
ಮದಗ-ಮಾಸೂರು ಜಲಪಾತ, ಕೆರೆ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಸುರಕ್ಷತೆ ಕೊರತೆ
ರಟ್ಟೀಹಳ್ಳಿ: ತಗ್ಗು–ಗುಂಡಿಗಳಿಂದ ಕೂಡಿದ ರಸ್ತೆಗಳು, ಮದಗ-ಮಾಸೂರು ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಯಾವುದೇ ಸುರಕ್ಷತೆ ಇಲ್ಲ... ಹೀಗೆ ಹಲವು ಮೂಲ ಸೌಲಭ್ಯಗಳ ಕೊರತೆ ಪ್ರವಾಸಿಗರನ್ನು ಕಾಡುತ್ತಿದೆ.
ತಾಲ್ಲೂಕಿನಾದ್ಯಂತ ಹಾಗೂ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ತಾಲ್ಲೂಕಿನ ಮದಗ ಮಾಸೂರು ಕೆರೆ ಹಾಗೂ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು ನಿತ್ಯ ಆಗಮಿಸುತ್ತಿದ್ದಾರೆ. ಮಳೆಗಾಲದಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತದಂತೆ ಇಲ್ಲಿಯೂ ಕೂಡ ರುದ್ರರಮಣೀಯ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ. ಆದರೆ ಆಗಮಿಸುವ ಪ್ರವಾಸಿಗರಿಗೆ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ.
ತಗ್ಗು–ಗುಂಡಿಗಳಿಂದ ಕೂಡಿದ ಕಚ್ಚಾ ರಸ್ತೆಗಳು, ಯಾವುದೇ ಸುರಕ್ಷತೆ ಇಲ್ಲದ ಜಲಪಾತ ವೀಕ್ಷಣೆಯ ಸ್ಥಳ ಪ್ರವಾಸಿಗರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕೆರೆಗೆ ಹೋಗುವ ರಸ್ತೆ ಸಂಪೂರ್ಣ ಕಚ್ಚಾ ರಸ್ತೆಯಾಗಿದ್ದು, ಅಲ್ಲಲ್ಲಿ ಕೆಸರು ಮತ್ತು ಗುಂಡಿಗಳಿಂದ ಕೂಡಿದೆ. ಇದರಿಂದ ವಾಹನ ಸಂಚಾರ ಕಷ್ಟಕರವಾಗಿದೆ. ಜಲಪಾತ ವೀಕ್ಷಣೆ ಸ್ಥಳದಲ್ಲಿ ಯಾವುದೇ ಸುರಕ್ಷತಾ ತಡೆಗೋಡೆ, ಎಚ್ಚರಿಕೆ ಫಲಕಗಳಿಲ್ಲ. ಸ್ವಲ್ಪ ಮೈಮರೆತರೂ ಅಪಾಯ ತಪ್ಪಿದ್ದಲ್ಲ.
ಮಳೆಗಾಲದಲ್ಲಿ ನೂರಾರು ವಾಹನಗಳು ಮತ್ತು ಸಾವಿರಾರು ಜನರು ಆಗಮಿಸುತ್ತಾರೆ. ಇಲ್ಲಿ ಅನಾಹುತ ಸಂಭವಿಸುವ ಪೂರ್ವದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸುರಕ್ಷತೆ ಕ್ರಮಕ್ಕೆ ಆದ್ಯತೆ ನೀಡಬೇಕು ಎನ್ನುತ್ತಾರೆ ಸ್ಥಳೀಯರು.
‘ಜಲಪಾತ ವೀಕ್ಷಣೆಗೆ ಪ್ರತಿವರ್ಷ ಜೂನ್–ಡಿಸೆಂಬರ್ ತಿಂಗಳ ಅಂತ್ಯದವರೆಗೂ ರಾಜ್ಯ ಹಾಗೂ ಹೊರರಾಜ್ಯದಿಂದ ಅಸಖ್ಯಾಂತ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯಲು ಹಾಗೂ ಜಲಪಾತ ಮತ್ತು ಕೆರೆ ವೀಕ್ಷಣೆಗೆ ಆಗಮಿಸುತ್ತಾರೆ. ಆದರೆ, ಮೂಲ ಸೌಲಭ್ಯ, ಪ್ರವಾಸಿಗರಿಗೆ ಯಾವುದೇ ಸುರಕ್ಷತೆಯಿಲ್ಲ. ಮೂಲ ಸೌಲಭ್ಯ ಕಲ್ಪಿಸಬೇಕು’ ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಹೋರಾಟಗಾರ ಸುರೇಶ ಬಡಿಗೇರ.
₹49 ಲಕ್ಷ ಅನುದಾನ ನೀಡಲಾಗಿದೆ
ಐತಿಹಾಸಿಕ ಮದಗ ಮಾಸೂರು ಜಲಪಾತ ವೀಕ್ಷಣೆ ಸ್ಥಳದ ಸುತ್ತಮುತ್ತ ಅವಶ್ಯ ಅಭಿವೃದ‍್ಧಿ ಕಾಮಗಾರಿಗೆ ಸರ್ಕಾರದಿಂದ ₹49 ಲಕ್ಷ ಅನುದಾನ ನೀಡಲಾಗಿದೆ. ಶೀಘ್ರದಲ್ಲಿ ಕಾರ್ಯ ಪ್ರಾರಂಭಗೊಳ್ಳಲಿದೆ. ಜಲಪಾತ ವೀಕ್ಷಣೆ ಸ್ಥಳದಲ್ಲಿ ಪ್ರವಾಸಿಗರಿಗೆ ಸುರಕ್ಷತೆ ದೃಷ್ಟಿಯಿಂದ ತಡೆಗೋಡೆ ನಿರ್ಮಾಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ವ್ಯವಸ‍್ಥೆ ಮಾಡಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-22-699848243