
ಕೈವಾರ ಯಾತ್ರಾ ಸ್ಥಳದಲ್ಲಿ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರ ಪರದಾಟ
ಚಿಂತಾಮಣಿ: ಕೈವಾರ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಆದರೆ, ಇಂತಹ ಸ್ಥಳದಲ್ಲೇ ಸುಸಜ್ಜಿತ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಪಟ್ಟಣದಲ್ಲಿ ಯೋಗಿ ನಾರೇಯಣ ಮಠ, ಅಮರ ನಾರೇಯಣಸ್ವಾಮಿ, ಭೀಮಲಿಂಗೇಶ್ವರ ಸ್ವಾಮಿ ದೇವಾಲಯ, ಯತೀಂದ್ರರರು ತಪಸ್ಸು ಮಾಡಿ ಸಿದ್ಧಿ ಪಡೆದಿರುವ ನರಸಿಂಹಸ್ವಾಮಿ ಗುಹೆ, ವೈಕುಂಠ ಯಾಗಶಾಲೆ, ಬೆಟ್ಟದ ತಪ್ಪಲಿನಲ್ಲಿ ತಪೋವನ ಮುಂತಾದ ಪ್ರಸಿದ್ಧ ಯಾತ್ರಾ ತಾಣಗಳಿವೆ.
ಯೋಗಿ ನಾರೇಯಣ ಯತೀಂದ್ರರು ಮತ್ತು ಅಮರ ನಾರಾಯಣಸ್ವಾಮಿ ಜಾತ್ರೆ, ಯತೀಂದ್ರರರ ಆರಾಧನೆ, ಗುರುಪೂಜಾ ಸಂಗೀತ ಮಹೋತ್ಸವ, ಪ್ರತಿ ತಿಂಗಳು ಹುಣ್ಣಿಮೆ ರಥೋತ್ಸವ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ.
ಸುಕ್ಷೇತ್ರಕ್ಕೆ ಅಪಾರ ಸಂಖ್ಯೆಯ ಭಕ್ತರು ನಿತ್ಯವೂ ಭೇಟಿ ನೀಡುತ್ತಾರೆ. ಜೊತೆಗೆ ಇಲ್ಲಿಂದ ಬೇರೆ ಬೇರೆ ಸ್ಥಳಗಳು, ನಗರ, ಗ್ರಾಮಗಳಿಗೂ ಸಂಚರಿಸುತ್ತಾರೆ. ಇದೊಂದು ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರವಾಗಿದೆ. ಇಂತಹ ಪಟ್ಟಣದಲ್ಲಿ ಸೂಕ್ತ ಬಸ್ ನಿಲ್ದಾಣವಿಲ್ಲದ ಕಾರಣ ಸಾರ್ವಜನಿಕರು ರಸ್ತೆ ಆಸುಪಾಸಿನಲ್ಲೇ ನಿಂತು ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಮಕ್ಕಳು, ಮಹಿಳೆಯರು, ವೃದ್ಧರು ಜೀವ ಭಯದಲ್ಲಿ ರಸ್ತೆ ಇಕ್ಕೆಲಗಳಲ್ಲಿ ನಿಂತು ಬಸ್‌ಗಳಿಗಾಗಿ ಕಾಯಬೇಕು. ದಣಿವಾದರೆ ತಾವು ತಂದ ಚೀಲ ತಲೆ ಮೇಲೆ ಹಿಡಿದು ನಿಲ್ಲಬೇಕು. ಇಲ್ಲವೇ ಆಸುಪಾಸಿನ ಅಂಗಡಿಗಳ ಎದುರು ಕುಳಿತುಕೊಳ್ಳಬೇಕಾಗಿದೆ.
ಕೈವಾರ ಕ್ರಾಸ್: ಕೈವಾರ ಕ್ರಾಸ್‌ನ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇದು ಬೆಂಗಳೂರು, ಚಿಂತಾಮಣಿ, ಕೋಲಾರ, ಶಿಡ್ಲಘಟ್ಟ ಹೀಗೆ ನಾಲ್ಕು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರವಾಗಿದೆ. ಈ ಕ್ರಾಸ್ ಮೂಲಕ ಪ್ರತಿನಿತ್ಯ ಅನೇಕ ಬಸ್‌ಗಳು ಸಂಚರಿಸುತ್ತವೆ. ಹಾಗಾಗಿ ನೂರಾರು ಮಂದಿ ಪ್ರಯಾಣಿಕರು ಬಸ್‌ಗಾಗಿ ರಸ್ತೆಯಲ್ಲಿ ಕಾಯುವಂತಾಗಿದೆ. ಹಾಗಾಗಿ ಕೈವಾರ ಹಾಗೂ ಕೈವಾರ ಕ್ರಾಸ್‌ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಾನು ಪ್ರಭಾರಿಯಾಗಿ ಅಧಿಕಾರಿ ವಹಿಸಿಕೊಂಡು ಒಂದು ತಿಂಗಳಾಗಿದೆ. ಈ ಬಗ್ಗೆ ಮಾಹಿತಿ ಇಲ್ಲ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಸಂತೋಷ್, ಪ್ರಭಾರಿ ಮುಖ್ಯಾಧಿಕಾರಿ, ಕೈವಾರ ಪಟ್ಟಣ ಪಂಚಾಯಿತಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260801-16-95750039