
ಶಿಗ್ಗಾವಿ: ಮಳೆಗಾಲದಲ್ಲೂ ‘ಶುದ್ಧ ನೀರಿಲ್ಲ’
ಶಿಗ್ಗಾವಿ: ತುಕ್ಕು ಹಿಡಿದಿರುವ ಕಬ್ಬಿಣದ ಸಾಮಗ್ರಿಗಳು, ಮುರಿದ ಬಾಗಿಲುಗಳು, ಒಡೆದಿರುವ ಸಾಧನಗಳು ಹಾಗೂ ಪೈಪ್‌ಗಳು, ನಿರ್ವಹಣೆ ಇಲ್ಲದೆ ದೂಳುಮಯವಾದ ಘಟಕಗಳು. ಕಳ್ಳರ ಪಾಲಾದ ಬೆಲೆಬಾಳುವ ಉಪಕರಣಗಳು...
ಇದು, ಶಿಗ್ಗಾವಿ ತಾಲ್ಲೂಕಿನ ಹಲವು ಕಡೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುಸ್ಥಿತಿ. ನಿರ್ವಹಣೆ ಕೊರತೆಯಿಂದ ಹಲವು ಘಟಕಗಳು ಬಾಗಿಲು ಬಂದ್ ಮಾಡಿದ್ದು, ಜನರಿಗೆ ಶುದ್ಧ ಕುಡಿಯುವ ನೀರು ಮರಿಚಿಕೆಯಾಗಿದೆ. ಮಳೆಗಾಲದ ಸಂದರ್ಭದಲ್ಲಂತೂ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
‘ಗ್ರಾಮೀಣ ಮತ್ತು ನಗರದಲ್ಲಿರುವ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅಲ್ಲದೇ ಜನರ ಆರೋಗ್ಯ ಕಾಪಾಡಬೇಕು. ರೋಗಗಳ ಮುಕ್ತ ನಾಡು ನಿರ್ಮಾಣ ಮಾಡಬೇಕು’ ಎಂಬ ಉದ್ದೇಶಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರವೇ ಘಟಕಗಳ ಯೋಜನೆ ಜಾರಿಗೆ ತಂದಿದೆ.
ಕಳೆದ ನಾಲ್ಕೈದು ವರ್ಷಗಳ ಹಿಂದೆ, ಕೆಲ ಸೊಸೈಟಿಗಳು ಹಾಗೂ ಕೆಲ ಖಾಸಗಿ ಮಾಲೀಕತ್ವದಡಿ ತಲಾ ಒಂದು ಘಟಕಕ್ಕೆ ಅಂದಾಜು ₹ 15 ಲಕ್ಷದಂತೆ ಅನುದಾನ ನೀಡಲಾಗಿತ್ತು. ತಾಲ್ಲೂಕಿನಲ್ಲಿ ಸುಮಾರು 72 ಗ್ರಾಮಗಳಿಗೆ ಮತ್ತು ಶಿಗ್ಗಾವಿ–ಬಂಕಾಪುರ ಪಟ್ಟಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗಿದೆ.
ನೀರಿನ ಘಟಕಗಳು ಆರಂಭವಾಗಿ ಕೆಲವೇ ತಿಂಗಳದಲ್ಲಿ ಕೆಟ್ಟು ನಿಂತಿವೆ. ಇನ್ನು ಕೆಲವು ನಿರ್ವಹಣೆ ಕೊರತೆಯಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸಿಗದಂತಾಗಿದೆ. ಕೆಲವು ಘಟಕದ ಕೊಳವೆಬಾವಿ ನೀರಿನ ಕೊರತೆಯಿಂದ ನೀರು ಬಾರದಾಗಿ ನಿಂತು ಹೋಗಿವೆ. ಅದರಿಂದಾಗಿ ಮೂಲ ಉದ್ದೇಶವಿಟ್ಟುಕೊಂಡು ಆರಂಭವಾದ ಘಟಕಗಳು ನರಳುತ್ತ ಸಾಗಿವೆ. ಹೀಗಾಗಿ, ಕೆಲವು ಘಟಕಗಳಲ್ಲಿನ ನೀರು ಸಹ ಆರೋಗ್ಯ ಸಮಸ್ಯೆಗೆ ಕಾರಣವಾಗಿ ಪರಿಣಮಿಸಿವೆ.
ಶಿಗ್ಗಾವಿ ಪಟ್ಟಣದಲ್ಲಿ ಅಂಬೇಡ್ಕರ ನಗರ, ಜಯನಗರ, ನವನಗರ, ಕೆ.ಎಸ್.ಆರ್.ಪಿ ರಸ್ತೆಯಲ್ಲಿ, ಜಕ್ಕಿನಕಟ್ಟಿ ರಸ್ತೆ, ಗಾಂಧಿ ನಗರ ಸೇರಿದಂತೆ ಸುಮಾರು 6 ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ ತಾಲ್ಲೂಕು ಕ್ರೀಡಾಂಗಣ ಗ್ರಾಮದೇವಿ ಪಾದಗಟ್ಟಿ ಹತ್ತಿರದ ನೀರಿನ ಘಟಕ ಯಂತ್ರ ಕಾರ್ಯ ನಿರ್ವಹಿಸುತ್ತಿದ್ದರೂ ನಿರ್ವಹಣೆ ಕೊರತೆಯಿಂದ ಸ್ಥಗಿತಗೊಂಡಿದೆ.
ಚನ್ನಪ್ಪ ಕುನ್ನೂರ ಕಾಲೇಜಿನ ಹತ್ತಿರದಲ್ಲಿನ ನೀರಿನ ಘಟಕ ಮತ್ತು ಜಯನಗರದಲ್ಲಿನ ನೀರಿನ ಘಟಕ ಕೆಲ ವರ್ಷಗಳಿಂದ ಸ್ಥಗಿತಗೊಂಡು ಸುತ್ತಲೂ ಗಿಡ ಬೆಳೆದಿದೆ.
ಘಟಕಕ್ಕೆ ನೀರು ತರಲು ಜನ ಭಯ ಪಡುವಂತಾಗಿದೆ. ಇಲ್ಲಿನ ಯಂತ್ರಗಳ ಭಾಗಗಳನ್ನು ಕಳ್ಳರು, ಕದ್ದೊಯ್ದಿದ್ದಾರೆ. ಹೀಗಾಗಿ ಇಲ್ಲಿನ ಜನರಿಗೆ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ 6 ಶುದ್ದ ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ 3 ಘಟಕಗಳು ಸಂಪೂರ್ಣ ಬಂದಾಗಿವೆ. ಹೀಗಾಗಿ, ಇಲ್ಲಿನ ಜನ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ. ಕೆಟ್ಟು ನಿಂತಿರುವ ನೀರಿನ ಘಟಕಗಳನ್ನು ತಕ್ಷಣ ಆರಂಭಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಾರೆ.
24 ಘಟಕ ಬಂದ್: ಶಿಗ್ಗಾವಿ ತಾಲ್ಲೂಕಿನ 93 ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 65 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಈ ಪೈಕಿ 24 ಘಟಕಗಳು ನಿರ್ವಹಣೆ ಕೊರತೆಯಿಂದ ಬಂದ್ ಆಗಿವೆ. ಈ ಭಾಗದ ಜನರಿಗೆ, ಶುದ್ಧ ನೀರು ಮರೀಚಿಕೆಯಾಗಿದೆ.
ತಾಲ್ಲೂಕಿನ 10 ಕಡೆ ಸೊಸೈಟಿಯವರು, 10 ಕಡೆ ಖಾಸಗಿ ವ್ಯಕ್ತಿಗಳು ನೀರಿನ ಘಟಕ ಸ್ಥಾಪಿಸಿದ್ದಾರೆ. ಖಾಸಗಿ ನಿರ್ವಹಣೆ ಇರುವುದರಿಂದ, ತಕ್ಕಮಟ್ಟಿಗೆ ನೀರು ಲಭ್ಯವಾಗುತ್ತಿದೆ.
ಆದರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರ ಅಧೀನದಲ್ಲಿದ್ದ ಘಟಕಗಳ ಬಾಗಿಲು ಬಂದ್ ಆಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ಘಟಕಗಳನ್ನು ಗ್ರಾಮ ಪಂಚಾಯಿತಿ ಅಧೀನಕ್ಕೆ ನೀಡಲಾಗಿದೆ. ಗ್ರಾ.ಪಂ. ಅವರೇ ನಿರ್ವಹಣೆ ಮಾಡುತ್ತಾರೆ’ ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ. ಗ್ರಾ.ಪಂ. ಅಧಿಕಾರಿಗಳನ್ನು ಪ್ರಶ್ನಸಿದರೆ, ‘ಅನುದಾನದ ಕೊರತೆ’ ನೆಪ ಹೇಳಿ ನುಣಚಿಕೊಳ್ಳುತ್ತಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ನಡುವಿನ ಸಮನ್ವಯತೆ ಕೊರತೆಯಿಂದಾಗಿ, ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗುತ್ತಿದ್ದಾರೆ.
‘ತಾಲ್ಲೂಕಿನಲ್ಲಿ ಸುಮಾರು 24 ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿವೆ. ಕೆಲ ಗ್ರಾಮಗಳಲ್ಲಿ ಹೆಚ್ಚು ಬಳಕೆ ಇಲ್ಲದಿದ್ದರಿಂದ, ಘಟಕಗಳು ಬಂದಾಗಿವೆ. ಉಪ್ಪಿನ ಅಂಶದಿಂದಾಗಿ ಕೆಲ ಘಟಕಗಳು ಬಂದ್ ಆಗಿವೆ’ ಎಂದು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಧರ ಹೊಸಮನಿ ತಿಳಿಸಿದರು.
‘ಬನ್ನಿಕೊಪ್ಪ, ಬನ್ನೂರ, ಬೆಳವಲಕೊಪ್ಪ ಕಂಕನವಾಡ, ಹಿರೇಮಲ್ಲೂರ ಪ್ಲಾಟ ಸೇರಿದಂತೆ ಹಲವು ಗ್ರಾಮದಲ್ಲಿನ ನೀರಿನ ಘಟಕದಲ್ಲಿ ಫ್ಲೋರೈಡ್ ಇರುವ ಕಾರಣ ಕೆಲವು ಘಟಕದಲ್ಲಿನ ನೀರನ್ನು ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ’ ಎಂದರು.
‘ಜಿಲ್ಲೆಯ ಹಾನಗಲ್ಲ, ಶಿಗ್ಗಾವಿ, ಸವಣೂರು, ಹಾವೇರಿ ಸೇರಿದಂತೆ 4 ತಾಲ್ಲೂಕಿನ 280 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಶೇ 80ರಷ್ಟು ಕಾರ್ಯ ಪ್ರಗತಿಯಲ್ಲಿದೆ. ಕೆಲ ಕಡೆ ಸಾರ್ವಜನಿಕರ ಆಕ್ಷೇಪಣೆ ಇರುವ ಕಾರಣ, ಕೆಲಸ ನಿಂತಿದೆ’ ಎಂದರು.
‘ಶಿಗ್ಗಾವಿ ತಾಲ್ಲೂಕಿನ ಯತ್ನಹಳ್ಳಿ ತಾಂಡಾದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕ, ನಾಣ್ಯ ಹಾಕಬೇಕೆಂಬ ಕಾರಣಕ್ಕೆ ಹೆಚ್ಚು ಜನರು ಬಳಸುತ್ತಿಲ್ಲ. ಇದನ್ನು ಉಚಿತವಾಗಿ ಮಾಡಿದರೆ, ಅನುಕೂಲ’ ಎಂದು ನಿವಾಸಿ ಕೇಶವಕುಮಾರ ಚವ್ಹಾಣ ಹೇಳಿದರು.
‘ಇಲ್ಲಿಯ ನಿವಾಸಿಗಳು ಬಡವರು, ಕೂಲಿಕಾರರು. ನಾಣ್ಯ ಹಾಕುವಂತೆ ಹೇಳಿದರೂ ಹಾಕುವುದಿಲ್ಲ. ಹೀಗಾಗಿ, ಉಚಿತ ಮಾಡುವುದು ಒಳ್ಳೆಯದು. ಇಲ್ಲಿನ ಜನರಿಗೆ ಸಹಾಯವಾಗುತ್ತದೆ. ಅಧಿಕಾರಿಗಳು ಈ ಕುರಿತು ಪರಿಶೀಲಿಸಬೇಕು’ ಎಂದು ಕೋರಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260810-22-2113953006