
ಶ್ರಾವಣ, ವರಮಹಾಲಕ್ಷ್ಮಿ ಹಬ್ಬ: ಕನಕಾಂಬರ ಕೆ.ಜಿ.ಗೆ ₹4 ಸಾವಿರ
ಮೈಸೂರು: ಶ್ರಾವಣ ಮತ್ತು ವರಮಹಾಲಕ್ಷ್ಮಿ ಹಬ್ಬದ ಹೊಸ್ತಿಲಲ್ಲಿ ಕನಕಾಂಬರ ಹೂವಿನ ಬೆಲೆ ಅಂಬರಕ್ಕೆ ಏರಿದೆ. ಪ್ರತಿ ಕೆ.ಜಿ.ಗೆ ₹4 ಸಾವಿರದವರೆಗೆ ಮಾರಾಟವಾಗುತ್ತಿದೆ.
ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಮಂಗಳವಾರ ಕನಕಾಂಬರ ಕೆ.ಜಿ.ಗೆ ₹3,500–₹4,000ರ ಸರಾಸರಿಯಲ್ಲಿ ಮಾರಾಟ ನಡೆಯಿತು. ಹಬ್ಬದ ಕಾರಣಕ್ಕೆ ಮಾರುಕಟ್ಟೆಯಲ್ಲಿ ಜನ ಕಿಕ್ಕಿರಿದು ತುಂಬಿದ್ದು, ಬೇಡಿಕೆಯಷ್ಟು ಹೂವು ಬಂದಿರಲಿಲ್ಲ. ಹೀಗಾಗಿ ಹೊತ್ತು ಕಳೆದಂತೆ ದರ ಹೆಚ್ಚುತ್ತಲೇ ಹೋಯಿತು.
ಕಳೆದ ವರ್ಷ ಇದೇ ಅವಧಿಯಲ್ಲಿ ಮೈಸೂರು ಮಾರುಕಟ್ಟೆಯಲ್ಲಿ ಕನಕಾಂಬರ ಕೆ.ಜಿ.ಗೆ ₹1,200–₹1,500ರ ಸರಾಸರಿ ಬೆಲೆ ಹೊಂದಿತ್ತು. ಈ ವರ್ಷ ದರ ದುಪ್ಪಟ್ಟಾಗಿದೆ. ಇಳುವರಿ ಕುಸಿತ ಇದಕ್ಕೆ ಪ್ರಮುಖ ಕಾರಣ.
ಮೈಸೂರು ಸುತ್ತಮುತ್ತ ರೈತರು ಮಳೆಯಾಶ್ರಿತ ಜಮೀನಿನಲ್ಲಿ ಕನಕಾಂಬರ ಹೆಚ್ಚಾಗಿ ಬೆಳೆಯುತ್ತಾರೆ. ನೀರಾವರಿಯಲ್ಲಿ ಬೆಳೆಯಬಹುದಾದರೂ ರೋಗಬಾಧೆ ಹೆಚ್ಚು. ಈ ವರ್ಷ ಬರದ ಕಾರಣಕ್ಕೆ ಸಾಕಷ್ಟು ಕಡೆ ಬೆಳೆ ಹಾನಿಯಾಗಿದ್ದು, ಸರಾಸರಿಯ ಅರ್ಧದಷ್ಟು ಹೂವು ಸಹ ಬೆಳೆಯಲಾಗುತ್ತಿಲ್ಲ. ಹೀಗಾಗಿ ಕನಕಾಂಬರದ ಬೆಲೆ ಅಂಬರಕ್ಕೆ ಏರಿದೆ.
‘20 ಗುಂಟೆಯಲ್ಲಿ ಕನಕಾಂಬರ ಬೆಳೆದಿದ್ದು, ತಿಂಗಳುಗಳ ಹಿಂದೆ 13–15 ಕೆ.ಜಿ.ಯಷ್ಟು ಕೊಯ್ಲು ಮಾಡುತ್ತಿದ್ದೆ. ಇಂದು ನಾಲ್ಕು ಕೆ.ಜಿ.ಯಷ್ಟು ಮಾತ್ರ ಸಿಕ್ಕಿದೆ. ಬೆಲೆ ಹೆಚ್ಚಿದ್ದರೂ ಹೆಚ್ಚು ಬೆಳೆ ಇಲ್ಲ’ ಎಂದು ಮಾರುಕಟ್ಟೆಗೆ ಹೂವು ತಂದಿದ್ದ ಹುಣಸೂರು ತಾಲ್ಲೂಕಿನ ಕೊಮ್ಮೇಗೌಡನಕೊಪ್ಪಲು ಗ್ರಾಮದ ರೈತ ನಾಗೇಶ್ ಹೇಳಿದರು.
‘ಶ್ರಾವಣ ಮಾಸ ಆರಂಭವಾದಾಗಿನಿಂದಲೂ ಕನಕಾಂಬರ ಬೆಲೆ ಏರುಮುಖವಾಗಿಯೇ ಇದೆ. ಬುಧವಾರವೂ ಇದೇ ಬೆಲೆ ಮುಂದುವರಿಯಬಹುದು. ಹಬ್ಬದ ನಂತರ ದರ ಇಳಿಯಲಿದೆ’ ಎಂದು ದೇವರಾಜ ಮಾರುಕಟ್ಟೆಯ ಹೂವಿನ ವರ್ತಕ ನಯಾಜ್ ಹೇಳಿದರು.
ರಾಜ್ಯದ ಇತರೆಡೆಯೂ ಬೆಲೆ ಏರಿಕೆ
ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ ಜಿಲ್ಲೆ) ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹4 ಸಾವಿರದಿಂದ ₹5 ಸಾವಿರ ದರವಿದೆ. ಕೋಲಾರ ಜಿಲ್ಲೆಯಲ್ಲಿ₹3 ಸಾವಿರ ತುಮಕೂರು ಜಿಲ್ಲೆಯಲ್ಲಿ ₹2800 ರಿಂದ ₹3 ಸಾವಿರ ಬೆಲೆ ಇದೆ. ದಾವಣಗೆರೆ– ಚಿತ್ರದುರ್ಗ ಮಾರುಕಟ್ಟೆಯಲ್ಲೂ ಪ್ರತಿ ಕೆ.ಜಿ. ಕನಕಾಂಬರದ ಬೆಲೆ ₹1 ಸಾವಿರವಿದ್ದದ್ದು ₹2 ಸಾವಿರದಿಂದ– ₹3 ಸಾವಿರದ ವರೆಗೂ ಏರಿಕೆಯಾಗಿದೆ.
‘ಹಬ್ಬದ ಕಾರಣ ರಾಯಚೂರು ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಕನಕಾಂಬರ ಹೂವಿಗೆ ₹2400 ಬೆಲೆ ಇದೆ. ಹೀಗಾಗಿ ವ್ಯಾಪಾರಿಗಳು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ’ ಎನ್ನುತ್ತಾರೆ ರಾಯಚೂರು ಹೂವಿನ ವ್ಯಾಪಾರಿ ಅಬ್ದುಲ್. ಯಾದಗಿರಿ ಭಾಗಕ್ಕೆ ತುಮಕೂರು ಶಿರಾದಿಂದ ಕನಕಾಂಬರ ಬರುತ್ತದೆ. ಮಳೆ ಕೊರತೆಯ ಕಾರಣ ಮಾರುಕಟ್ಟೆಯಲ್ಲಿ ಹೂವು ಕಡಿಮೆಯಾಗಿದೆ. ಬೇಡಿಕೆ ಹೆಚ್ಚಾಗಿದೆ. ಒಂದು ಕೆ.ಜಿ.ಗೆ ₹1200ರಿಂದ ₹1500ಕ್ಕೆ ಸಿಗುತ್ತಿದ್ದ ಹೂವು ಈಗ ₹ 2500ಕ್ಕೆ ಏರಿಕೆಯಾಗಿದೆ. ಹೀಗಾಗಿ ಗ್ರಾಂ ಲೆಕ್ಕದಲ್ಲಿ ಖರೀದಿಸುತ್ತಿದ್ದೇವೆ’ ಎನ್ನುತ್ತಾರೆ ಯಾದಗಿರಿಯ ಹೂವಿನ ವ್ಯಾಪಾರಿ ಪ್ರಕಾಶ ಹೂಗಾರ.