ಮೈಸೂರು-ತಿ.ನರಸೀಪುರ ಹೆದ್ದಾರಿ ವಿಸ್ತರಣೆ: 86 ಮರಗಳಿಗೆ ಆಪತ್ತು

ಮೈಸೂರು-ತಿ.ನರಸೀಪುರ ಹೆದ್ದಾರಿ ವಿಸ್ತರಣೆ: 86 ಮರಗಳಿಗೆ ಆಪತ್ತು

ಮೈಸೂರು-ತಿ.ನರಸೀಪುರ ಹೆದ್ದಾರಿ ವಿಸ್ತರಣೆ: 86 ಮರಗಳಿಗೆ ಆಪತ್ತು

ತಿ.ನರಸೀಪುರ: ರಾಷ್ಟ್ರೀಯ ಹೆದ್ದಾರಿ–766ರಲ್ಲಿ ಮೈಸೂರು-ತಿ.ನರಸೀಪುರ ನಡುವಿನ ಮಾರ್ಗ ವಿಸ್ತರಣೆ ಕಾಮಗಾರಿಗೆ ಅಡ್ಡಿಯಾಗುವ 86 ಮರಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರಸ್ತಾವ ಸಲ್ಲಿಸಿದೆ.

ಮೈಸೂರಿನಿಂದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ತಿ.ನರಸೀಪುರ ಸರಹದ್ದಿನ ವ್ಯಾಪ್ತಿಯಲ್ಲಿ ಕೆಂಪಯ್ಯನಹುಂಡಿಯಿಂದ ತಿರಮಕೂಡಲು ಮೇಲ್ಸೆತುವೆವರೆಗೂ ರಸ್ತೆ ಎರಡೂ ಬದಿಗಳಲ್ಲಿರುವ 86 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಈ ಪೈಕಿ 41 ಮರ ರಸ್ತೆಯ ಎಡಭಾಗದಲ್ಲಿ ಮತ್ತು 45 ಮರ ಬಲಭಾಗದಲ್ಲಿವೆ.

ತಿ. ನರಸೀಪುರ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬರುವ 86 ಮರಗಳನ್ನು ಕಡಿಯುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕರ್ನಾಟಕ ಅರಣ್ಯ ಇಲಾಖೆಯು ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿತ್ತು. ಮರಗಳನ್ನು ಕಡಿಯುವ ಪ್ರಸ್ತಾವಕ್ಕೆ ಪರಿಸರವಾದಿಗಳು, ಸಾರ್ವಜನಿಕ ವಲಯದಿಂದ ಸಾಕಷ್ಟು ಆಕ್ಷೇಪಣೆ ಸಲ್ಲಿಕೆಯಾಗಿವೆ.

ಪ್ರಾದೇಶಿಕ ವಲಯ ಅರಣ್ಯ ಕಚೇರಿಗೆ ಇ–ಮೇಲ್ ಮೂಲಕ ಆಕ್ಷೇಪಣೆ ಸಲ್ಲಿಕೆಯಾಗುತ್ತಲೇ ಇವೆ. ಮೈಸೂರು ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧೆಡೆಗಳಿಂದ ಆಕ್ಷೇಪಣೆ ಸಲ್ಲಿಕೆಯಾಗಿರುವುದು ವಿಶೇಷ. ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಮುಗಿದ ಮೇಲೂ ಇ‌-ಮೇಲ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ. ಆಕ್ಷೇಪಣೆಗೆ ದಿನಾಂಕ ವಿಸ್ತರಿಸುವಂತೆ ಪರಿಸರವಾದಿಗಳು ಇಲಾಖೆಗೆ ಮನವಿ ಮಾಡಿದ್ದಾರೆ.

'ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವೇಳೆ ನಮ್ಮ ವ್ಯಾಪ್ತಿಗೆ ಬರುವ ಮರಗಳನ್ನು ಕಡಿಯಲು ಅನುಮತಿ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಆಹ್ವಾನಿಸಲಾಗಿತ್ತು. ಮರ ಕಡಿಯದಂತೆ ಹಲವಾರು ಆಕ್ಷೇಪಣೆ ಬಂದಿದ್ದು, ಮರ ಕಡಿಯದೇ ರಸ್ತೆ ವಿಸ್ತರಣೆ ಮಾಡುವಂತೆ ಇ–ಮೇಲ್ ಬರುತ್ತಿವೆ. ಅವುಗಳನ್ನು ಪರಿಶೀಲಿಸಿ ಆಕ್ಷೇಪಣೆಗಳ ಆಧಾರದ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗುವುದು’ ಎಂದು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮರಗಳನ್ನು ಕಡಿದು ರಸ್ತೆ ವಿಸ್ತರಣೆ ಮಾಡುವುದು ಹಳೆ ಪದ್ಧತಿ. ಜಾಗತಿಕ ತಾಪಮಾನ ಹೆಚ್ಚಾಗಿದ್ದು ,ಮರಗಳನ್ನು ಉಳಿಸಿ, ಬೆಳೆಸುವ ಅನಿವಾರ್ಯತೆ ಎದುರಾಗಿದೆ. ಮರಗಳನ್ನು ಕಡಿಯದೆ ಹೆದ್ದಾರಿ ನವೀಕರಣ ಮಾಡುವ ವ್ಯವಸ್ಥೆಗಳಿವೆ. ಮೈಸೂರಿನಿಂದ-ಎಚ್ ಡಿ ಕೋಟೆ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಯಾವುದೇ ಮರಗಳನ್ನು ಕತ್ತರಿಸದೆ ಕಾಮಗಾರಿ ಮಾಡಲಾಗಿದೆ. ಪರಿಸರ ಹಾಳು ಮಾಡಬೇಡಿ ಎನ್ನುವುದು ನಮ್ಮ ಮನವಿ ಎಂದು ‘ಪರಿಸರಕ್ಕಾಗಿ ನಾವು’ ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260808-39-1906546987

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ