
ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿಗಳಿಗೆ ನಡೆಯದ ಚುನಾವಣೆ: ಅಭಿವೃದ್ಧಿ ಕುಂಠಿತ
ತಾಂಬಾ: ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಹಲವು ವರ್ಷಗಳಿಂದ ಚುನಾವಣೆ ನಡೆಯದೇ ಸ್ಥಳೀಯ ಜನಪ್ರತಿನಿಧಿಗಳಿಲ್ಲದೇ ಇರುವುದರಿಂದ ಗ್ರಾಮೀಣಾಭಿವೃದ್ಧಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕಾದ ಗ್ರಾಮ ಪಂಚಾಯಿತಿಗಳು, ಜನಪ್ರತಿನಿಧಿಗಳ ಕೊರತೆಯಿಂದ ಬಿಕೋ ಎನ್ನುವಂತಾಗಿವೆ.
ಸ್ಥಳೀಯ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಸಂಬಂಧಪಟ್ಟ ಜಿಲ್ಲಾ ಪಂಚಾಯಿತ ಅಧಿಕಾರಿಗಳಿಗೆ ಮನವಿಗಳ ಮಹಾಪೂರವೇ ಹರಿದು ಬರುತ್ತಿವೆ.
ಗ್ರಾಮಗಳ ಸಮಗ್ರ ಅಭಿವೃದ್ಧಿ ನೋಡಬೇಕಾದ ಅಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ಬರುವುದು ಅಪರೂಪ. ಸರ್ಕಾರ ನಿಗದಿಪಡಿಸಿರುವ ಕಾರ್ಯಕ್ರಮಗಳು ಮತ್ತು ಮಹನೀಯರ ಜಯಂತಿಗಳಿಗೆ ತಪ್ಪದೇ ಹಾಜರಾಗುತ್ತಾರೆ.
ಸ್ಥಳೀಯ ಸಾರ್ವಜನಿಕರು ಅಭಿವೃದ್ಧಿ ಅಧಿಕಾರಿಗಳಿಗೆ ಪ್ರತಿ ದಿನ ಗ್ರಾಮ ಪಂಚಾಯಿತಿಗೆ ಏಕೆ ಬರುವುದಿಲ್ಲ ಎಂದರೆ ಜಿಲ್ಲಾ ಪಂಚಾಯಿತಿ ಸಿಇಒ ಸಭೆ ಇತ್ತು, ತಾಲ್ಲೂಕು ಪಂಚಾಯಿತಿ ಇಒ ಸಭೆ ಇತ್ತು, ಶಾಸಕರು ಪ್ರಗತಿ ಪರಿಶೀಲನೆ ಸಭೆ ಇತ್ತು ಎಂದು ಹೇಳುತ್ತಾ ಗ್ರಾಮ ಪಂಚಾಯಿತಿಗಳಿಗೆ ಸರಿಯಾಗಿ ಬರುವುದಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.
ಅಭಿವೃದ್ಧಿ ಅಧಿಕಾರಿಗಳು ಪ್ರತಿದಿನ ಗ್ರಾಮ ಪಂಚಾಯಿತಿಗೆ ಬರಬೇಕೆಂದು ಆಡಳಿತ ಅಧಿಕಾರಿಗಳಿಗೆ ಮನವಿ ಮಾಡಿದರೂ ಬರುವುದಿಲ್ಲ. ಗ್ರಾಮದಲ್ಲಿ ಸಣ್ಣಪುಟ್ಟ ಸಮಸ್ಯೆ ಇದ್ದರೆ ಹೇಗೆ ಸರಿಪಡಿಸುವುದು ಎಂದು ಹೆಸರು ಹೇಳದ ಅಭಿವೃದ್ಧಿ ಅಧಿಕಾರಿಯೊಬ್ಬರು ತಿಳಿಸಿದರು.
ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲ ಇದರಿಂದ ಸಣ್ಣಪುಟ್ಟ ಕೆಲಸಗಳಿಗೂ ಜನರು ಬಿಲ್ ಕಲೆಕ್ಟರ್ ಅಥವಾ ಕಂಪ್ಯೂಟರ್ ಆಪರೇಟರ್ ಗಳನ್ನು ಸಂಪರ್ಕಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಧಿಕಾರಿಗಳನ್ನು ಪ್ರಶ್ನೆ ಮಾಡುವವರು ಇಲ್ಲದ ಕಾರಣ ತಡವಾಗಿ ಬರುವುದು ಸಭೆಗಳ ಹೆಸರಿನಲ್ಲಿ ಗೈರಾಗುವುದು ಸಾಮಾನ್ಯವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-26-1000581505