
‘ಬಿಡದಿ ಟೌನ್‌ಶಿಪ್’ ಸಮರಕ್ಕೆ ಮತ್ತೊಂದು ತಿರುವು
ರಾಮನಗರ: ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಣ ರಾಜಕೀಯ ಸಮರ ಮತ್ತೊಂದು ತಿರುವಿಗೆ ಬಂದು ನಿಂತಿದೆ. ಭಾನುವಾರದಿಂದ ಮೂರು ದಿನಗಳ ಪಾದಯಾತ್ರೆಗೆ ಜೆಡಿಎಸ್ ಅಣಿಯಾಗಿದ್ದರೆ, ಮತ್ತೊಂದೆಡೆ ಟೌನ್‌ಶಿಪ್ ಕುರಿತು ವ್ಯಕ್ತವಾಗಿರುವ ವಿರೋಧ ಪರಿಶೀಲಿಸಿ ವರದಿ ನೀಡಲು ನ್ಯಾಯಮೂರ್ತಿ ನೇತೃತ್ವದ ಸಮಿತಿಯನ್ನು ಮುಖ್ಯಮಂತ್ರಿ ರಚಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ, ಟೌನ್‌ಶಿಪ್‌ಗೆ ಸಂಬಂಧಿಸಿದ ಪ್ರಕ್ರಿಯೆಗಳು ಚುರುಕುಗೊಳ್ಳುತ್ತಿವೆ. ಪರ್ಯಾಯವಾಗಿ ಯೋಜನೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದ ಕಾವು ಹೆಚ್ಚಾಗುತ್ತಲೇ ಇದೆ. ರೈತರ ಹೋರಾಟಕ್ಕೆ ಆರಂಭದಿಂದಲೂ ಸಿಕ್ಕಿರುವ ಜೆಡಿಎಸ್ ಬೆಂಬಲ ಸ್ಥಳೀಯ ಪಾದಯಾತ್ರೆ ಬೈರಮಂಗಲ ಮೀರಿ ಬೆಂಗಳೂರಿಗೆ ವಿಸ್ತರಿಸಿದೆ.
ಎರಡು ದಶಕದ ಹಿಂದೆ ಜೆಡಿಎಸ್–ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೂಪುಗೊಂಡ ಯೋಜನೆ ವಿವಿಧ ಹಂತಕ್ಕೆ ಬಂದು ಅಮೂರ್ತವಾಗಿತ್ತು. ನನೆಗುದಿಗೆ ಬಿದ್ದಿದ ಯೋಜನೆ ಶಿವಕುಮಾರ್ ಅವರು ಮೂರ್ತ ರೂಪ ನೀಡಿದರು. ಅಭಿವೃದ್ಧಿಗೆ ಪುಷ್ಟಿ ನೀಡಲು ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಾಡಿ ಬೆಂಗಳೂರು ವಿಸ್ತರಣೆಗೆ ಜಿಲ್ಲೆಯನ್ನು ಅಣಿಗೊಳಿಸಿದರು.
ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅದಾಗಲೇ ಗುರುತಿಸಿದ್ದ ಟೌನ್‌ಶಿಪ್ ಯೋಜನಾ ಪ್ರದೇಶದಲ್ಲೇ ದೇಶದ ಮೊದಲ ಎ.ಐ ಸಿಟಿ ನಿರ್ಮಾಣದ ಕನಸನ್ನು ಬಿತ್ತಿದರು. ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳು ತಲೆ ಎತ್ತುವುದು ಅನ್ನದಾತನ ಭೂಮಿ ಮೇಲೆಯೇ. ಟೌನ್‌ಶಿಪ್ ವಿರುದ್ಧದ ರೈತರ ವಿರೋಧ ಸ್ವಾಭಾವಿಕವೇ ಆಗಿದ್ದರೂ ರಾಜಕೀಯ ಬೆಂಬಲವು ಅದರ ದಿಕ್ಕು ಬದಲಿಸಿರುವುದನ್ನು ಅಲ್ಲಗಳೆಯಲಾಗದು.
ಎರಡು ವರ್ಷದ ಅವಧಿಗೆ ಸಿ.ಎಂ ಆಗಿರುವ ಶಿವಕುಮಾರ್ ಅವರಿಗೆ ಟೌನ್‌ಶಿಪ್ ಪ್ರತಿಷ್ಠೆಯ ಪಣವಾಗಿದ್ದರೆ, ತನ್ನ ಭದ್ರಕೋಟೆಯಲ್ಲೇ ಶಾಸಕ ಸ್ಥಾನದಲ್ಲಿ ಶೂನ್ಯಕ್ಕಿಳಿದಿರುವ ಜೆಡಿಎಸ್‌ಗೆ ಯೋಜನೆ ವಿಷಯವು ರಾಜಕೀಯ ಅಸ್ತಿತ್ವದ ವಿಷಯವೂ ಆಗಿದೆ. ರಾಮನಗರ ತಾಲ್ಲೂಕಿನಲ್ಲಿರುವ ಟೌನ್‌ಶಿಪ್ ಯೋಜನಾ ಪ್ರದೇಶವೂ ಮಾಗಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.
ಜೆಡಿಎಸ್ ಭದ್ರಕೋಟೆಯ ಕಟ್ಟಾಳು ಆಗಿದ್ದ ಎಚ್.ಸಿ. ಬಾಲಕೃಷ್ಣ ಕಳೆದೆರಡು ಚುನಾವಣೆಗಳಿಂದ ‘ಕೈ’ ಪಾಳಯದ ಕಟ್ಟಾಳು ಆಗಿದ್ದಾರೆ. ಕಾಂಗ್ರೆಸ್‌ನಿಂದ ಮೊದಲ ಗೆಲುವು ಸಾಧಿಸಿ ಶಿವಕುಮಾರ್ ಪಾಳಯದಲ್ಲಿ ಗುರುತಿಸಿಕೊಂಡ ಅವರಿಗೆ, ಸಚಿವ ಸ್ಥಾನವೂ ಒದಗಿ ಬಂದಿದೆ. ಇದರ ಹಿಂದೆ ಬಾಲಕೃಷ್ಣ ಹಿರಿತನದ ಜೊತೆಗೆ ಟೌನ್‌ಶಿಪ್ ಅನುಷ್ಠಾನಕ್ಕೆ ಮತ್ತಷ್ಟು ಬೂಸ್ಟ್ ನೀಡಬೇಕೆಂಬ ಸಿ.ಎಂ ದೂರದೃಷ್ಟಿಯೂ ಇದೆ.
‘ರೈತರ ಪರ– ವಿರೋಧವಿರುವ ಟೌನ್‌ಶಿಪ್ ವಿಷಯವು ಜೆಡಿಎಸ್‌ಗೆ ಮತ್ತೆ ತನ್ನ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಒದಗಿ ಬಂದಿರುವ ಅವಕಾಶ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಭಿವೃದ್ಧಿ ಯೋಜನೆಗಳಲ್ಲಿ ಭೂಮಿ ಕಳೆದುಕೊಳ್ಳುವವರ ಪರವಾಗಿಯೇ ನಾಗರಿಕರ ಅನುಕಂಪ ಸಹಜವಾಗಿ ವ್ಯಕ್ತವಾಗುತ್ತದೆ. ಭೂ ರಹಿತರು ಹಾಗೂ ಕಾರ್ಮಿಕರು ಯೋಜನೆಗಳ ಮೊದಲ ಬಲಿಪಶು. ಇದನ್ನೇ ಬಳಸಿಕೊಂಡು ರೈತರ ವಿರೋಧದ ದನಿಗೆ ಮತ್ತಷ್ಟು ಬಲ ತುಂಬಿ, ತನ್ನ ರಾಜಕೀಯ ಅಸ್ತಿತ್ವ ಕಂಡುಕೊಳ್ಳಲು ಜೆಡಿಎಸ್ ಹವಣಿಸುತ್ತಿದೆ’ ಎನ್ನುತ್ತಾರೆ ತಾಲ್ಲೂಕಿನ ಹಿರಿಯ ರಾಜಕಾರಣಿಯೊಬ್ಬರು.
ಹೊಸ ನಾಯಕತ್ವಕ್ಕೆ ವೇದಿಕೆ
‘ಜೆಡಿಎಸ್ ಕುಟುಂಬದಲ್ಲೀಗ ಹೊಸ ರಾಜ್ಯ ನಾಯಕರ ಉದಯಕ್ಕೆ ವೇದಿಕೆ ಸಿದ್ದವಾಗುತ್ತಿದೆ. ರಾಜಕೀಯ ಸಹವಾಸವೇ ಬೇಡವೆಂದು ಸಿನಿಮಾ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುತ್ತಿದ್ದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಬದಲಾದ ಸ್ಥಿತಿಯಲ್ಲಿ ರಾಜಕೀಯಕ್ಕೆ ತರಲಾಗಿದೆ. ಸತತ ಮೂರು ಸೋಲುಂಡು ಮಾಗುತ್ತಿರುವ ಅವರಿಗೆ ಪಕ್ಷದ ನಾಯಕತ್ವ ನೀಡಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಬಿಡದಿ ಟೌನ್‌ಶಿಪ್ ಹೋರಾಟದ ವಿಷಯವು ಅವರಿಗೆ ಪಬ್ಲಿಕ್ ಇಮೇಜ್ ನೀಡುವ ಜೊತೆಗೆ ರೈತರ ಕುರಿತು ಪಕ್ಷಕ್ಕಿರುವ ಬದ್ಧತೆ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಅದಕ್ಕಾಗಿ ಪಾದಯಾತ್ರೆಯ ನೇತೃತ್ವವನ್ನು ಅವರಿಗೆ ವಹಿಸಲಾಗಿದೆ. ಮುಂದೆ ಜಿಲ್ಲೆಯಲ್ಲಿ ಅವರಿಗೆ ನೆಲೆ ಕಲ್ಪಿಸಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ’ ಎಂದು ಹಿರಿಯ ರಾಜಕಾರಣಿಯೊಬ್ಬರು ವಿಶ್ಲೇಷಿಸಿದರು.
ರಾರಾಜಿಸಿದ ಪರ–ವಿರೋಧದ ಫ್ಲೆಕ್ಸ್
ಒಂದೆಡೆ ಜೆಡಿಎಸ್ ಪಾದಯಾತ್ರೆ ಮಾರ್ಗದಲ್ಲಿ ಪಕ್ಷದ ನಾಯಕ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಮತ್ತೊಂದೆಡೆ, ‘ಬಿಡದಿ ಟೌನ್‌ಶಿಪ್ ರೂವಾರಿಗಳಾದ ಬಿಜೆಪಿ ಮತ್ತು ಜೆಡಿಎಸ್‌ನವರ ಪ್ರಾಯಶ್ಚಿತ ಯಾತ್ರೆಗೆ ಹಾರ್ದಿಕ ಸುಸ್ವಾಗತ. ಪಾದಯಾತ್ರಿಗಳೇ, ಹೆಜ್ಜೆ ಹಾಕುವ ಮುನ್ನ ಸತ್ಯ ತಿಳಿಯಿರಿ’ ಎಂಬ ಬೃಹತ್ ಫ್ಲೆಕ್ಸ್ ಬಿಡದಿ ಪಟ್ಟಣದಲ್ಲಿ ಕಣ್ಣಿಗೆ ರಾಚುತ್ತಿದೆ. ಬಿಜೆಪಿ–ಜೆಡಿಎಸ್ ನಾಯಕರು ಮತ್ತು ಮಕ್ಕಳ ಎಐ ಚಿತ್ರಗಳಿರುವ ಈ ಫ್ಲೆಕ್ಸ್‌ಗಳನ್ನು ‘ರೆಡ್ ಜೋನ್‌ನಿಂದ ಸಂಕಷ್ಟಕ್ಕಿಡಾಗಿರುವ ಬಿಡದಿ ಟೌನ್‌ಶಿಪ್ ವ್ಯಾಪ್ತಿಯ ನೊಂದ ರೈತರು’ ಎಂಬ ಹೆಸರಿನಲ್ಲಿ ಪ್ರಕಟಣೆ ಮಾಡಲಾಗಿದೆ.
ಒಂದೂವರೆ ತಿಂಗಳ ಹಿಂದೆ ಯೋಜನಾ ಪ್ರದೇಶದ ಗ್ರಾಮಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಪಾದಯಾತ್ರೆ ನಡೆಸಿದಾಗಲೂ, ಅದಕ್ಕೆ ಟಾಂಗ್ ನೀಡುವಂತೆ ಪರವಾದ ಫ್ಲೆಕ್ಸ್ ಗಳನ್ನು ಕೆಲ ಗ್ರಾಮದಲ್ಲಿ ಅಳವಡಿಸಲಾಗಿತ್ತು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-15-1899542808