ್ ಕಲ್ಯಾಣ್, ದಕ್ಷಿಣದ ಬಹುತೇಕ ಬಿಜೆಪಿ ನಾಯಕರಿಗಿಂತಲೂ ಹೆಚ್ಚಾಗಿ ಸಾರ್ವಜನಿಕವಾಗಿ ಹಿಂದುತ್ವ ಪ್ರತಿಪಾದಿಸುವ ವ್ಯಕ್ತಿ ಎಂಬಂತೆ ಗುರುತಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕ ಹೊರತುಪಡಿಸಿ, ದಕ್ಷಿಣದ ಉಳಿದ ರಾಜ್ಯಗಳಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಹೆಣಗಾಡುತ್ತಿರುವ ಸಂದರ್ಭದಲ್ಲಿ ವಪನ್ ಕಲ್ಯಾಣ್ ಅವರು ವರ್ಚಸ್ಸು ವೃದ್ಧಿಸಿಕೊಳ್ಳುತ್ತಿದ್ದಾರೆ. ತೆಲುಗು ಭಾಷಿಕರ ಪೈಕಿ ಒಂದು ವರ್ಗದ ಮತದಾರರ ಬೆಂಬಲವೂ ಅವರ ಬೆನ್ನಿಗೆ ಇದೆ.
ʼದಕ್ಷಿಣದ ಇತರ ರಾಜ್ಯಗಳಲ್ಲಿ ಚುಣಾವಣಾ ಪ್ರಚಾರದ ಹೊರತಾಗಿ ಪವನ್ ಕಲ್ಯಾಣ್ ಅವರು ಬಿಜೆಪಿಗೆ ಎಷ್ಟರ ಮಟ್ಟಿಗೆ ನೆರವಾಗಬಹುದು ಎಂಬುದರ ಬಗ್ಗೆ ಈಗಲೇ ಹೇಳಲಾಗದು. ಆದರೆ, ಆಂಧ್ರ ಪ್ರದೇಶದಲ್ಲಂತೂ ಪವನ್ ಅವರ ಸಕ್ಯವು ಬಿಜೆಪಿಗೆ ನೆರವಾಗಲಿದೆ. ಅದರಲ್ಲೂ, ಟಿಡಿಪಿ ಮುಖ್ಯಸ್ಥ, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಎದುರಿಸಲು ಖಂಡಿತ ಸಹಾಯವಾಗಲಿದೆʼ ಎಂದು ರಾಜಕೀಯ ವಿಶ್ಲೇಷಕ ಪ್ರೊ. ಡಿ.ಎ.ಆರ್. ಸುಬ್ರಮಣ್ಯಂ ಹೇಳಿದ್ದಾರೆ.
ಒಂದು ವೇಳೆ ನಾಯ್ಡು ಅವರ ತೆಲುಗು ದೇಶಂ ಪಕ್ಷದ (ಟಿಡಿಪಿ) ಜೊತೆಗಿನ ಮೈತ್ರಿ ಕಡಿದುಕೊಂಡು ಬಿಜೆಪಿ ಮತ್ತು ಜನಸೇನಾ ಒಟ್ಟಾಗಿ ಸ್ಪರ್ಧಿಸಿದರೆ, ಗಣನೀಯ ಪ್ರಮಾಣದಲ್ಲಿ ಮತಗಳನ್ನು ಗಳಿಸಿಕೊಳ್ಳಬಹುದು. ಈ ಬೆಳವಣಿಗೆಯಿಂದ ವೈಎಸ್‌ಆರ್‌ಸಿಪಿ ಪಕ್ಷಕ್ಕೂ ಲಾಭವಾಗಬಹುದು. ಇದು, ನಾಯ್ಡು ಅವರಿಗೆ ಮಗ ನಾರಾ ಲೋಕೇಶ್ ರಾಜಕೀಯ ಭವಿಷ್ಯಕ್ಕಾಗಿಯಾದರೂ ಎನ್‌ಡಿಎ ಮೈತ್ರಿಕೂಟದಲ್ಲೇ ಉಳಿಯಬೇಕಾದ ಒತ್ತಡವನ್ನೂ ಸೃಷ್ಟಿಸಬಹುದು ಎಂಬುದು ಸುಬ್ರಮಣ್ಯಂ ಅವರ ಲೆಕ್ಕಾಚಾರ.
ಆಂಧ್ರ ಪ್ರದೇಶದ ಹೊರಗೂ ಪಕ್ಷದ ನೆಲೆ ವಿಸ್ತರಿಸಿಕೊಳ್ಳುವ ಪವನ್ ಕಲ್ಯಾಣ್ ಅವರು ಮಹಾತ್ವಾಕಾಂಕ್ಷೆ ಈಡೇರುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ, ಅದಕ್ಕೂ ಮೊದಲು ಜನಸೇನಾ ಪಕ್ಷದ ಮುಂದೆ ತೆಲಂಗಾಣದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಯ ಸವಾಲು ಇದೆ. ಶೀಘ್ರದಲ್ಲೇ ಈ ಚುನಾವಣೆ ನಡೆಯಲಿದೆ.
ತೆಲಂಗಾಣದಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿಯೂ ಜನಸೇನಾ ಸ್ಪರ್ಧಿಸಲಿದೆ ಎಂದು ಪವನ್ ಕಲ್ಯಾಣ್ ಇತ್ತೀಚೆಗೆ ಘೋಷಿಸಿದ್ದಾರೆ. ಜಿಎಚ್‌ಎಂಸಿ ಸೇರಿದಂತೆ ತೆಲಂಗಾಣದ ಇನ್ನೂ ಎರಡು ಪಾಲಿಕೆಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷವು ಅಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ಜನಸೇನಾ ಪಕ್ಷಕ್ಕೆ ಸವಾಲಾಗಬಹುದು.
ಬಿಜೆಪಿಗೆ ಜನಸೇನಾ ಆಸ್ತಿಯೇ?
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದರು ತ್ರಿಪುರದ ಎನ್‌ಸಿಪಿಐನಂತಹ ಸಣ್ಣ ಪ್ರಾದೇಶಕಿ ಪಕ್ಷಕ್ಕೆ ವಿಲೀನಗೊಳ್ಳುತ್ತಿರುವ ವಿದ್ಯಮಾನವನ್ನು ಗಮನಿಸಿದರೆ, ಜನಸೇನಾ ಪಕ್ಷವು ಬಿಜೆಪಿ ಪಾಲಿಗೆ ದಕ್ಷಿಣದಾದ್ಯಂತ ಕಾರ್ಯತಂತ್ರದ ಆಸ್ತಿಯಾಗಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಆಂಧ್ರಪ್ರದೇಶದಲ್ಲಿ ಈಗಾಗಲೇ ಬಿಜೆಪಿಯ ʼಬಿ-ಟೀಮ್ʼ ಎನಿಸಿಕೊಂಡಿರುವ ಜನಸೇನಾ, ತೆಲಂಗಾಣದಲ್ಲೂ ಇದೇ ರೀತಿಯ ಹಣೆಪಟ್ಟಿಯೊಂದಿಗೆ ಸವಾಲಿಗೆ ಒಡ್ಡಿಕೊಳ್ಳಲು ತಯಾರಾಗಿದೆ.
ದೆಹಲಿಯಲ್ಲಿ ನಡೆದ ಸಭೆಯಲ್ಲಿ ತಮ್ಮ ಪಕ್ಷದ ಪ್ರಾದೇಶಿಕ ಗುರುತು, ಸಾಂಸ್ಕೃತಿಕ ಹಿನ್ನೆಲೆಯನ್ನು ರಾಷ್ಟ್ರೀಯ ವಿಚಾರಗಳೊಂದಿಗೆ ಬೆಸೆಯುವ ಪ್ರಯತ್ನವನ್ನು ಪವನ್ ಕಲ್ಯಾಣ್ ಮಾಡಿದ್ದಾರೆ. 12 ವರ್ಷದಿಂದಲೂ ಪ್ರಾದೇಶಿಕ ಮಟ್ಟದಲ್ಲೇ ಇರುವ ಜನಸೇನಾವನ್ನು ರಾಷ್ಟ್ರೀಯ ಶಕ್ತಿಯಾಗಿ ಬೆಳೆಸುವ ಸಂದೇಶವನ್ನು ಸೂಚ್ಯವಾಗಿ ರವಾನಿಸಿದ್ದಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಸುಮಾರು 20 ಲಕ್ಷ ಜನರು ಜನಸೇನಾ ಪಕ್ಷದ ಸದಸ್ಯರಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ದೆಹಲಿಯಲ್ಲಿ ಬಹಿರಂಗಪಡಿಸಿದ್ದ ಪವನ್ ಕಲ್ಯಾಣ್, ಇದು ಪಕ್ಷದ ನೆಲೆ ವಿಸ್ತರಣೆಯಾಗುತ್ತಿರುವುದಕ್ಕೆ ಪುರಾವೆಯಾಗಿದೆ ಎಂದಿದ್ದರು. ಹಾಗೆಯೇ, ತೆಲಂಗಾಣದಲ್ಲಿ ತಮ್ಮ ಪಕ್ಷದ ಸಭೆಗಳಿಗೆ ಆಗಾಗ್ಗೆ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪವನ್ನೂ ಮಾಡಿದ್ದರು.
ತೆಲಂಗಾಣದ ರಚನೆಗೆ ನಾವೂ ಬೆಂಬಲ ಸೂಚಿಸಿದ್ದೆವು. ಆದರೆ, ಆಂಧ್ರ ಪ್ರದೇಶ ವಿಭಜನೆಯಾದ ರೀತಿಯನ್ನು ವಿರೋಧಿಸಿದ್ದೆವು ಎಂದು ಸ್ಪಷ್ಟಪಡಿಸುವ ಮೂಲಕ ಎರಡೂ ರಾಜ್ಯಗಳ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದರು.