
ಹೇಮರಡ್ಡಿ ಮಲ್ಲಮ್ಮ ಬ್ಯಾಂಕ್ ₹6.62 ಕೋಟಿ ಹಣ ದುರ್ಬಳಕೆ: ಸಿಐಡಿ ತನಿಖೆ ಚುರುಕು
ಶಹಾಪುರ: ನಗರದ ಮಾತೋಶ್ರೀ ಹೇಮರಡ್ಡಿ ಮಲ್ಲಮ್ಮ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ₹6.62 ಕೋಟಿ ಹಣ ದುರ್ಬಳಕೆ ಪತ್ತೆಗೆ ಬೆನ್ನು ಹತ್ತಿರುವ ಸಿಐಡಿ ತಂಡದಿಂದ ತನಿಖೆ ಚುರಕುಗೊಂಡಿದೆ.
ವಿಚಾರಣೆ ಹಾಗೂ ತನಿಖೆಯ ವಿವಿಧ ಮಗ್ಗಲುಗಳಿಂದ ದಾಖಲೆಗಳನ್ನು ಗೋಪ್ಯವಾಗಿ ಕಲೆ ಹಾಕುವ ಕೆಲಸ ಸದ್ದುಗದ್ದಲವಿಲ್ಲದೆ ನಡೆದಿದೆ. ಅದಕ್ಕೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಸಾಥ್ ನೀಡುತ್ತಿರುವುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
‘ಈಗಾಗಲೇ ತನಿಖೆಯ ಭಾಗವಾಗಿ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯ ತೀವ್ರ ವಿಚಾರಣೆ ನಡೆದಿದೆ. ಅಲ್ಲದೆ ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳ ಸಂಗ್ರಹ ನಡೆದಿದೆ. ಪ್ರತಿಯೊಂದು ಅಂಶಗಳನ್ನು ಪರಿಗಣಿಸಬೇಕಾಗಿರುವುದರಿಂದ ಅವಸರ ಮಾಡುವಂತಿಲ್ಲ. ಮೊತ್ತೊಬ್ಬರ ಕಡೆಯಿಂದ ದಾಖಲೆಗಳನ್ನು ಪಡೆಯಬೇಕಾಗುತ್ತದೆ ಅವರು ಕಾಲಾವಕಾಶ ಕೇಳುವುದು ಸೇರಿದಂತೆ ತಡವಾಗುತ್ತಿದೆ’ ಎಂದು ಅಧಿಕಾರಿ ಒಬ್ಬರು ತಿಳಿಸಿದರು.
‘ಮೊದಲ ಹಂತವಾಗಿ ಸಿಬ್ಬಂದಿಯ ಮೇಲೆ ವಿಚಾರಣೆ ಕೇಂದ್ರಿಕರಿಸಲಾಗಿದ್ದು, ಉಳಿದಂತೆ ಬ್ಯಾಂಕಿನಲ್ಲಿ ನಿರ್ದೇಶಕರ ಹುದ್ದೆಯಲ್ಲಿರುವ ಸದಸ್ಯರು ತಾವು ನಿರ್ವಹಿಸಿದ ಸಾಲ ಮಂಜೂರಾತಿ, ಪತ್ರ ವ್ಯವಹಾರ, ಲೆಕ್ಕ ಪರಿಶೋಧನೆ ನಡೆಸಿದ ಸಿಬ್ಬಂದಿಯನ್ನು ನಂತರ ಬುಲಾವ್ ಮಾಡಲಾಗುವುದು. ಇವೆಲ್ಲದರ ನಡುವೆ ಈಗ ನಿರ್ದೇಶಕರ ಎದೆಬಡಿತ ಹೆಚ್ಚಾಗಿದೆ. ಯಾವ ಸಮಯದಲ್ಲಿ ಕರೆಯುತ್ತಾರೆ ಏನು ಉತ್ತರಿಸಬೇಕು. ಇಲ್ಲವೆ ವಕೀಲರ ಮೂಲಕ ತನಿಖೆಗೆ ಇಲ್ಲವೆ ವಿಚಾರಣೆಗೆ ಹಾಜರಾಗಲು ಅವಕಾಶ ಇರುವ ಬಗ್ಗೆಯು ಕಾನೂನು ತಜ್ಞರ ಬಳಿ ಬ್ಯಾಂಕ್‌ನ ಕೆಲ ನಿರ್ದೇಶಕರು ತಡಕಾಡುತ್ತಿದ್ದೇವೆ’ ಎಂದು ಬ್ಯಾಂಕ್‌ನ ನಿರ್ದೇಶಕರು ಒಬ್ಬರು ತಿಳಿಸಿದರು.
‘ಬ್ಯಾಂಕ್‌ನಲ್ಲಿ ಸುಮಾರು 268 ಜನ ಠೇವಣಿದಾರರು ಇದ್ದು ಅದರಲ್ಲಿ ₹10.40ಕೋಟಿ ಹಣ ಠೇವಣಿ ಇಟ್ಟಿರುವ ಬಗ್ಗೆ ಕೆಲ ಠೇವಣಿದಾರರು ನಮ್ಮ ಬಳಿ ಬಂದು ಅವಲತ್ತುಕೊಂಡಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಬ್ಯಾಂಕಿನ ಸಿಬ್ಬಂದಿಯ ಜತೆಯಲ್ಲಿ ಬ್ಯಾಂಕ್‌ನ ಎಲ್ಲಾ ಆಡಳಿತ ಮಂಡಳಿಯು ಸಮಾನ ಹೊಣೆಗಾರರು ಆಗಿದ್ದಾರೆ. ಕೆಲ ನಿರ್ದೇಶಕರು ಸ್ಥಳೀಯ ರಾಜಕೀಯ ಮುಖಂಡರು ಆಗಿದ್ದು ರಾಜಕೀಯ ಪ್ರಭಾವಿ ವ್ಯಕ್ತಿಗಳು ಇರುವುದು ಗಮನಾರ್ಹ. ಸಿಐಡಿ ತಂಡವು ಇದರ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ನಾವು ಈಗಾಗಲೇ ಬಡ ಠೇವಣಿದಾರರ ಜತೆಗೂಡಿ ತಕ್ಷಣ ಹಣ ವಾಪಸ್ಸು ನೀಡುವಂತೆ ಕೆಲ ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದೇವು. ಆಗ ಸಿಐಡಿ ತಂಡ ಆಗಮಿಸಿತು. ಸಿಐಡಿ ತಂಡದ ಮೇಲೆ ನಮಗೆ ಹೆಚ್ಚಿನ ವಿಶ್ವಾಸ ಹಾಗೂ ನಂಬಿಕೆ ಇದೆ. ಅದನ್ನು ಹುಸಿಗೊಳಿಸಬೇಡಿ’ ಎಂದು ಸಿಪಿಐ(ಎಂ) ಜಿಲ್ಲಾ ಘಟಕದ ಕಾರ್ಯದರ್ಶಿ ಚೆನ್ನಪ್ಪ ಆನೇಗುಂದಿ ರಾಜ್ಯ ಸಿಐಡಿ ತಂಡದ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-30-1358221024