ಕೊಪ್ಪಳ ಜಿಲ್ಲೆಯ ಕೆರೆಗಳಿಗೆ ‘ಕೃಷ್ಣಾ ಜಲ ಭಾಗ್ಯ’

ಕೊಪ್ಪಳ ಜಿಲ್ಲೆಯ ಕೆರೆಗಳಿಗೆ ‘ಕೃಷ್ಣಾ ಜಲ ಭಾಗ್ಯ’

ಕೊಪ್ಪಳ ಜಿಲ್ಲೆಯ ಕೆರೆಗಳಿಗೆ ‘ಕೃಷ್ಣಾ ಜಲ ಭಾಗ್ಯ’

ಕುಷ್ಟಗಿ: ಈ ಭಾಗದ ಬರ ಪೀಡಿತ ರೈತರ ನಿರೀಕ್ಷೆಯಂತೆ ಕೃಷ್ಣಾ ನದಿಯಿಂದ ನೀರು ಹರಿದು ಬರುತ್ತಿದ್ದು, ರೈತರಲ್ಲಿ ಸಂತಸ ಮೂಡಿದೆ.

ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬೆಳೆಗಳನ್ನು ಬೆಳೆಯುವುದಕ್ಕೆ ಸಾಧ್ಯವಾಗಿಲ್ಲ. ಮಳೆಯಾಶ್ರಿತ ಮಸಾರಿ ಜಮೀನಿನಲ್ಲಿ ಹುರುಳಿ ಹೊರತುಪಡಿಸಿದರೆ ಬೇರೆ ಬೀಜಗಳನ್ನು ಬಿತ್ತನೆ ಮಾಡಲು ಅವಕಾಶವಿಲ್ಲ. ಅಂತರ್ಜಲಮಟ್ಟವೂ ಕುಸಿದಿರುವುದು ರೈತರನ್ನು ಕಂಗಾಲಾಗಿಸಿದೆ.

ಈ ಕಾಲದಲ್ಲಿ ತುಂಬಿ ತುಳುಕಬೇಕಿದ್ದ ಜಿಲ್ಲೆಯ ನೂರಕ್ಕೂ ಅಧಿಕ ಕೆರೆಗಳೆಲ್ಲ ಬತ್ತಿಹೋಗಿವೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಆಲಮಟ್ಟಿ ಜಲಾಶಯದಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ, ಕನಕಗಿರಿ ತಾಲ್ಲೂಕುಗಳಿಗೆ ಸೇರಿರುವ 76 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಲ್ಲಿದ್ದರೂ ಈವರೆಗೂ ನೀರು ಹರಿಸುವ ನಿಟ್ಟಿನಲ್ಲಿ ಕೃಷ್ಣಾಭಾಗ್ಯ ಜಲ ನಿಗಮ ಪ್ರಯತ್ನಿಸಿಲ್ಲ ಎಂಬ ಅಸಮಾಧಾನ ಇಲ್ಲಿಯ ರೈತರಲ್ಲಿತ್ತು. ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳ ಬಗ್ಗೆಯೂ ಜನರ ಅಸಹನೆ ಕಟ್ಟೆ ಒಡೆದಿತ್ತು.

ಆದರೆ ಶುಕ್ರವಾರ ಬೆಳಗಿನಜಾವದಿಂದಲೇ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಲಾಲಬಂಡಿ ಮತ್ತು ಮುದುಟಗಿ ಡೆಲಿವರಿ ಚೆಂಬರ್‌ಗೆ ಕೃಷ್ಣಾ ನೀರು ಬರತೊಡಗಿದೆ. ಸದ್ಯ ಕಲಾಲಬಂಡಿ ಬಳಿ ಇರುವ ಡೆಲಿವರಿ ಚೆಂಬರ್‌ದಲ್ಲಿ ನೀರು ಧುಮ್ಮಿಕ್ಕುತ್ತಿದ್ದು, ರೈತರಲ್ಲಿ ಒಂದಷ್ಟು ಸಮಾಧಾನ ತಂದಿದೆ. ಕೆಬಿಜೆಎನ್‌ಎಲ್‌ ವ್ಯಾಪ್ತಿಗೆ ಸೇರಿದ ಕುಷ್ಟಗಿ ತಾಲ್ಲೂಕಿನ ಎಲ್ಲ 18 ಕೆರೆಗಳಿಗೆ ನೀರು ಈ ವಾರದೊಳಗೆ ಹರಿಯಲಿದೆ. ಕೇವಲ ಹದಿನೆಂಟು ಕೆರೆಗಳನ್ನು ತುಂಬಿಸಿದ ಮಾತ್ರಕ್ಕೆ ಬರ ನೀಗುವುದಿಲ್ಲ. ಆದರೂ ಕೆರೆಗಳು ಭರ್ತಿಯಾದರೆ ಜಾನುವಾರಿಗೆ ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟ ಸುಧಾರಿಸಿ ಸುತ್ತಲಿನ ಕೊಳವೆಬಾವಿಗಳಿಗೂ ಜೀವಜಲ ಜಿನುಗುತ್ತದೆ. ಅದರಿಂದ ಒಂದಷ್ಟು ಜನರಿಗೆ ನೀರಾವರಿ ಆಶ್ರಯದಲ್ಲಿ ಬೆಳೆಗಳನ್ನಾದರೂ ಬೆಳೆಯಲು ಅವಕಾಶವಾಗಲಿದೆ’ ಎಂಬ ಆಶಾಭಾವನೆ ರೈತರದು.

ಕೃಷ್ಣೆಗೆ ನೆರೆ ಕೊಪ್ಪಳಕ್ಕೆ ‘ಬರ–ಬರೆ' ಶೀರ್ಷಿಕೆಯಲ್ಲಿ ಈಚೆಗೆ ಪ್ರಕಟವಾದ ‘ಪ್ರಜಾವಾಣಿ’ ವಿಶೇಷ ವರದಿ ಸರ್ಕಾರದ ಗಮನ ಸೆಳೆದಿತ್ತು. ಈ ಕುರಿತು ಗುರುವಾರ ಇಲ್ಲಿಗೆ ಭೇಟಿ ನೀಡಿದ್ದ ಜಿಲ್ಲೆಯ ಬರ ಸಮೀಕ್ಷೆ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನೀಡಿದ ಭರವಸೆಯಂತೆ ನೀರು ಬರುತ್ತಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ