ಚಿಂಚೋಳಿಯ ನಾಗರಾಳ ಜಲಾಶಯದಲ್ಲಿ ಪುತ್ರನ ಬಿಸಾಕಿ ಕೊಂದ ತಂದೆ!
ಚಿಂಚೋಳಿ (ಕಲಬುರಗಿ ಜಿಲ್ಲೆ): ತಂದೆಯೊಬ್ಬ ತನ್ನ ಕರುಳ ಕುಡಿಯನ್ನೇ ಕಿರು ಜಲಾಶಯಕ್ಕೆ ಎಸೆದು ಸಾಯಿಸಿದ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ. ದುರಂತ ನಡೆದ ಮೂರು ದಿನಗಳ ಬಳಿಕ ಗುರುವಾರ ಈ ಕೃತ್ಯ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಹಸರಗುಂಡಗಿ ಗ್ರಾಮದ ಕಲ್ಪನಾ ಹಾಗೂ ಸೋಮರಾವ್ ಹೂಗಾರ ದಂಪತಿಯ ಪುತ್ರ ಮಹೇಶ (2) ಮೃತ ಬಾಲಕ.
ಹಸರಗುಂಡಗಿಯ ಮಡಿವಾಳಪ್ಪ -ಕರುಣಾದೇವಿ ದಂಪತಿಗೆ ಕೇವಲ ಇಬ್ಬರು ಪುತ್ರಿಯರಿದ್ದು ಗಂಡು ಮಕ್ಕಳಿರಲಿಲ್ಲ.
ಪುತ್ರಿ ಕಲ್ಪನಾ ಅವರನ್ನು ದೋಟಿಕೊಳ ಗ್ರಾಮದ ಸೋಮರಾವ್ ಹೂಗಾರ ಅವರೊಂದಿಗೆ ಮದುವೆ ಮಾಡಲಾಗಿತ್ತು. ಗಂಡು ಮಕ್ಕಳಿಲ್ಲದ ಕಾರಣ ಸೋಮರಾವ್ ಅವರನ್ನು ಮನೆ ಅಳಿಯನಾಗಿ ಮಾಡಿಕೊಂಡಿದ್ದರು. ಆದರೆ ಪತಿಯ ಕಿರುಕುಳದಿಂದ ಬೇಸತ್ತಿದ್ದ ಕಲ್ಪನಾ ತವರು ಮನೆಯಲ್ಲಿ ತಾಯಿ ಜತೆ ಇದ್ದಳು.
ಮದುವೆಯಾದ ಮೇಲೆ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಸಮಸ್ಯೆಯಿಂದ ಸೋಮರಾವ್ ಪತ್ನಿಗೆ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದ. ಇದರಿಂದ ದಾಂಪತ್ಯದಲ್ಲಿ ವಿರಸ ಉಂಟಾಗಿತ್ತು. ಈ ನಡುವೆ ಸ್ವಗ್ರಾಮ ದೋಟಿಕೊಳದಲ್ಲಿ ನೆಲೆಸಿದ್ದ ಸೋಮರಾವ್ ಆಗಸ್ಟ್ 23ರಂದು ಹಸರಗುಂಡಗಿಯ ಪತ್ನಿಯ ಮನೆಗೆ ಬಂದಿದ್ದ.
ಮಗನ ಜತೆ ಕೆಲ ಹೊತ್ತು ಆಟವಾಡಿ, ಹೇಳದೇ ಕೇಳದೇ ಮಗನನ್ನು ತನ್ನ ಜತೆಗೆ ಕರೆದೊಯ್ದು ಹೋಗಿ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಲ್ಲಿ ಎಸೆದಿದ್ದಾನೆ.
ಈ ಕುರಿತು ಮಗುವಿನ ತಾಯಿ ಕಲ್ಪನಾ ಚಿಂಚೋಳಿ ಠಾಣೆಗೆ ಮೊರೆ ಹೋದಾಗ ಪೊಲೀಸ್, ಅಗ್ನಿ ಶಾಮಕ ಅಧಿಕಾರಿಗಳು ಶೋಧ ನಡೆಸಿದಾಗ ಜಲಾಶಯದಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಸದ್ಯ ಮಗುವಿನ ಶವ ಜಲಾಶಯದಿಂದ ಹೊರ ತೆಗೆದು ಚಿಂಚೋಳಿ ತಾಲ್ಲೂಕು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಡಿವೈಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಕಪಿಲದೇವ, ಪಿಎಸ್ಐ ಗಂಗಮ್ಮ ಜಿನಿಕೇರಿ ಭೇಟಿ ನೀಡಿ ಪರಿಶೀಲಿಸಿದರು.
ಆರೋಪಿ ಸೋಮರಾವ್ ಹೂಗಾರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ