
ಚಿತ್ರದುರ್ಗ: ಕೇಳೋರಿಲ್ಲದಂತಾದ ಟೊಮೆಟೊ..!
ಚಿತ್ರದುರ್ಗ: ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಗಳು ಬಾಡುತ್ತಿವೆ. ಆದರೆ, ಮಳೆ ಕೊರತೆಯೇ ಟೊಮೆಟೊ ಬೆಳೆಗೆ ವರವಾಗಿದ್ದು ಈ ಬಾರಿ ಅತ್ಯಧಿಕ ಫಸಲು ಬಂದಿದೆ. ಇದರಿಂದ ರೈತರಿಗೆ ಉಪಯೋಗವೇನೂ ಆಗಿಲ್ಲ. ಬೆಲೆ ಕುಸಿತದಿಂದ ರೈತರು ತೀವ್ರ ನಷ್ಟಕ್ಕೊಳಗಾಗಿದ್ದು ಅವರ ಗೋಳು ಕೇಳುವವರೇ ಇಲ್ಲದಾಗಿದೆ.
ಮಾರ್ಚ್, ಏಪ್ರಿಲ್ ತಿಂಗಳಲ್ಲಿ ನಾಟಿ ಮಾಡಲಾಗುತ್ತಿದ್ದ ಟೊಮೆಟೊ ಬೆಳೆ ಪ್ರತಿ ಬಾರಿಯೂ ಮುಂಗಾರು ಮಳೆಯ ಹೊಡೆತಕ್ಕೆ ಸಿಲುಕುತ್ತಿತ್ತು, ರೋಗದಿಂದ ನರಳುತ್ತಿತ್ತು. ಅದರ ನಡುವೆಯೂ ಉಳಿದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಬಾರದ ಕಾರಣ ಮಳೆ ಹೊಡೆತದಿಂದ ಪಾರಾಗಿ ಅತ್ಯಧಿಕ ಇಳುವರಿ ಬಂದಿದೆ. ಇದರಿಂದ ಬೆಲೆ ಕುಸಿದಿದ್ದು ರೈತರಿಗೆ ನಷ್ಟ ಉಂಟಾಗಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ 3,500 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿತ್ತು. ಈ ಬಾರಿಯ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಉತ್ತಮ ಬೆಲೆ ಸಿಕ್ಕ ಪರಿಣಾಮ ಅತೀ ಹೆಚ್ಚು ರೈತರು ಟೊಮೆಟೊ ನಾಟಿ ಮಾಡಿದರು. ಈ ಬಾರಿಯ ಒಟ್ಟು ನಾಟಿ ಪ್ರದೇಶ 7,960ಕ್ಕೆ ಹೆಚ್ಚಾಗಿದೆ. ಇದರಿಂದ 3.50 ಲಕ್ಷ ಟನ್ ಇಳುವರಿ ಬಂದಿದ್ದು ಬೆಲೆ ಕುಸಿತವಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ಒಟ್ಟಾರೆ ಬಿತ್ತನೆ ಪ್ರದೇಶದಲ್ಲಿ 7,500 ಹೆಕ್ಟೇರ್ ಪ್ರದೇಶದಲ್ಲಿ ಚಳ್ಳಕೆರೆ ತಾಲ್ಲೂಕಿನ ಬೆಳೆಗಾರರು ಟೊಮೆಟೊ ಬೆಳೆದಿದ್ದಾರೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 150 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಸದ್ಯ ಚಳ್ಳಕೆರೆ ತಾಲ್ಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು ನಷ್ಟ ಎದುರಿಸುತ್ತಿದ್ದಾರೆ. ಚಳ್ಳಕೆರೆ ತಾಲ್ಲೂಕಿನ ಕಸಬಾ, ತಳಕು, ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ಅತ್ಯಧಿಕವಾಗಿ ಬೆಳೆದಿದ್ದಾರೆ.
ಚಿಕ್ಕಮ್ಮನಹಳ್ಳಿ ಗೇಟ್ ಬಳಿ ಟೊಮೆಟೊ ಮಾರುಕಟ್ಟೆಯೇ ಇದ್ದು ಅಲ್ಲಿಗೆ ಅಪಾರ ಪ್ರಮಾಣದ ಟೊಮೆಟೊ ಹರಿದು ಬರುತ್ತಿದೆ. ಪ್ರತಿ ಕ್ರೇಟ್ (15 ಕೆ.ಜಿ) ಟೊಮೆಟೊ ₹ 60– ₹ 70ಕ್ಕೆ ಮಾರಾಟವಾಗುತ್ತಿದ್ದು ರೈತರಿಗೆ ಹಾಕಿದ ಬಂಡವಾಳವೂ ಬಾರದಾಗಿದೆ. ಮಾರುಕಟ್ಟೆಯ ಆಸುಪಾಸಿನಲ್ಲಿ, ರಸ್ತೆ ಬದಿಯಲ್ಲಿ ರೈತರು ಅಪಾರ ಪ್ರಮಾಣದ ಟೊಮೆಟೊ ಸುರಿದು ಹೋಗುತ್ತಿದ್ದಾರೆ.
‘3 ಎಕರೆ ಜಮೀನಿನಲ್ಲಿ ಟೊಮೆಟೊ ಉತ್ತಮ ಫಸಲು ಬಂದಿದೆ. ಇಲ್ಲಿಯವರೆಗೂ ₹ 3 ಲಕ್ಷ ಖರ್ಚಾಗಿದೆ. ಬೆಲೆ ಕುಸಿದಿರುವ ಕಾರಣ ಹಾಕಿದ ಬಂಡವಾಳವೂ ಬರುತ್ತಿಲ್ಲ. 150 ಕ್ರೇಟ್ ಟೊಮೆಟೊವನ್ನು ರಸ್ತೆಗೆ ಸುರಿದಿದ್ದೇನೆ’ ಎಂದು ತಳಕು ಗ್ರಾಮದ ಸಿ.ಕುಮಾರ್ ಬೇಸರದಿಂದ ಹೇಳಿದರು.
ಜಿಲ್ಲೆಯಲ್ಲಿ ಟೊಮೆಟೊಗೆ ಬೆಲೆ ಸಿಗದಿದ್ದರೆ ಇಲ್ಲಿಯ ರೈತರು ಕೋಲಾರದ ಮಾರುಕಟ್ಟೆಗೆ ತೆರಳುತ್ತಿದ್ದರು. ಆದರೆ ಇಡೀ ರಾಜ್ಯದಲ್ಲಿ ಬೆಲೆ ಕುಸಿದಿರುವ ಕಾರಣ ಅಲ್ಲಿಗೂ ಸಾಗಣೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಚಳ್ಳಕೆರೆಯಿಂದ ಕೋಲಾರಕ್ಕೆ ಸಾಗಿಸಲು ಪ್ರತಿ ಕ್ರೇಟ್‌ಗೆ ₹ 50 ಬಾಡಿಗೆ ಪಾವತಿ ಮಾಡಬೇಕಾಗಿದೆ. ಸದ್ಯ ಇದರ ಬೆಲೆಯೇ ಅಷ್ಟಿರುವ ಕಾರಣ ರೈತರು ಫಸಲನ್ನು ರಸ್ತೆಗೆ ಸುರಿದು ಹೋಗುತ್ತಿದ್ದಾರೆ.
‘ಈ ಬಾರಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದ ಉತ್ತಮ ಗುಣಮಟ್ಟದ ಟೊಮೆಟೊ ಬರುತ್ತಿದ್ದು ಸ್ಥಳೀಯ ಟೊಮೆಟೊ ಬೆಲೆ ತೀವ್ರ ಕುಸಿತ ಕಂಡಿದೆ. ಜೊತೆಗೆ ಈ ಬಾರಿ ರೈತರು ಉತ್ತಮ ಹೈಬ್ರಿಡ್ ಸಸಿಗಳನ್ನು ನಾಟಿ ಮಾಡಿದ್ದು ಇಳುವರಿ ಹೆಚ್ಚಾಗಿದೆ. ಕೇವಲ 60–65 ದಿನಗಳಲ್ಲಿ ಕಟಾವಿಗೆ ಬಂದಿದ್ದು ಇದು ಕೂಡ ಬೆಲೆ ಕುಸಿತಕ್ಕೆ ಕಾರಣವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಸಚಿವರು ಬೆಳೆಗಾರರನ್ನು ರಕ್ಷಿಸಲಿ
‘ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಗೆದ್ದು ಈಗ ಸಚಿವರಾಗಿರುವ ಟಿ.ರಘುಮೂರ್ತಿ ಅವರು ಟೊಮೆಟೊ ಬೆಳೆಗಾರರ ಹಿತ ಕಾಯಬೇಕು. ತಾಲ್ಲೂಕಿನ ರೈತರು ಇಡೀ ಜಿಲ್ಲೆಗೆ, ರಾಜ್ಯದ ವಿವಿಧೆಡೆಗೆ ಬೆಳೆದು ಕಳುಹಿಸುತ್ತಾರೆ. ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರು ಬೆಳೆಗಾರರನ್ನು ರಕ್ಷಿಸಬೇಕು’ ಎಂದು ನಾಯಕನಹಟ್ಟಿಯ ಟೊಮೆಟೊ ಬೆಳೆಗಾರ ಎನ್.ಶ್ರೀಧರ್ ಒತ್ತಾಯಿಸಿದರು.
‘ಹೆಚ್ಚು ಟೊಮೆಟೊ ಬೆಳೆ ಬಂದಾಗ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ನಿಯಮ ರೂಪಿಸಬೇಕು. ಈ ಬಾರಿ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕು’ ಎಂದು ಅವರು ಒತ್ತಾಯಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-44-1368666068