
ಚಿಕ್ಕಮಗಳೂರು: ಮಳೆಗಾಲದಲ್ಲೂ ಕುಸಿದ ಅಂತರ್ಜಲ
ಚಿಕ್ಕಮಗಳೂರು: ಮುಂಗಾರು ಮಳೆಯ ಕೊರತೆ ನಡುವೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕೂಡ ಕುಸಿತ ಕಂಡಿದೆ. ಜೂನ್ ಮತ್ತು ಜುಲೈನಲ್ಲಿ ನಿರೀಕ್ಷೆಯಷ್ಟು ಮಳೆ ಬಾರದೆ ಕೊಳವೆಬಾವಿಗಳ ನೀರಿನ ಮಟ್ಟ ಇನ್ನಷ್ಟು ಆಳಕ್ಕೆ ಇಳಿದಿದೆ.
ಸಾಮಾನ್ಯವಾಗಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಅಂತರ್ಜಲ ಮಟ್ಟ ಏರು ಗತಿಯಲ್ಲಿ ಇರುವುದು ವಾಡಿಕೆ. ಆದರೆ, ಈ ವರ್ಷ ಜೂನ್ ಮತ್ತು ಜುಲೈ ತಿಂಗಳಿನಲ್ಲೂ ಅಂತರ್ಜಲ ಮಟ್ಟ ಕುಸಿಯುತ್ತಿದೆ.
ಕಳೆದ ವರ್ಷ ಮಾರ್ಚ್‌ನಿಂದಲೇ ಮುಂಗಾರು ಪೂರ್ವ ಮಳೆ ಆರಂಭವಾಗಿತ್ತು. ಇದರಿಂದಾಗಿ ಏಪ್ರಿಲ್‌ನಲ್ಲಿ ಕೆರೆಕಟ್ಟೆಗಳಿಗೆ ಬಹುತೇಕ ನೀರು ಹರಿದಿತ್ತು. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಿಸಿಲಿನ ನಡುವೆ ಅಂತರ್ಜಲ ಮಟ್ಟ ಏರಿಕೆ ಕಂಡಿತ್ತು. ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಾಡಿಕೆಯಷ್ಟು ಮಳೆಯಾಗಲಿಲ್ಲ. ಏಪ್ರಿಲ್‌ನಲ್ಲಿ ಶೇ 20ರಷ್ಟು ಮಳೆ ಕೊರತೆಯಾದರೆ, ಮೇ ತಿಂಗಳಿನಲ್ಲಿ ಈ ವರೆಗೆ ಶೇ 8ರಷ್ಟು ಮಳೆ ಕಡಿಮೆಯಾಗಿದೆ.
ಜೂನ್‌ನಿಂದ ಆರಂಭವಾಗಬೇಕಿದ್ದ ಮುಂಗಾರು ಕೂಡ ಸಾಕಷ್ಟು ಕೊರತೆಯಾಯಿತು. ಜೂನ್ 1ರಿಂದ ಈವರೆಗಿನ ಜಿಲ್ಲೆಯ ಸರಾಸರಿ ಮಳೆ ಪ್ರಮಾಣ ಗಮನಿಸಿದರೆ ಶೇ 33ರಷ್ಟು ಕೊರತೆಯಾಗಿದೆ. ಕೆಲವು ಸ್ಥಳಗಳಲ್ಲಿ ಶೇ 71ರಷ್ಟು ಮಳೆ ಕೊರತೆ ಕೂಡ ಆಗಿದೆ.
ಈ ಎಲ್ಲಾ ಕಾರಣಗಳಿಂದ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಮಲೆನಾಡು ಭಾಗದಲ್ಲಿ ಕಳೆದ ವರ್ಷ ಸಾಕಷ್ಟು ಮಳೆಯಾಗಿತ್ತು. ಅತಿವೃಷ್ಟಿಯ ವಾತಾವರಣ ಇತ್ತು. ಆದರೂ, ಮಲೆನಾಡು ಭಾಗದ ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಇಳಿಕೆ ಕಂಡಿದೆ.
ಅತಿವೃಷ್ಟಿ ಇರಲಿ, ಅನಾವೃಷ್ಟಿ ಇರಲಿ, ಅಂತರ್ಜಲ ಕುಸಿತದಲ್ಲಿ ಕೊಪ್ಪ ತಾಲ್ಲೂಕು ಮೊದಲ ಸ್ಥಾನದಲ್ಲಿಯೇ ಇದೆ. ಈ ವರ್ಷ ಮಾತ್ರವಲ್ಲ ಕಳೆದ 11 ವರ್ಷಗಳಿಂದಲೂ ಕೊಪ್ಪ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕುಸಿತ ಕಾಣಿಸುತ್ತಿದೆ. ಪಕ್ಕದ ನರಸಿಂಹರಾಜಪುರ ತಾಲ್ಲೂಕಿನಲ್ಲೂ ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುವ ತಾಲ್ಲೂಕು ಎಂದರೆ ಶೃಂಗೇರಿ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೃಂಗೇರಿ ತಾಲ್ಲೂಕಿನಲ್ಲೇ ಅಂತರ್ಜಲ ಮಟ್ಟ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದೆ.
ಜೂನ್ ಮತ್ತು ಜುಲೈ ತಿಂಗಳಿಗೆ ಹೋಲಿಸಿದರೆ ಜುಲೈನಲ್ಲಿ ಮಲೆನಾಡಿನಲ್ಲಿ ಕೊಂಚ ಮಳೆಯಾಗಿದೆ. ಮಲೆನಾಡಿನ ತಾಲ್ಲೂಕುಗಳಾದ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ, ಮೂಡಿಗೆರೆ ಮತ್ತು ತರೀಕೆರೆ ತಾಲ್ಲೂಕಿನಲ್ಲಿ ಜೂನ್‌ಗಿಂತ ಜುಲೈನಲ್ಲಿ ಕೊಂಚ ಏರಿಕೆ ಕಂಡಿದೆ.
ಅಜ್ಜಂಪುರ ತಾಲ್ಲೂಕಿನಲ್ಲಿ 10 ವರ್ಷಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಬೇಕಾಬಿಟ್ಟಿಯಾಗಿ ಕೊಳವೆ ಬಾವಿ ಕೊರೆಯುವುದಕ್ಕೆ ಈ ತಾಲ್ಲೂಕಿನಲ್ಲಿ ಕಡಿವಾಣ ಹಾಕಬೇಕಾಗಿದೆ. ಹನಿ ನೀರಾವರಿ ಮತ್ತು ತುಂತುರು ನೀರಾವರಿಗೆ ಆದ್ಯತೆ ನೀಡಿದರೆ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಮುಂಗಾರು ಪೂರ್ವ ಮಳೆಗಳು ಕೈಕೊಟ್ಟಿರುವುದರಿಂದ ಕೆರೆಗಳು ಬಹುತೇಕ ಖಾಲಿಯಾಗಿಯೇ ಇವೆ. ಇದರ ಪರಿಣಾಮವನ್ನು ಮುಂದಿನ ಬೇಸಿಗೆಯಲ್ಲಿ ಎದುರಿಸಬೇಕಾದ ಸಾಧ್ಯತೆ ಹೆಚ್ಚಿದೆ ಎಂದು ರೈತರು ಹೇಳುತ್ತಾರೆ. ಮುಂಗಾರು ಪೂರ್ವ ಮಳೆಯಲ್ಲೇ ಬಯಲು ಸೀಮೆಯ ಕೆರೆಗಳು ಭರ್ತಿಯಾಗಬೇಕಿತ್ತು. ಮುಂಗಾರು ಮಳೆ ಕೂಡ ಕೈಕೊಟ್ಟಿದ್ದರಿಂದ ಎಲ್ಲಾ ಕೆರೆಗಳು ಬರಿದಾಗಿಯೇ ಇವೆ. ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಇನ್ನಷ್ಟು ಕುಸಿದು ತೊಂದರೆ ಎದುರಿಸುವ ಸಾಧ್ಯತೆ ಹೆಚ್ಚಿದೆ ಎಂಬುದು ರೈತರ ಆತಂಕ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-51-1613819758