
ತೋಟಗಾರಿಕೆ ಬೆಳೆಗಳಿಗೂ ಕುತ್ತು, ರೈತರಿಗೆ ಆತಂಕ
ಲಕ್ಷ್ಮೇಶ್ವರ: ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಮಳೆಯಾಶ್ರಿತ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ತೇವಾಂಶದ ಕೊರತೆ ಕಾರಣ ತೋಟಗಾರಿಕೆ ಬೆಳೆಗಳೂ ಒಣಗುತ್ತಿವೆ.
ತಾಲ್ಲೂಕಿನ ಮಾಡಳ್ಳಿ, ಯತ್ತಿನಹಳ್ಳಿ, ಯಳವತ್ತಿ, ರಾಮಗೇರಿ, ಲಕ್ಷ್ಮೇಶ್ವರ, ಗೊಜನೂರು, ಅಡರಕಟ್ಟಿ, ಬಟ್ಟೂರು, ಹುಲ್ಲೂರು ಭಾಗದಲ್ಲಿ ಹೆಚ್ಚಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತದೆ. ತೋಟಗಾರಿಕಾ ಬೆಳೆಗಳಾದ ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿಯನ್ನು ಬಿತ್ತಲಾಗಿದ್ದು, ತೇವಾಂಶ ಇಲ್ಲದ್ದರಿಂದ ಸಸಿ ಭೂಮಿ ಬಿಟ್ಟು ಮೇಲೆದ್ದಿಲ್ಲ. ಕಪ್ಪುಮಣ್ಣಿನ ಭೂಮಿಯಲ್ಲಿ ನಳನಳಿಸಬೇಕಿದ್ದ ಬೆಳೆಗಳು ಈ ಬಾರಿ ಕಾಣದಾಗಿವೆ.
ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ, ಮಾಡಳ್ಳಿ ಮತ್ತು ಯಳವತ್ತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಿತ್ತನೆ ಆಗಿರುವ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗುವ ಪರಿಸ್ಥಿತಿ ಎದುರಾಗಿದೆ. ‘ಕೆಂಪು ಬಂಗಾರ’ ಎಂದೇ ಕರೆಯಲಾಗುವ ಮೆಣಸಿನಕಾಯಿ ಬೆಳೆ ಕೈಕೊಡುವ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ.
ಹೆಚ್ಚಿನ ಖರ್ಚು ಬರುತ್ತದೆ ಎಂಬ ಕಾರಣಕ್ಕೆ ಕಳೆದ ವರ್ಷ ಮೆಣಸಿನಕಾಯಿ ಬೆಳೆಯುವುದನ್ನು ಬಹಳಷ್ಟು ರೈತರು ಕೈಬಿಟ್ಟಿದ್ದರು. ಆದರೆ, ಇಳುವರಿ ಕಡಿಮೆ ಬಂದಿದ್ದರಿಂದ ಬೆಳೆದಷ್ಟು ಫಸಲಿಗೆ ಉತ್ತಮ ದರ ಸಿಕ್ಕಿತ್ತು. ಹೀಗಾಗಿ, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದಾರೆ.
‘ಮಳೆ ಕೊರತೆ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಳು ಸರಿಯಾಗಿ ಹುಟ್ಟಿಲ್ಲ. ಸಾಲ ಮಾಡಿ ಬಿತ್ತನೆ ಮಾಡಿರುವ ರೈತರಿಗೆ ನಷ್ಟ ಉಂಟಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಯಳವತ್ತಿ ಗ್ರಾಮದ ರೈತ ಬಾಪೂಗೌಡ ಭರಮಗೌಡ್ರ ಆಗ್ರಹಿಸಿದರು.
‘ಇಳುವರಿ ಕುಂಠಿತ ಸಾಧ್ಯತೆ’
‘ಲಕ್ಷ್ಮೇಶ್ವರ ತಾಲ್ಲೂಕಿನ ಯಳವತ್ತಿ ಮತ್ತು ಮಾಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 500 ಎಕರೆಗೂ ಹೆಚ್ಚು ಭೂಮಿಯಲ್ಲಿ ಮೆಣಸಿನಕಾಯಿ ಮತ್ತು ಈರುಳ್ಳಿ ಬಿತ್ತನೆಯಾಗಿದೆ. ಮಳೆ ಬಾರದ ಕಾರಣ ಸರಿಯಾದ ರೀತಿಯಲ್ಲಿ ಬೆಳೆ ಬೆಳೆದಿಲ್ಲ. ಇದರಿಂದಾಗಿ ಇಳುವರಿ ಕುಂಠಿತ ಆಗಬಹುದು’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಪ್ರಶಾಂತ ಕುಲಕರ್ಣಿ ತಿಳಿಸಿದರು.
ತೋಟಗಾರಿಕೆ ಬೆಳೆಗಳು ಒಣಗುತ್ತಿದ್ದು, ಸೂಕ್ತ ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ನೀಡಿ ರೈತರ ನೆರವಿಗೆ ಧಾವಿಸಬೇಕು ಬಸಣ್ಣ ಹೊಳಲಾಪುರ, ರೈತ, ಬಟ್ಟೂರು
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260801-23-1776862106