
ದೇವರಹಿಪ್ಪರಗಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ: ಬೇಸತ್ತ ಜನ
ದೇವರಹಿಪ್ಪರಗಿ: ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಕ್ಕಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಭಯದಿಂದಲೇ ನಿತ್ಯ ನಡೆದಾಡುವಂತಾಗಿದೆ.
ಪಟ್ಟಣದ ಇಂಡಿ ರಸ್ತೆಯಲ್ಲಿನ ಕಲ್ಮೇಶ್ವರ ನಗರ, ಹಳೇ ಇಂಗಳಗಿ ರಸ್ತೆಯಲ್ಲಿನ ಬಡಾವಣೆಗಳು, ಕಮತಗಿ ದವಾಖಾನೆಯ ಹಿಂಭಾಗ ಸಹಿತ ಹಲವು ಪ್ರದೇಶಗಳು ಬೀದಿ ನಾಯಿಗಳಿಂದ ತುಂಬಿಹೋಗಿದ್ದು, ರಾತ್ರಿಯಾಗುತ್ತಿದ್ದಂತೆಯೇ ಮಕ್ಕಳು ಹಾಗೂ ಒಬ್ಬಂಟಿಯಾಗಿ ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ. ಹಿರಿಯರು ಸಹ ನಸುಕಿನ ವಾಯುವಿಹಾರಕ್ಕೂ ತೆರಳಲು ಅಂಜಿ ಹಿಂಜರಿಯುವಂತಾಗಿದೆ.
ರಾತ್ರಿಯಾಗುತ್ತಿದ್ದಂತೆಯೇ ಒಂದೆಡೆ ಸೇರುವ ನಾಯಿಗಳು ಗುಂಪಾಗಿ ರಸ್ತೆಯಲ್ಲಿ ರಾಜಾರೋಷವಾಗಿ ಕುಳಿತುಕೊಂಡು ಯಾರಾದರು ಬರುವುದೇ ತಡ ಒಮ್ಮೇಲೆ ಬೋಗಳಲು ಆರಂಭಿಸಿ, ಬೆನ್ನು ಹತ್ತುತ್ತವೆ. ಮೂರ್ನಾಕು ಜನರಿದ್ದರೇ ಹೆದರಿಸಬಹುದು. ಆದರೆ, ರಾತ್ರಿ ಬೇರೆ ಪ್ರದೇಶಗಳಿಂದ ಒಬ್ಬಂಟಿಯಾಗಿ ಬರುವವರ ಪಾಡು ಹೇಳತೀರದು. ಅದಕ್ಕಾಗಿ ಕೆಲವರು ತಮ್ಮ ಮನೆಗೆ ಮೊಬೈಲ್ ಮೂಲಕ ಸಂಪರ್ಕಿಸಿ ಯಾರಾದರೊಬ್ಬರನ್ನು ಕರೆಸಿಕೊಳ್ಳುವ ಪ್ರಸಂಗ ಈಗ ಎದುರಾಗುತ್ತಿದೆ.
ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ವೈದ್ಯ ಆರ್.ಆರ್.ನಾಯಿಕ್, ನಾಯಿ ಕಡಿತಕ್ಕೆ ಒಳಗಾದ ಹಿರಿಯ ಸಾರ್ವಜನಿಕರಲ್ಲಿ ನಾನು ಒಬ್ಬ. ಕಳೆದ ದಿನಗಳ ಹಿಂದೆ ನಾವು ದಂಪತಿ ವಾಯುವಿಹಾರ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಇಂಡಿ ರಸ್ತೆಯಲ್ಲಿ ನಾಯಿಯೊಂದು ಏಕಾಏಕಿ ನನ್ನ ಮೇಲೆ ದಾಳಿ ಮಾಡಿ ಕಚ್ಚಿತು. ನಂತರ ಕಚ್ಚಿದ ನಾಯಿ ಸಾಕಿದ್ದೊ ಅಥವಾ ಬೀಡಾಡಿ ಎನ್ನುವುದು ತಿಳಿಯದೇ ನಾನು ಚಿಕಿತ್ಸೆಗಾಗಿ ಸುಮಾರು ₹30 ಸಾವಿರ ಹಣ ತೆರಬೇಕಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.
‘ಕಳೆದ ವರ್ಷವಷ್ಟೇ ಹುಚ್ಚುನಾಯಿ ಕಡಿತದಿಂದ ಪಟ್ಟಣದ ವಿದ್ಯಾರ್ಥಿಯೊಬ್ಬ ಮೃತ ಪಟ್ಟ ಘಟನೆ ಜರುಗಿದ ಹಿನ್ನೆಲೆಯಲ್ಲಿ ನಾನು ಅತೀ ಎಚ್ಚರಿಕೆ ವಹಿಸಿ ಚಿಕಿತ್ಸೆ ಪಡೆಯುವಂತಾಯಿತು’ ಎಂದು ತಮಗೆ ನಾಯಿ ಕಡಿತದಿಂದ ಆದ ಅನುಭವ ಬಿಚ್ಚಿಟ್ಟರು.
‘ಕಳೆದ ವರ್ಷ ಪಂಚಾಯಿತಿಯಿಂದ ಇವುಗಳನ್ನು ಹಿಡಿದು ಸಾಗಣೆ ಮಾಡಲಾಗಿತ್ತು. ನಂತರ ಇವುಗಳಿಗೆ ಚುಚ್ಚುಮದ್ದು ನೀಡಿ ಮರಳಿ ಇಲ್ಲಿಯೇ ಬಿಟ್ಟಿದ್ದು, ಈಗ ಅವುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ' ಎನ್ನುತ್ತಾರೆ ಇಂಡಿ ರಸ್ತೆಯ ನಿವಾಸಿ ಉಮೇಶ ಹಳಪಾಣಿ.
ನಾಯಿಗಳು ಈಗೀಗ ಮಕ್ಕಳ ಮೇಲೂ ದಾಳಿ ಮಾಡುತ್ತಿದ್ದು, ಕಳೆದ ಎರಡು ದಿನಗಳ ಹಿಂದೆ 11 ನೇ ವಾರ್ಡಿನಭವಾನಿ ಬಟ್ಟೆ ಅಂಗಡಿ ಹತ್ತಿರ ಆಟವಾಡುತ್ತಿದ್ದ ಕಿಶೋರ ಈರಣ್ಣವರ ಎಂಬ ನಾಲ್ಕು ವರ್ಷದ ಮಗುವಿನ ಮೇಲೆ ನಾಯಿ ಎರಗಿ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿವೆ. ಅದೃಷ್ಟಾವಶಾತ್ ಅದೇ ಸಂದರ್ಭದಲ್ಲಿ ಬಂದ ಮಹಿಳೆಯಿಂದ ಮಗು ಪ್ರಾಣಾಪಾಯದಿಂದಪಾರಾಗಿದ್ದು, ಈಗ ಚಿಕಿತ್ಸೆ ಪಡೆಯುತ್ತಿದ್ದಾನೆ.
‘ಸಾಕು ನಾಯಿಗಳಾಗಿದ್ದಲ್ಲಿ ಅವುಗಳು ಇತರರ ಮೇಲೆ ಅನಗತ್ಯ ಎರಗದಂತೆ ಮಾಲೀಕರೇ ಎಚ್ಚರ ವಹಿಸಬೇಕು. ಒಂದುವೇಳೆ ಬೀದಿ ನಾಯಿಗಳಾಗಿದ್ದರೇ ಪಟ್ಟಣ ಪಂಚಾಯಿತಿ ಅವುಗಳ ಕುರಿತು ಕ್ರಮವಹಿಸಿ ಅವುಗಳನು ಬೇರೆಡೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟಣದ ಕಪಿಲ್ ಪಟೇಲ, ಮಹೇಶ ಅಳ್ಳಗಿ, ಈರಣ್ಣ ಈರಣ್ಣವರ, ರಾಘವೇಂದ್ರ ಗಂಜ್ಯಾಳ ಆಗ್ರಹಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-26-28390835