
ಕೆಎಂಎಫ್‌ನಲ್ಲಿ ₹100 ಕೋಟಿ ಭ್ರಷ್ಟಾಚಾರ: ಕೋಡಿಹಳ್ಳಿ ಚಂದ್ರಶೇಖರ್ ಆರೋಪ
ಬೆಂಗಳೂರು: 'ದೊಡ್ಡಬಳ್ಳಾಪುರ ಘಟಕ ಸೇರಿದಂತೆ ಕರ್ನಾಟಕ ಹಾಲು ಮಹಾಮಂಡಳದಲ್ಲಿ (ಕೆಎಂಎಫ್) ₹100 ಕೋಟಿ ಭ್ರಷ್ಟಾಚಾರ ನಡೆದಿದ್ದು, ಆರೋಪಿಗಳನ್ನು ಅಮಾನತು ಮಾಡಲು ಹಿಂದೇಟು ಹಾಕಲಾಗಿದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಅಧಿಕಾರಿಗಳು ₹50 ಕೋಟಿ ವ್ಯವಹಾರದ ಬಗ್ಗೆ ಮಾತನಾಡಿರುವ ಆಡಿಯೊ ಇದೆ’ ಎಂದು ಪೆನ್ ಡ್ರೈವ್ ಪ್ರದರ್ಶಿಸಿದರು.
ನಷ್ಟ ಭರಿಸಿ: ‘ಕೆಳಹಂತದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆದರೆ, ಹಿರಿಯ ಅಧಿಕಾರಿಗಳ ವಿರುದ್ಧ ಇದುವರೆಗೆ ಯಾವುದೇ ಕ್ರಮವಾಗಿಲ್ಲ. ಕೂಡಲೇ ಕ್ರಮ ಕೈಗೊಂಡು ಅವರಿಂದಲೇ ನಷ್ಟ ಭರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡಬೇಕು. ಹನೂರಿನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಸಹಾಯಧನ ಬಿಡುಗಡೆ ಮಾಡಿ: ‘ಹಸಿರು ಮನೆ ನಿರ್ಮಾಣ ಮಾಡಿರುವ ರೈತರಿಗೆ ತೋಟಗಾರಿಕೆ ಇಲಾಖೆ ₹35 ಕೋಟಿ ಸಹಾಯಧನ ಬಿಡುಗಡೆ ಮಾಡಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಮಗಳೂರು ಮತ್ತು ಗದಗ ಜಿಲ್ಲೆಯ ರೈತರು ಸಂಕಷ್ಟ ದಲ್ಲಿದ್ದಾರೆ’ ಎಂದು ಮುಖಂಡ ಶ್ರೀಕಾಂತ್ ಬೊಳ್ಳೇಪಲ್ಲಿ ಹೇಳಿದರು.
ಮುಖಂಡರಾದ ವೀರಭದ್ರ ಸ್ವಾಮಿ, ಬೈರೇಗೌಡ, ಮುತ್ತೇಗೌಡ ಪಾಲ್ಗೊಂಡಿದ್ದರು.
ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ‘ಕೆಎಂಎಫ್ ನೀಡುವ ಪಶು ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ. ಖಾಸಗಿ ಕಾರ್ಖಾನೆಗಳಿಂದ ಖರೀದಿಸಿದ ಕಾಂಕಂಬಿಯಲ್ಲಿ ಭ್ರಷ್ಟಾಚಾರ ನಡೆದಿದೆ. ರಾಜಾನುಕುಂಟೆ ಪಶು ಆಹಾರ ಕಾರ್ಖಾನೆಯಲ್ಲಿ ತಯಾರಿಸಿದ ಆಹಾರ ಸೇವಿಸಿದ ರಾಸುಗಳು ಅನಾರೋಗ್ಯದಿಂದ ಮೃತಪಟ್ಟಿವೆ’ ಎಂದು ದೂರಿದರು.
‘ಹೋಟೆಲ್ ಆಹಾರ ಸರಿಯಿಲ್ಲವೆಂದು ಮುಚ್ಚಿಸಲಾಗುತ್ತದೆ. ಆದರೆ, ಪಶು ಆಹಾರ ಪೂರೈಸುವ ಘಟಕಗಳ ಮೇಲೆ ದಾಳಿ ಮಾಡುವುದಿಲ್ಲವೇಕೆ’ ಎಂದು ಪ್ರಶ್ನಿಸಿದರು.
ಕೆಎಂಎಫ್ ಭ್ರಷ್ಟಾಚಾರದ ಕೂಪವಾಗಿದೆ. ಆಡಳಿತ ಮಂಡಳಿ ಇಲ್ಲದ್ದರಿಂದ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕು
ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-4-35398814