ಬಂಗಾರಪೇಟೆ: ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಕೊರತೆ, ಅಡುಗೆ ಸಿಬ್ಬಂದಿಯೇ ವಾರ್ಡನ್‌

ಬಂಗಾರಪೇಟೆ: ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಕೊರತೆ, ಅಡುಗೆ ಸಿಬ್ಬಂದಿಯೇ ವಾರ್ಡನ್‌

ಬಂಗಾರಪೇಟೆ: ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಕೊರತೆ, ಅಡುಗೆ ಸಿಬ್ಬಂದಿಯೇ ವಾರ್ಡನ್‌

ಬಂಗಾರಪೇಟೆ: ಹಿಂದುಳಿದ ವರ್ಗಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡ ವಿದ್ಯಾರ್ಥಿಗಳಿಗೆ ಸುರಕ್ಷಿತ ಆಸರೆಯಾಗಬೇಕಿದ್ದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಸಿಬ್ಬಂದಿ ಕೊರತೆಯಿಂದ ಸೊರಗುತ್ತಿವೆ.

ಬಂಗಾರಪೇಟೆ ಹಾಗೂ ಕೆಜಿಎಫ್ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನಿಲಯಗಳಲ್ಲಿ ಶೇ 87ಕ್ಕಿಂತ ಹೆಚ್ಚು ಕಾಯಂ ಹುದ್ದೆಗಳು ಖಾಲಿಯಿದ್ದು, ಇಡೀ ವ್ಯವಸ್ಥೆ ಹೊರಗುತ್ತಿಗೆ ನೌಕರರ ಹೆಗಲ ಮೇಲೆ ಸಾಗುತ್ತಿದೆ.

ಅವಳಿ ತಾಲ್ಲೂಕು ವ್ಯಾಪ್ತಿಯಲ್ಲಿ 17 ವಿವಿಧ ನಿಲಯ ಹಾಗೂ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 1,173 ಶಾಲಾ-ಕಾಲೇಜು ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಮಾಹಿತಿಯ ಪ್ರಕಾರ ಮಂಜೂರಾದ ಒಟ್ಟು 118 ಹುದ್ದೆಗಳಲ್ಲಿ 103 ಹುದ್ದೆಗಳು ಖಾಲಿ ಇವೆ. ಕೇವಲ 15 ಕಾಯಂ ನೌಕರರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಮಟ್ಟದ ಉನ್ನತ ಆಡಳಿತಾಧಿಕಾರಿ ಹುದ್ದೆಗಳಿಂದ ಹಿಡಿದು ಭದ್ರತಾ ಸಿಬ್ಬಂದಿಯವರೆಗೆ ಎಲ್ಲವೂ ಖಾಲಿ ಇವೆ.

ಖಾಲಿ ಇರುವ ಹುದ್ದೆಗಳ ಜಾಗದಲ್ಲಿ ಪ್ರಸ್ತುತ 76 ಹೊರಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. 17 ವಿದ್ಯಾರ್ಥಿ ನಿಲಯಗಳಿಗೆ ಮೂವರು ಕಾಯಂ ವಾರ್ಡನ್‌ಗಳಿದ್ದಾರೆ. 14 ನಿಲಯಗಳಲ್ಲಿ ಅಡುಗೆ ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರೇ ನಿಲಯಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಹಾಜರಾತಿ, ಪಡಿತರ ದಾಸ್ತಾನು ನಿರ್ವಹಣೆ ಹಾಗೂ ಶಿಸ್ತಿನ ಉಸ್ತುವಾರಿಯನ್ನು ಸಿಬ್ಬಂದಿಯೇ ನೋಡಿಕೊಳ್ಳಬೇಕಾಗಿದೆ.

17 ನಿಲಯಗಳಿಗೆ ಕೇವಲ ಇಬ್ಬರು ಕಾಯಂ ಕಾವಲುಗಾರರಿದ್ದಾರೆ. ಬಾಲಕಿಯರ ನಿಲಯಗಳಲ್ಲೂ ಭದ್ರತಾ ಕೊರತೆ ತೀವ್ರವಾಗಿದೆ. ಹೊರಗುತ್ತಿಗೆ ಸಿಬ್ಬಂದಿಗೆ ಆಡಳಿತಾತ್ಮಕ ಹೊಣೆಗಾರಿಕೆ ಇಲ್ಲದಿರುವುದರಿಂದ, ಆಹಾರದ ಗುಣಮಟ್ಟ ಹಾಗೂ ನಿಲಯದ ನೈರ್ಮಲ್ಯ ವಿಚಾರದಲ್ಲಿ ಅನೇಕ ದೂರುಗಳು ಕೇಳಿಬರುತ್ತಿವೆ. ಹಾಗಾಗಿ ಸರ್ಕಾರ ತಕ್ಷಣವೇ ಎಚ್ಚೆತ್ತು ಪ್ರಭಾರ ಹಾಗೂ ಹೊರಗುತ್ತಿಗೆ ವ್ಯವಸ್ಥೆಗೆ ಮುಕ್ತಿ ನೀಡಿ, ಕಾಯಂ ವಾರ್ಡನ್‌ ಮತ್ತು ಅಗತ್ಯ ಸಿಬ್ಬಂದಿಯನ್ನು ಭರ್ತಿ ಮಾಡಬೇಕೆಂಬುದು ಪೋಷಕರ ಒತ್ತಾಯವಾಗಿದೆ.

ಇಡೀ ವಸತಿ ನಿಲಯದ ಜವಾಬ್ದಾರಿ ನಮ್ಮ ಮೇಲಿದೆ:ಕಡಿಮೆ ವೇತನಕ್ಕೆ ಕೆಲಸ ಮಾಡುವ ನಮ್ಮ ಮೇಲೆಯೇ ಇಡೀ ವಸತಿ ನಿಲಯದ ಜವಾಬ್ದಾರಿ ಇದೆ. ಅಡುಗೆ ಮಾಡುವುದು, ನೈರ್ಮಲ್ಯ ಕಾಪಾಡುವುದು ಮತ್ತು ವಿದ್ಯಾರ್ಥಿಗಳ ದಾಖಲೆ ನಿರ್ವಹಣೆ ಹೀಗೆ ಎಲ್ಲಾ ಕೆಲಸವನ್ನು ನಾವೇ ಮಾಡಬೇಕು. ತಪ್ಪು ನಡೆದರೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡುತ್ತಾರೆ. ನಮಗೂ ಯಾವುದೇ ಭದ್ರತೆ ಇಲ್ಲ ಎಂದು ಹೆಸರು ಹೇಳಲಿಚ್ಛಿಸದ ಹೊರಗುತ್ತಿಗೆ ನೌಕರರೊಬ್ಬರು ತಿಳಿಸಿದ್ದಾರೆ.

ಬಂಗಾರಪೇಟೆ ಹಾಗೂ ಕೆಜಿಎಫ್‌ವಸತಿ ನಿಲಯಗಳ ಸಿಬ್ಬಂದಿ ಕೊರತೆ ವರದಿಯನ್ನು ಸರ್ಕಾರಕ್ಕೆಸಲ್ಲಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆಹಾರದ ಗುಣಮಟ್ಟಕ್ಕೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಇಲಾಖೆ ಮೇಲಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಹುದ್ದೆಗಳ ನೇಮಕಾತಿಯಾಗುವ ಭರವಸೆಯಿದೆ.

ಮೈಲಾರಪ್ಪ, ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ಕೋಲಾರ

ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ನಿಲಯದಲ್ಲಿ ಉಳಿದಿದ್ದೇವೆ. ಇಲ್ಲಿ ಸೂಕ್ತ ಶೈಕ್ಷಣಿಕ ವಾತಾವರಣವೇ ಇಲ್ಲ. ಕಾಯಂ ವಾರ್ಡನ್ ಇಲ್ಲದಿರುವುದರಿಂದ ಶಿಸ್ತಿನ ವಾತಾವರಣ ಇಲ್ಲ. ಸಮಸ್ಯೆ ಹೇಳಿಕೊಳ್ಳಲು ಸ್ಥಳದಲ್ಲಿ ಅಧಿಕಾರಿಗಳೇ ಇಲ್ಲ.

–ಹೆಸರು ಹೇಳಲಿಚ್ಛಿಸದ ದ್ವಿತೀಯ ಪಿಯು ವಿದ್ಯಾರ್ಥಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-18-1932074228

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ