
ಭೀಮನಮಡು | ‘ದ್ರಾಕ್ಷಿ’ ಬೆಳೆದ ಉದ್ಯಮಿ: ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ
ಗುಂಡ್ಲುಪೇಟೆ: ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತದ ಮಧ್ಯೆಯೂ ತಾಲ್ಲೂಕಿನ ಭೀಮನಮಡು ಗ್ರಾಮದಲ್ಲಿ ಉದ್ಯಮಿಯೊಬ್ಬರು ದ್ರಾಕ್ಷಿ ಬೆಳೆದು ಯಶಸ್ಸು ಸಾಧಿಸಿದ್ದಾರೆ.
ತಾಲ್ಲೂಕಿನಲ್ಲಿ ಬಾಳೆ, ಅರಿಸಿನ, ಶುಂಠಿ, ಈರುಳ್ಳಿ, ಬೆಳ್ಳುಳ್ಳಿ ಸಹಿತ ತೋಟಗಾರಿಕಾ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ, ಮೊದಲ ಬಾರಿಗೆ ದ್ರಾಕ್ಷಿ ಬೆಳೆಯಾಗಿದ್ದು ರೈತರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕೇರಳ ಮೂಲದ ಆಶ್ರಫ್ ಎಂಬುವರು 25 ವರ್ಷಗಳಿಂದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನೆಲೆಸಿದ್ದು 12 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ವಿಭಿನ್ನ ಆಲೋಚನಾ ಕ್ರಮ ಹೊಂದಿರುವ ಅಶ್ರಫ್ ತಮ್ಮ ತೋಟದಲ್ಲಿ ಹಲವು ಬಗೆಯ ಹಣ್ಣಿನ ತಳಿಗಳು, ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಇದರ ಜೊತೆಗೆ ಒಂದು ಎಕರೆ ಪ್ರದೇಶದಲ್ಲಿ ರೆಡ್ ವೈನ್ ತಳಿಯ ದ್ರಾಕ್ಷಿ ಬೆಳೆದು ಎಲ್ಲರ ಹುಬ್ಬೇರಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸ್ವಲ್ಪ ಜಾಗದಲ್ಲಿ ಪ್ರಾಯೋಗಿಕವಾಗಿ ದ್ರಾಕ್ಷಿ ಕೃಷಿಯಲ್ಲಿ ತೊಡಗಿಸಿಕೊಂಡು ಅನುಭವ ಪಡೆಯುತ್ತಾ ಯಶಸ್ಸು ಸಾಧಿಸಿದ ಅಶ್ರಫ್ ದ್ರಾಕ್ಷಿ ಬೆಳೆಯನ್ನು 1 ಎಕರೆಗೆ ವಿಸ್ತರಿಸಿದ್ದಾರೆ. ನಿರೀಕ್ಷೆಯಂತೆ ಉತ್ತಮ ಫಸಲು ಬಂದಿದ್ದು ಲಾಭ ನಿರೀಕ್ಷೆಯಲ್ಲಿದ್ದಾರೆ.
ಗುಂಡ್ಲುಪೇಟೆಯಲ್ಲಿ ಮೊದಲ ಬಾರಿಗೆ ದ್ರಾಕ್ಷಿ ಬೆಳೆದಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡುತ್ತಿದ್ದಂತೆ ಪ್ರವಾಸಿಗರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ದ್ರಾಕ್ಷಿ ಬೆಳೆ ವೀಕ್ಷಣೆಗೆ ಬರುತ್ತಿದ್ದಾರೆ. ದ್ರಾಕ್ಷಿ ಹಾಕುವ ಮುನ್ನ ಬೆಂಗಳೂರಿನಲ್ಲಿರುವ ಸ್ನೇಹಿತರ ನೆರವು ಮಾರ್ಗದರ್ಶನ ಪಡೆದು ದ್ರಾಕ್ಷಿ ಬೆಳೆಯ ಬಿತ್ತನೆ ನಿರ್ವಹಣೆ ಮಾಡಲಾಗಿತ್ತು. ನಿರೀಕ್ಷೆಯಂತೆ ಫಸಲು ಬಂದಿದ್ದು ಮುಂದಿನ ತಿಂಗಳು ಕಟಾವಿಗೆ ಬರಲಿದೆ, ಆದಾಯವೂ ಕೈಸೇರುವ ವಿಶ್ವಾಸ ಇದೆ ಎನ್ನುತ್ತಾರೆ ಆಶ್ರಫ್.
ರಾಷ್ಟ್ರೀಯ ಹೆದ್ದಾರಿ ಬಳಿಯೇ ದ್ರಾಕ್ಷಿ ತೋಟ ಇರುವುದರಿಂದ ದಾರಿಯಲ್ಲಿ ಸಾಗುವವರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕೇರಳ ಹಾಗೂ ತಮಿಳುನಾಡು ಮಾರ್ಗವಾಗಿ ಸಾಗುವವರು ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ ಕುಟುಂಬ ಸಮೇತ ಬಹಳಷ್ಟು ಮಂದಿ ತೋಟ ವೀಕ್ಷಣೆಗೆ ಬರುತ್ತಿದ್ದು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಕೃಷಿಯನ್ನು ಲಾಭದಾಯಕವಾಗಿಸುವ ಉದ್ದೇಶದಿಂದ ತೋಟಕ್ಕೆ ಬಂದು ಫೋಟೊ ತೆಗೆದುಕೊಳ್ಳಲು ಬಯಸುವ ಪ್ರವಾಸಿಗರಿಗೆ ದರ ನಿಗದಿ ಮಾಡಲಾಗಿದೆ. ಒಬ್ಬರು ₹ 25 ಕೊಟ್ಟು ಪೋಟೋ ವಿಡಿಯೋ ಮಾಡಿಕೊಳ್ಳಬಹುದಾಗಿದ್ದು ನಿತ್ಯ ನೂರಾರು ಮಂದಿ ಬರುತ್ತಿದ್ದು ಪ್ರವೇಶ ಶುಲ್ಕದ ಮೂಲಕವೇ ಸಾವಿರಾರು ರೂಪಾಯಿ ಆದಾಯ ಬರುತ್ತಿದೆ ಎಂದು ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಸೃಷ್ಟಿ: ತೋಟದ ನಿರ್ವಹಣೆಗೆ ಸ್ಥಳೀಯ ಕೆಲಸಗಾರರನ್ನು ಬಳಸಿಕೊಂಡಿದ್ದು ಅವರಿಗೂ ಉದ್ಯೋಗ ದೊರೆತಂತಾಗಿದೆ. ಐಸ್ ಕ್ರೀಂ, ಹಣ್ಣಿನ ವ್ಯಾಪಾರಿಗಳು, ಎಳನೀರು ಸೇರಿದಂತೆ ಇತರೆ ಮಾರಾಟಗಾರರಿಗೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಉಚಿತವಾಗಿ ಅವಕಾಶ ನೀಡಲಾಗಿದ್ದು ಸ್ಥಳೀಯ ವ್ಯಾಪಾರಿಗಳ ಜೀವನೋಪಾಯವಾಗಿದೆ.
ಜನರಿಗೆ ತಾಜಾ ಹಾಗೂ ಗುಣಮಟ್ಟದ ಹಣ್ಣುಗಳನ್ನು ನೀಡಬೇಕು ಎಂಬ ಉದ್ದೇಶದಿಂದ ಪ್ರಯೋಗಿಕವಾಗಿ ದ್ರಾಕ್ಷಿ ಬೆಳೆದಿದ್ದೇನೆ ಎಂದು ಆಶ್ರಫ್ ತಿಳಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-37-1161565932