
ಹುಣಸೂರು: ಸೇಬು ಬೆಳೆದು ಮಾದರಿಯಾದ ನಿವೃತ್ತ ಅಧಿಕಾರಿ ರಂಗರಾಮಯ್ಯ
ಹುಣಸೂರು: ದೂರದ ಕಾಶ್ಮೀರದಲ್ಲಿ ಬೆಳೆಯುವ ಸೇಬನ್ನು ಬೆಳೆದು ಮಾದರಿಯಾಗಿದ್ದಾರೆ ಸಿಎಫ್‌ಟಿಆರ್‌ಐ ನಿವೃತ್ತ ಅಧಿಕಾರಿ ರಂಗರಾಮಯ್ಯ.
ನಿವೃತ್ತಿಯ ಬಳಿಕ ನೆಮ್ಮದಿಯ ಜೀವನ ಕಳೆಯಬಹುದಿತ್ತು. ಆದರೆ ಮನಸ್ಸಿಗೆ ಖುಷಿ ನೀಡುವಂತೆ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ತಾಲ್ಲೂಕಿನ ಗದ್ದಿಗೆ ಬಳಿಯ ಪೆರಿಯಾರ್ ಗ್ರಾಮದಲ್ಲಿ 10 ಎಕರೆ ಭೂಮಿ ಖರೀದಿಸಿ ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ.
10 ಎಕರೆ ಪ್ರದೇಶದಲ್ಲಿ 200 ತೆಂಗು, 1,500 ಅಡಿಕೆ ಮತ್ತು 350 ಕಾಶ್ಮೀರಿ ಆ್ಯಪಲ್, 200 ಬೆಣ್ಣೆ ಹಣ್ಣು, 50 ಬಗೆಯ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ಇದಲ್ಲದೆ ಅಲಹಾಬಾದ್ ಸಫೇದ್ ತಳಿಗೆ ಸೇರಿದ 300 ಸೀಬೆ ಬೆಳೆದಿದ್ದಾರೆ.
‘ಎಲ್ಲವೂ ಉತ್ತಮವಾಗಿ ಇಳುವರಿ ನೀಡುತ್ತಿವೆ. ಇಲ್ಲಿನ ಹವಾಮಾನಕ್ಕೆ ಕಾಶ್ಮೀರಿ ಆ್ಯಪಲ್ ಬೆಳೆಯಲು ಸಾಧ್ಯವೆ ಎಂಬ ಪ್ರಶ್ನೆ ಉದ್ಭವಿಸಿತ್ತು, ಅದನ್ನು ಸ್ವತಃ ಪ್ರಾಯೋಗಿಕವಾಗಿ ಬೆಳೆಸಿದ್ದು ಈಗ ಎಲ್ಲವೂ ಕಾಯಿ ಬಿಡಲು ಆರಂಭಿಸಿವೆ’ ಎಂದು ರಂಗರಾಮಯ್ಯ ತಿಳಿಸಿದರು.
ಕೃಷಿ ಅನುಭವ: ‘ಸರ್ಕಾರಿ ಉದ್ಯೋಗದಲ್ಲಿ ಸ್ವಂತಿಕೆ ಇಲ್ಲದೆ ಮೇಲಿನ ಅಧಿಕಾರಿಗಳು ಹೇಳಿದ ಕೆಲಸ ಮಾಡಬೇಕಿತ್ತು, ಆದರೆ ಈಗ ಎಲ್ಲವೂ ಬದಲಾಗಿದೆ. ಮುಕ್ತ ಮನಸ್ಸಿನಿಂದ ತೋಟದಲ್ಲಿ ಪರಿಸರಕ್ಕೆ ಪೂರಕವಾದ ಬೇಸಾಯ ನಡೆಸಿ ಬದುಕುವ ದಾರಿ ಕಂಡು ಕೊಂಡಿದ್ದೇನೆ. ಇಲ್ಲಿ ಯಾರಿಗೂ ತಲೆ ತಗ್ಗಿಸುವ ಅವಶ್ಯಕವಿಲ್ಲ. ಕೃಷಿ ಸುಖ ಮತ್ತು ಸ್ವಾತಂತ್ರ್ಯ ನೀಡುವ ಕ್ಷೇತ್ರ’ ಎಂದು ಹೇಳಿದರು.
ಸಾವಯವ: ಪೂರ್ವಜರು ಬೇಸಾಯಕ್ಕೆ ಕೊಟ್ಟಿಗೆ ಗೊಬ್ಬರ ಮತ್ತು ಕಳೆಯನ್ನು ಭೂಮಿಗೆ ಸೇರಿಸಿ ಹಸಿರು ಗೊಬ್ಬರವನ್ನಾಗಿಸಿ ಕಾಳು ಕಡ್ಡಿ ಬೆಳೆಯುತ್ತಿದ್ದರು. ಇತ್ತೀಚಿಗೆ ರಾಸಾಯನಿಕ ಗೊಬ್ಬರ ಬಳಸಿ ಆಹಾರ ಉತ್ಪತ್ತಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಸಾಯನಿಕ ಗೊಬ್ಬರ ಬಳಸಿ ಹೇರಳವಾಗಿ ಆಹಾರ ಉತ್ಪಾದಿಸಬಹುದು ಆದರೆ, ಭವಿಷ್ಯದ ದೃಷ್ಟಿಯಿಂದ ಇದು ಮಣ್ಣಿಗೆ ಮಾರಕ ಎಂಬುದು ಅವರ ಅಭಿಪ್ರಾಯ.
‘ಕೊಟ್ಟಿಗೆ ಗೊಬ್ಬರ ಮತ್ತು ಜೀವಾಮೃತ ನೀಡುವುದರಿಂದ ಮಣ್ಣಿನಲ್ಲಿ ಸೂಕ್ಷ್ಮ ಜೀವಿ ಹೆಚ್ಚಲಿದ್ದು, ಇದರಿಂದ ಎರೆ ಹುಳು ಹೆಚ್ಚಿ ರೈತನಿಗೆ ಪ್ರಾಕೃತಿಕವಾಗಿ ಭೂಮಿ ಸಡಿಲ ಮಾಡುತ್ತದೆ. ನಮ್ಮ ತೋಟದಲ್ಲಿ ಎಲ್ಲಿ ನೀಡಿದರು ಎರೆಹುಳು ಕಾಣಸಿಗುವುದರಿಂದ ಮಣ್ಣು ಆರೋಗ್ಯದಿಂದ ಇದೆ’ ಎಂದರು.
ನೀರಾವರಿ: ಕೊಳವೆ ಬಾವಿಯಿಂದ ನಿರಂತರ ನೀರು ನೀಡುವುದರಿಂದ ಗಿಡ ಮರಗಳ ಬೆಳವಣಿಗೆ ಕ್ಷೀಣಿಸುತ್ತದೆ. 15 ದಿನಗಳಿಗೆ ಒಂದು ಬಾರಿ ತುಂತುರು ಹನಿ ನೀರಾವರಿ ನೀಡುವುದು ಸೂಕ್ತ. ಇದರಿಂದ ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡಬಹುದು ಎಂದು ಸಲಹೆ ನೀಡಿದರು.
ಆದಾಯ, ಖುಷಿಗಾಗಿ ಕೃಷಿ ಮಾಡುತ್ತಿದ್ದೇನೆ. ಇದರಿಂದ ಹೆಚ್ಚಿನ ಆದಾಯ ನಿರೀಕ್ಷಿಸುತ್ತಿಲ್ಲ. 200 ತೆಂಗಿನ ಮರದಿಂದ ವರ್ಷಕ್ಕೆ ₹3 ಲಕ್ಷ, 1500 ಅಡಿಕೆಯಲ್ಲಿ 800 ಅಡಿಕೆ ಪ್ರಥಮ ಬಾರಿಗೆ ಫಸಲು ಬಿಟ್ಟಿದೆ. ಉಳಿದಂತೆ ಹಣ್ಣು ಹಂಪಲು ಮಾರಾಟ ಮಾಡಿದಲ್ಲಿ ಜೀವನಕ್ಕೆ ಬೇಕಾದಷ್ಟು ಆದಾಯವಿದೆ’ ಎಂದು ಹೇಳುತ್ತಾರೆ.
ಕೃಷಿಯಿಂದ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ಮಣ್ಣಿನ ಆರೋಗ್ಯ ಸಂರಕ್ಷಿಸಿ ಭವಿಷ್ಯಕ್ಕೆ ಆರೋಗ್ಯ ಭೂಮಿ ಬಳುವಳಿ ನೀಡಬೇಕು’ ಎಂಬ ಉದ್ದೇಶದಿಂದ ಬೇಸಾಯ ಆರಂಭಿಸಿದ್ದೇನೆ ಎಂದು ರಂಗರಾಮಯ್ಯ ಹೇಳಿದರು.
ಇತ್ತೀಚಿನ ದಿನದಲ್ಲಿ ರೈತರ ಮಾನಸಿಕ ಸ್ಥಿತಿ ಬದಲಾಗಿದೆ, ಕಳೆ ಬೆಳೆದಲ್ಲಿ ಅದಕ್ಕೆ ಕಳೆನಾಶಕ ಔಷಧಿ ಸಿಂಪಡಿಸುವ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ. ಭೂಮಿಯಲ್ಲಿ ಎಷ್ಟು ಕಳೆ ಬೆಳೆವುದೋ ಅಷ್ಟು ಭೂಮಿಯಲ್ಲಿ ಸತ್ವ ಇದೆ ಎಂದು ಯೋಚಿಸಬೇಕು. ಕಳೆಯನ್ನೇ ಗೊಬ್ಬರವಾಗಿ ಪರಿವರ್ತಿಸಿಕೊಳ್ಳುವುದನ್ನು ರೈತ ಬೆಳೆಸಿಕೊಳ್ಳಬೇಕು. ದ್ವಿದಳ ಧಾನ್ಯ ಬಿತ್ತಿ ಹಸಿರು ಗೊಬ್ಬರ ಕಳೆಯ ಸಮೇತ ಭೂಮಿಗೆ ವರ್ಷಕ್ಕೆ ಎರಡು ಬಾರಿ ಸೇರಿಸುತ್ತೇನೆ. ಇದರಿಂದ ಎನ್.ಪಿ.ಕೆ ಗೊಬ್ಬರ ತೋಟಗಾರಿಕೆ ಬೇಸಾಯಕ್ಕೆ ನೀಡಿದಂತಾಗುವುದು.
‘ಕೃಷಿ ಆದಾಯವಾಗದೆ ಮಣ್ಣಿನ ಆರೋಗ್ಯ ಸೃಷ್ಟಿಸಿ ಭವಿಷ್ಯಕ್ಕೆ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ 6 ವರ್ಷಗಳಿಂದ ರಾಸಾಯನಿಕ ಗೊಬ್ಬರಮುಕ್ತ ಬೇಸಾಯ ಮಾಡುತ್ತಿದ್ದೇನೆ’ ಎಂದರು.
ತೋಟಗಾರಿಕೆ ಇಲಾಖೆ ವತಿಯಿಂದ ಕೊಬ್ಬರಿ ಮಾಡಲು ಉಗ್ರಾಣ, ಹನಿ ನೀರಾವರಿ ಮತ್ತು ಅಲಹಬಾದ್ ಸಫೇದ್ ಸೀಬೆ ಸಸಿಗಳನ್ನು ರಿಯಾಯಿತಿಯಲ್ಲಿ ನೀಡಲಾಗುವುದು ಡಾ.ನಾಗರಾಜ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-38-1961622660