
ಬೀದರ್: ಕನ್ನಡ ಭವನ ಸಂಸ್ಕೃತಿ ಇಲಾಖೆ ಮಡಿಲಿಗೆ
ಬೀದರ್: ನಗರದ ಚಿಕ್ಕಪೇಟೆ ಸಮೀಪ ನಿರ್ಮಿಸಲಾಗಿರುವ ಕನ್ನಡ ಭವನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಪರ್ದಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.
ಇಷ್ಟೇ ಅಲ್ಲ, ಭವನವನ್ನು ನೋಡಿಕೊಳ್ಳಲು ನಿರ್ವಹಣಾ ಸಮಿತಿ ಕೂಡ ರಚಿಸಿದೆ. ಬೀದರ್ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಮಿತಿಯ ಸಂಚಾಲಕರಾಗಿ ನೇಮಕ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೀದರ್ ಸಹಾಯಕ ನಿರ್ದೇಶಕರು, ಬೀದರ್ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಬೀದರ್ ಮಹಾನಗರ ಪಾಲಿಕೆಯ ಆಯುಕ್ತರನ್ನು ಸದಸ್ಯರಾಗಿ ನೇಮಿಸಲಾಗಿದೆ.
ಗಡಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಬೀದರ್ ನಗರದ ಚಿಕ್ಕಪೇಟೆ ಸಮೀಪ ಜಿಲ್ಲಾಡಳಿತವು ಗುರುತಿಸಿರುವ ಸ್ಥಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿನಲ್ಲಿ ಕನ್ನಡ ಭವನ ನಿರ್ಮಿಸಲಾಗಿದ್ದು, ಸದರಿ ಕಟ್ಟಡವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೀದರ್ ಸಹಾಯಕ ನಿರ್ದೇಶಕರ ಸುಪರ್ದಿಗೆ ವಹಿಸಿ ಆದೇಶಿಸಲಾಗಿದೆ. ಇದರ ನಿರ್ವಹಣೆಗೆ ಸಮಿತಿ ರಚಿಸಿ ಆದೇಶಿಸಲಾಗಿದೆ. ಸದರಿ ಆದೇಶದ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅವರು ಬೀದರ್ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
₹2.50 ಕೋಟಿ ಅನುದಾನದಲ್ಲಿ ಮೂರು ಅಂತಸ್ತಿನ ಕನ್ನಡ ಭವನ ಕಟ್ಟಡವನ್ನು 2023ರ ಫೆಬ್ರುವರಿ 3ರಂದು ಉದ್ಘಾಟಿಸಲಾಗಿತ್ತು. ಆದರೆ, ಆರಂಭದಿಂದಲೂ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಡುವೆ ಜಟಾಪಟಿ ಮುಂದುವರಿದಿದೆ.
ಅಧಿಕೃತವಾಗಿ ಕನ್ನಡ ಭವನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಸ್ತಾಂತರಿಸಬೇಕೆಂದು ಕಸಾಪ ಆರಂಭದಿಂದಲೂ ಬೇಡಿಕೆ ಇರಿಸುತ್ತ ಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ತಡೆ ಕೂಡ ಒಡ್ಡುವ ಕೆಲಸ ಆಗಿದೆ. ಬಳಿಕ ಅಂದಿನಿಂದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಭವನವನ್ನು ತನ್ನ ಸುಪರ್ದಿಗೆ ವಹಿಸಬೇಕೆಂದು ಪರಿಷತ್ತು ಸತತವಾಗಿ ಸರ್ಕಾರವನ್ನು ಆಗ್ರಹಿಸುತ್ತಲೂ ಬಂದಿದೆ. ಆದರೆ, ಅದರ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಈಗ ಅಧಿಕೃತವಾಗಿ ಭವನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ನೆರವೇರಿಸಿಕೊಂಡು ಹೋಗಲು ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಿಸಬೇಕೆಂಬುದು ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸಾಹಿತ್ಯ, ಸಾಂಸ್ಕೃತಿಕ ವಲಯದವರ ದಶಕಗಳ ಬೇಡಿಕೆ ಇತ್ತು. ಅದು ಈಡೇರಿದ ನೆಮ್ಮದಿ ಭಾವದಲ್ಲಿದ್ದವರಿಗೆ ಈ ಆದೇಶ ವಿಚಲಿತರಾಗಿಸಿದೆ.
‘ಕಸಾಪದಿಂದಲೇ ಉದ್ಘಾಟನೆ’
ಕನ್ನಡ ಭವನದಲ್ಲಿ ಇದುವರೆಗೆ ನಡೆದ ಎಲ್ಲಾ ಪ್ರಕ್ರಿಯೆಗಳು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿಯೇ ನಡೆದಿವೆ. ಭವನದ ಶಂಕುಸ್ಥಾಪನೆ, ಉದ್ಘಾಟನೆ ಎಲ್ಲವೂ ಕಸಾಪ ಅಡಿಯಲ್ಲಿಯೇ ನಡೆದಿವೆ. ಜಾಗ ಕೂಡ ಪರಿಷತ್ತಿನ ಹೆಸರಿನಲ್ಲಿದೆ. ಹೊಸ ಆದೇಶ ನನ್ನ ಗಮನಕ್ಕಿಲ್ಲ.
– ಸುರೇಶ ಚನಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-33-1837881261