
ಮುತ್ತಿನಕೊಪ್ಪ: ಸುಗಮ ಸಂಚಾರಕ್ಕೂ ಸಂಚಕಾರ ತಂದ ಕಾಮಗಾರಿ
ಮುತ್ತಿನಕೊಪ್ಪ (ನರಸಿಂಹರಾಜಪುರ): ಮಳೆಗಾಲದಲ್ಲೇ ರಸ್ತೆ ಕಾಮಗಾರಿ ಆರಂಭಿಸಿರುವ ಪರಿಣಾಮ ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟಿದ್ದು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಸಂಚಾರ ದುಸ್ತರವಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ ₹5 ಕೋಟಿ ವೆಚ್ಚದ ಪ್ಯಾಕೇಜ್ ಕಾಮಗಾರಿಯಲ್ಲಿ ಸಾತ್ಕೋಳಿ, ಹೊಸಕೊಪ್ಪ, ಹಿರೇಗದ್ದೆ ಸೇರಿದಂತೆ ಹಲವು ಗ್ರಾಮಗಳನ್ನು ಮುತ್ತಿನಕೊಪ್ಪಕ್ಕೆ ಸಂಪರ್ಕಿಸುವ ರಸ್ತೆಯ 2 ಕಿ.ಮೀ ವ್ಯಾಪ್ತಿಯಲ್ಲಿ ಮೋರಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯ ಭಾಗವಾಗಿ 7ರಿಂದ 8 ಕಡೆ ರಸ್ತೆ ಅಗೆದು ಪೈಪ್ ಅಳವಡಿಸಿರುವುದರಿಂದ ಮಳೆ ನೀರು ನಿಂತು ರಸ್ತೆ ಕೆಸರುಮಯವಾಗಿದೆ.
ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಈ ರಸ್ತೆಯನ್ನೇ ಅವಲಂಬಿಸಿ ತಾಲ್ಲೂಕು ಕೇಂದ್ರ, ಆಸ್ಪತ್ರೆ ಹಾಗೂ ಇತರೆ ಸ್ಥಳಗಳಿಗೆ ಸಂಚರಿಸುತ್ತಿವೆ. ಶಾಲೆ–ಕಾಲೇಜು ವಿದ್ಯಾರ್ಥಿಗಳೂ ಪ್ರತಿನಿತ್ಯ ಇದೇ ರಸ್ತೆಯಲ್ಲಿ ಓಡಾಡಬೇಕಿದ್ದು, ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿರುವುದರಿಂದ ದ್ವಿಚಕ್ರ ವಾಹನ, ಕಾರು ಹಾಗೂ ಆಟೊಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಪಾದಚಾರಿಗಳಿಗೂ ರಸ್ತೆಯಲ್ಲಿ ನಡೆಯುವುದು ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮಸ್ಥ ಮೇಘರ್ಷ ಮಾತನಾಡಿ, ಬೇಸಿಗೆಯಲ್ಲೇ ಟೆಂಡರ್ ಆಗಿದ್ದರೂ ಕಾಮಗಾರಿಯನ್ನು ಮಳೆಗಾಲದಲ್ಲಿ ಆರಂಭಿಸಿರುವುದರಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಹಲವು ಬೈಕ್ ಸವಾರರು ಜಾರಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯ ಮೇಲಿನ ಕೆಸರನ್ನು ಕೂಡಲೇ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮಸ್ಥ ಬಿ.ಟಿ. ಯತಿರಾಜ್ ಮಾತನಾಡಿ, ರಸ್ತೆಯುದ್ದಕ್ಕೂ ಕೆಸರು ತುಂಬಿರುವುದರಿಂದ ವಾಹನ ಸಂಚಾರ ಅಪಾಯಕಾರಿಯಾಗಿದೆ. ಈ ಭಾಗದಲ್ಲಿ ಕಾಡಾನೆ ಹಾಗೂ ಕಾಡುಪ್ರಾಣಿಗಳ ಹಾವಳಿಯೂ ಇರುವುದರಿಂದ ರಾತ್ರಿ ವೇಳೆ ಓಡಾಟ ಮತ್ತಷ್ಟು ಅಪಾಯಕಾರಿಯಾಗಿದೆ. ಕೆಸರು ತುಂಬಿರುವ ಕಾರಣ ಆಟೊ ಚಾಲಕರು ಗ್ರಾಮಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ತಾತ್ಕಾಲಿಕವಾಗಿ ಜಲ್ಲಿ ಹಾಕಿಸಿದರೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆಯ ಎಂಜಿನಿಯರ್ ಗೌತಮ್ ಪ್ರತಿಕ್ರಿಯಿಸಿ, ಸಾತ್ಕೋಳಿ, ಚಿಬ್ಬಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ₹5 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಯ ಭಾಗವಾಗಿ ಮೋರಿ ನಿರ್ಮಾಣ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಉಂಟಾಗಿರುವ ಕೆಸರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.