
ನೇಪಾಳ ಪ್ರವಾಹ: ಭಾರತೀಯ ಸಂತ್ರಸ್ತರ ರಕ್ಷಣೆಗೆ ಒತ್ತಾಯಿಸಿ ಪ್ರಧಾನಿಗೆ ಖರ್ಗೆ ಪತ್ರ
ನವದೆಹಲಿ: ನೇಪಾಳದಲ್ಲಿ ಸಂಭವಿಸಿರುವ ಪ್ರವಾಹ ಅತ್ಯಂತ ನೋವಿನ ಸಂಗತಿಯಾಗಿದ್ದು, ಸಂಕಷ್ಟದಲ್ಲಿರುವ ಸಂತ್ರಸ್ತರ ರಕ್ಷಣೆಗೆ ಕೇಂದ್ರ ಸರ್ಕಾರ ತಕ್ಷಣವೇ ನೆರವು ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನೇಪಾಳದಲ್ಲಿ ಅತ್ಯಂತ ದೊಡ್ಡ ದುರಂತ ಸಂಭವಿಸಿದೆ. ದೇವರ ದರ್ಶನಕ್ಕಾಗಿ ತೆರಳಿದ್ದ ನೂರಾರು ಯಾತ್ರಿಕರು ಹಾಗೂ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ. ಈ ಘಟನೆ ನಮ್ಮೆಲ್ಲರಿಗೂ ತೀವ್ರ ದುಃಖ ತಂದಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ‘ ಎಂದರು.
ನೀರಿನಲ್ಲಿ ಕೊಚ್ಚಿ ಹೋದವರನ್ನು ತುರ್ತಾಗಿ ಹುಡುಕಿ, ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸುವ ಕೆಲಸವಾಗಬೇಕು. ದುರದೃಷ್ಟವಶಾತ್ ಮೃತಪಟ್ಟವರ ಶವಗಳನ್ನು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರಿಸಬೇಕು. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತುಂಬಲಾರದ ನಷ್ಟವಾಗಿದೆ. ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲು ಮತ್ತು ಅಗತ್ಯ ಪರಿಹಾರ ಒದಗಿಸಲು ಕೋರಿ ಪ್ರಧಾನಿಯವರಿಗೆ ಶೀಘ್ರವೇ ವಿಶೇಷ ಪತ್ರ ಬರೆಯಲಿದ್ದೇನೆ ಎಂದು ತಿಳಿಸಿದರು.
ಸಂಪುಟ ಸರ್ಜರಿ: ರಾಜ್ಯ ಸಂಪುಟ ಪುನರ್‌ರಚನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ಆ ವಿಚಾರವನ್ನು ಮುಖ್ಯಮಂತ್ರಿಗಳನ್ನೇ ಕೇಳಿ, ಅವರು ಇಲ್ಲೇ ಇರುತ್ತಾರಲ್ಲವೇ‘ ಎಂದು ಹೇಳಿದರು.