
ಪಶ್ಚಿಮ ಘಟ್ಟ|‘ಆಫ್ ರೋಡಿಂಗ್’ ಕಂಟಕ!: ವನ್ಯಜೀವಿಗಳ ನೆಮ್ಮದಿ ಕಸಿದ ಕರ್ಕಶ ಸದ್ದು
ಸಕಲೇಶಪುರ: ಜೀವವೈವಿಧ್ಯದ ತವರು ಪಶ್ಚಿಮಘಟ್ಟದ ದಟ್ಟ ಅರಣ್ಯ, ಬೆಟ್ಟಗಳ ಸಾಲುಗಳಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಜೀಪುಗಳ ಆಫ್ ರೋಡ್ ರೈಡ್ ಜೋರಾಗಿದ್ದು, ಪರಿಸರ ಸೂಕ್ಷ್ಮ ವಲಯಕ್ಕೆ ಧಕ್ಕೆಯುಂಟಾಗುತ್ತಿದೆ.
ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಸಕಲೇಶಪುರದ ಒಡಲಿನಲ್ಲಿ ಬಿಸಿಲೆ, ಕಬ್ಬಿನಾಲೆ, ಮೂರುಕಣ್ಣು ಗುಡ್ಡ, ಕೆಂಪುಹೊಳೆ, ಕಾಡುಮನೆ, ಜೇನುಕಲ್ಲು ಬೆಟ್ಟ, ಕಾಗಿನಹರೆ, ಸೂಕ್ಷ್ಮ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಆಫ್ ರೋಡಿಂಗ್ ಹೆಸರಿನಲ್ಲಿ ನಡೆಯುತ್ತಿರುವ ಸಾಹಸ ಮೋಜು, ಮಸ್ತಿ ಇಲ್ಲಿನ ಪರಿಸರದ ಸಮತೋಲನಕ್ಕೆ ಕಂಟಕವಾಗಿ ಪರಿಣಮಿಸಿದೆ.
ಬೆಂಗಳೂರು, ಮೈಸೂರು, ಹಾಸನ ಹಾಗೂ ಇತರ ಕಡೆಗಳಿಂದ ವಾರಾಂತ್ಯದಲ್ಲಿ ದಾಂಗುಡಿ ಇಡುವ ಸಾಕಷ್ಟು ಸಂಖ್ಯೆಯ ಜೀಪುಗಳು ಹಳ್ಳಕೊಳ್ಳ, ಕಣಿವೆ, ಇಳಿಜಾರುಗಳಲ್ಲಿ ಭಾರಿ ಶಬ್ದ ಮಾಡುತ್ತ ಓಡಾಡುತ್ತವೆ. ಸೈಲೆನ್ಸರ್ ಮಾರ್ಪಾಡು ಮಾಡಿದ ಜೀಪುಗಳ ವಿಕಟ ಸದ್ದು ಮತ್ತು ಸೈರನ್ ಅರಣ್ಯದ ನೆಮ್ಮದಿ ಕದಡುತ್ತಿವೆ.
ಪ್ರವಾಸಕ್ಕೆ ಬರುವವರು ಎಸೆದುಹೋಗುವ ಪ್ಲಾಸ್ಟಿಕ್, ಮದ್ಯದ ಬಾಟಲಿ ಮತ್ತು ಆಹಾರದ ತ್ಯಾಜ್ಯವು ಅರಣ್ಯ ಪ್ರದೇಶವನ್ನು ಕಸದ ತೊಟ್ಟಿಯಾಗಿಸುತ್ತಿರುವುದು ಸ್ಥಳಿಯರ ಅಸಮಾಧಾನಕ್ಕೆ ಕಾರಣವಾ ಗುತ್ತಿದೆ. ಕಾಡಿನಲ್ಲಿ ಅನಿಯಂತ್ರಿತ ಜೀಪುಗಳ ಅಬ್ಬರದಿಂದಾಗಿ ಕಾಡಾನೆ ಮತ್ತು ಇತರ ವನ್ಯಜೀವಿಗಳು ಭಯದಿಂದ ನಾಡಿನತ್ತ ಮುಖ ಮಾಡುತ್ತಿವೆ.
ಪಶ್ಚಿಮಘಟ್ಟದ ಬೆಟ್ಟಗುಡ್ಡ, ಕಾಡುಗಳಲ್ಲಿ ಆಫ್ ರೋಡ್ ಮೋಜಿನ ಆಟ ಆಡುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಂತಹ ವಾಹನಗಳನ್ನು ಶಾಶ್ವತವಾಗಿ ಇಲಾಖೆ ವಶಕ್ಕೆ ಪಡೆಯಬೇಕು ಎನ್ನುತ್ತಾರೆ ಕಾಫಿ ಬೆಳೆಗಾರ ವಿನಯ್ ಬಿಳಿಸಾರೆ.
ಸಕಲೇಶಪುರದ ಪಶ್ಚಿಮಘಟ್ಟದ ಕಬ್ಬಿನಾಲೆ ಸೂಕ್ಷ್ಮ ರಕ್ಷಿತಾರಣ್ಯ ಪ್ರದೇಶದಲ್ಲಿ ಅರಣ್ಯ ಕಾಯ್ದೆ ಉಲ್ಲಂಘಿಸಿ ಜೀಪುಗಳಲ್ಲಿ ಆಫ್ ರೋಡ್ ಮಾಡುತ್ತಿದ್ದ ಏಳು ಜೀಪುಗಳನ್ನು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಈಚೆಗೆ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.
ಪರಿಸರ ಹೋರಾಟಗಾರರು ಸ್ಥಳೀಯರ ಬೇಡಿಕೆಗಳೇನು?
* ಸೂಕ್ಷ್ಮ ರಕ್ಷಿತಾರಣ್ಯ ವಲಯ ಹಾಗೂ ಇಳಿಜಾರು ಬೆಟ್ಟಗಳಲ್ಲಿ ಆಫ್ ರೋಡಿಂಗ್ ಚಟುವಟಿಕೆ ನಿಷೇಧಿಸಬೇಕು
* ಅರಣ್ಯ ಗಡಿಭಾಗಗಳಲ್ಲಿ ತನಿಖಾ ಠಾಣೆ ಬಿಗಿಗೊಳಿಸಿ ನೈಟ್ ಸಫಾರಿ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು
* ನಿಯಮ ಮೀರಿ ಆಫ್ ರೋಡಿಂಗ್ ಪ್ರಚಾರ ಮಾಡುವ ರೆಸಾರ್ಟ್ ಮತ್ತು ಹೋಂಸ್ಟೇಗಳ ಪರವಾನಗಿ ರದ್ದುಪಡಿಸಬೇಕು
* ಪರಿಸರಕ್ಕೆ ಹಾನಿ ಆಗದಂತೆ ಪ್ರವಾಸಿಗರಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಜಾಗೃತಿ ಮೂಡಿಸಬೇಕು